ಮೂವತ್ತೆರಡು
ಅಂದು ಶಂಭು ಹೊರಗೆ ಹೋಗಿದ್ದ, ಬೊಂಬಾಯಿಯಲ್ಲಿದ್ದ ಅವನ ಗೆಳೆಯನೊಬ್ಬನಿಗೆ ಟ್ರಂಕ್ಕಾಲ್ ಮಾಡಿ ಅಲ್ಲಿನ ಪರಿಸ್ಥಿತಿಯನ್ನು ತಿಳಿಯಲು.
ಸುಹಾಸಿನಿ ಅವನ ವಾಪಸಾತಿಗೆ ಚಾತಕದಂತೆ ಕಾದಿದ್ದಳು. ಏಕೆಂದರೆ ಅವಳಿಗೆ ಗೊತ್ತಿತ್ತು – ಶಂಭು ಅಣ್ಣ ಖಚಿತವಾಗಿ ತನ್ನ ಪತಿಯ ವಿಷಯವನ್ನೂ ತಿಳಿದುಬರುವನೆಂದು.
ಶಂಭು ಬರುವ ಹೊತ್ತಿಗೆ ಭಾರತೀಪ್ರಿಯ ಮಲಗಿ ಆಗಿತ್ತು. ಟ್ರಂಕ್ಕಾಲ್ ಮಾಡಲು ಶಂಭು ಸುಮಾರು ದೂರ ನಡೆದು ಹೋಗಬೇಕಿತ್ತು.
ತಡವಾಗಿ ಬಂದ ಶಂಭುವಿನ ಮುಖದ ಮೇಲೆ ಮಿಶ್ರಭಾವನೆಗಳಿದ್ದುದನ್ನು ಸುಹಾಸಿನಿ ಗುರುತಿಸಿದಳು.
“ಎರಡು ಸುದ್ದಿಗಳು!” ಎಂದ ಶಂಭು ಒಳಗೆ ಬಂದು ಕುಳಿತು ಸುಹಾಸಿನಿ ನೀಡಿದ ಲೋಟದಿಂದ ನೀರನ್ನು ಕುಡಿದು.
“ನಾನು ಇಲ್ಲಿಂದ ಹೊರಡಬೇಕು. ಅಲ್ಲಿ ಯಾವುದೇ ತೊಂದರೆ ಇಲ್ಲವಂತೆ. ನಾನು ಮರಳುವುದು ಅನಿವಾರ್ಯ” ಎಂದ.
ಸುಹಾಸಿನಿ ಮತ್ತೊಂದು ಸುದ್ದಿ ಏನೆಂಬಂತೆ ಅವನನ್ನೇ ನೋಡಿದಳು. ಅವಳಿಗಾಗಲೇ ನಿರಾಸೆಯ ಬೆಟ್ಟವನ್ನು ಹತ್ತಿದಂತೆ ಆಗಿತ್ತು.
“ಗಜೂಮಾವನ್ನ ಜೈಲಿಗೆ ಹಾಕಿದ್ದಾರಂತೆ!” ಎಂದ ಮೆಲ್ಲನೆ.
ಸುಹಾಸಿನಿ ನಿರಾಶೆಯ ಬೆಟ್ಟದಿಂದ ಹತಾಶೆಯ ಪ್ರಪಾತಕ್ಕೆ ಜಾರಿಹೋಗಿದ್ದಳು.
ಅದೆಷ್ಟು ಹೊತ್ತೋ ತಿಳಿಯದು. ಅಣ್ಣ-ತಂಗಿಯರು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಕುಳಿತಿದ್ದರು. ಅವಳಿಂದ ಅವನಿಗೆ ಮುಂದೇನು ಎಂಬ ಪ್ರಶ್ನೆ ಹರಿದಿತ್ತು. ಅವನಿಂದ ಅವಳಿಗೆ ಹೆದರಬೇಡ, ನಾನಿದ್ದೇನೆ ಎಂಬ ಭರವಸೆ ಹಾದು ಹೋಗಿತ್ತು.
ಬೆಳಗಾದಾಗ ಸುಹಾಸಿನಿ ಎಂದಿನಂತೆ ತನ್ನ ದಿನಚರಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. ಸುಮ್ಮನಿರಲು ಭಾರತೀಪ್ರಿಯ ಬಿಡಬೇಕಲ್ಲ!
“ಇವನನ್ನು ಶಾಲೆಗೆ ಸೇರಿಸು ಸುಹಾಸಿನೀ!” ಎಂದ ಶಂಭು ಸುಹಾಸಿನಿ ಕೊಟ್ಟ ಕಾಫಿ, ಕೋಡುಬಳೆಗಳನ್ನು ಸವಿಯುತ್ತಾ.
ನಾಗಜ್ಜಿಯಿಂದ ಚಕ್ಕುಲಿ, ಕೋಡುಬಳೆಗಳನ್ನು ಚೆನ್ನಾಗಿ ಮಾಡಲು ಕಲಿತಿದ್ದಳು ಸುಹಾಸಿನಿ. ಶಂಭುವಂತೂ ಅವಳು ತಯಾರಿಸಿದ ಕಾಫಿ ಮತ್ತು ಕೋಡುಬಳೆಗಳನ್ನು ಬಹಳವೇ ಇಷ್ಟಪಡುತ್ತಿದ್ದ. ಹಾಗೆ ನೋಡಿದರೆ ಅವಳ ಪತಿ ಗಜಾನನನೂ ಅವಳು ಕಾಫಿಯೊಂದಿಗೆ ಕೋಡುಬಳೆ ಅಥವಾ ಚಕ್ಕುಲಿಗಳನ್ನು ನೀಡಿದಾಗ ನಕಾರ ಸೂಚಿಸದೇ ಸೇವಿಸಿದ್ದ. ಅಂದರೆ ಅವರಿಗೂ ತನ್ನ ಖಾದ್ಯಗಳೂ, ಕಾಫಿಯೂ ಇಷ್ಟವಾಗಿದ್ದಿರಬೇಕು! ಎಂದುಕೊಂಡಿದ್ದಳು ಸುಹಾಸಿನಿ ಅನೇಕ ಸಲ.
“ಹೌದು ಶಂಭು ಅಣ್ಣಾ! ಇವನಿಗೂ ಐದು ವರ್ಷ ತುಂಬಿತು. ಶಾಲೆ ತೆರೆದೊಡನೆ ಸೇರಿಸಬೇಕು” ಎಂದಳು ಸುಹಾಸಿನಿ ತಾನೂ ಕಾಫಿ ಕುಡಿಯುತ್ತಾ.
“ಇವನು ಶಾಲೆಗೆ ಹೋದರೆ ನಿನಗೂ ಸ್ವಲ್ಪ ಬಿಡುವು ಸಿಗುವುದು” ಎಂದ ಶಂಭು ಚೆಂಡಾಡುತ್ತಿದ್ದ ಭಾರತೀಪ್ರಿಯನನ್ನೇ ಗಮನಿಸುತ್ತಾ.
“ಹೂಂ” ಎಂದಳು ಸುಹಾಸಿನಿ, ಇದು ಯಾವ ವಿಷಯಕ್ಕೆ ಪೀಠಿಕೆ ಎಂದರಿವಾಗದೇ.
“ಹತ್ತಿರದ ಶಾಲೆಗೇ ಸೇರಿಸು. ನೀನು ಮನೆಯಲ್ಲಿಲ್ಲದಿದ್ದರೂ ಅವನೇ ಮನೆಯ ಬಳಿ ಬರುವಂತೆ ಇರಬೇಕು” ಎಂದ ಶಂಭು.
ಮತ್ತೆ “ಹೂಂ” ಎಂದು ಮಾತ್ರ ಹೇಳಬಲ್ಲವಳಾದಳು.
“ನಾಗಜ್ಜಿ ಇದ್ದ ಮನೆಗೆ ಬಂದಿರುವವರು ನಿನ್ನ ಜೊತೆ ಹೇಗಿದ್ದಾರೆ?” ಎಂದು ಕೇಳಿದ.
“ಚೆನ್ನಾಗಿದ್ದಾರೆ. ಅಂದರೆ ನಾನು ಮಾತಾಡಿಸಿದರೆ ಮಾತಾಡುತ್ತಾರೆ. ಅವರು ಇಲ್ಲಿಯ ಹತ್ತಿರದ ಶಾಲೆಯಲ್ಲಿ ಟೀಚರ್ ಆಗಿದ್ದಾರೆ” ಎಂದಳು.
“ಅಂದರೆ ನೀನು ಇವನನ್ನು ಯಾವ ಶಾಲೆಗೆ ಸೇರಿಸಬೇಕೆಂದಿರುವೆಯೋ ಆ ಶಾಲೆಯಲ್ಲೇ ಅವರು ಟೀಚರ್ರಾ?” ಎಂದ ಸಂತಸದಿಂದ.
“ಹೌದು. ಏಕಣ್ಣಾ?” ಎಂದಳು. “ಮೇರಿ ಟೀಚರ್ ಅಂತ ಅವರನ್ನು ಕರೆಯುತ್ತೇನೆ. ಒಳ್ಳೆಯ ಹೆಂಗಸು. ಒಬ್ಬರೇ ಇದ್ದಾರೆ. ಎಂದೂ ನನ್ನ ತಂಟೆಗೆ ಬಂದವರಲ್ಲ. ಎದುರಿಗೆ ಕಂಡಾಗ ಒಂದು ಮುಗುಳ್ನಗೆ ವಿನಿಮಯವಾಗುತ್ತದೆ ಅಷ್ಟೇ” ಎಂದು ವಿವರಿಸಿದಳು.
“ನನಗೆ ಸ್ವಲ್ಪ ಹೊರಗಡೆ ಕೆಲಸವಿದೆ. ಹೋಗಿ ಬರ್ತೀನಿ. ಸಂಜೆಯಾಗಬಹುದು ನಾನು ಬರುವುದು” ಎಂದು ಹೊರಗಡೆ ಹೋಗುತ್ತಿದ್ದವನು, “ಅಂದ ಹಾಗೆ ನಿನ್ನ ಹತ್ತನೇ ತರಗತಿ ಮಾರ್ಕ್ಸ್ಕಾರ್ಡ್ ಎತ್ತಿಟ್ಟಿರು” ಎಂದು ಹೇಳಿ ಹೊರಟುಹೋದ.
ಅವನ ಮಾತುಗಳಿಗೆ ತಾಳೆ ಹಾಕಲು ಯತ್ನಿಸುತ್ತಾ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಳು ಸುಹಾಸಿನಿ.
ಸಂಜೆ ದೀಪ ಹೊತ್ತಿಸಿದಳು. ಬಹಳ ದಿನಗಳಿಂದ ಮಾಡದಿದ್ದ ಒಂದು ಕೆಲಸ ಅಂದು ಸಂಜೆ ಮಾಡಿದ್ದಳು!
ದೇವರ ದೀಪ ಹಚ್ಚುತ್ತಿರುವಾಗ ಅವಳ ಹೃದಯದೊಳಗಿಂದ ನುಗ್ಗಿ ಬಂದಿತ್ತು ಅವಳ ಸುಪ್ತಮನಸ್ಸಿನಲ್ಲಿ ಅಡಗಿ ಕುಳಿತಿದ್ದ ಕಸ್ತೂರಿ ಟೀಚರ್ ಹೇಳಿಕೊಟ್ಟಿದ್ದ ದೇವರನಾಮಗಳು. ಒಂದಾದರೊಂದರಂತೆ ಅವಳಿಂದ ಹೊರಹೊಮ್ಮುತ್ತಿದ್ದವು. ಭಾರತೀಪ್ರಿಯ ಅಮ್ಮನ ಹಾಡುಗಳನ್ನು ಕೇಳುತ್ತಾ ಹಾಗೆಯೇ ಮಲಗಿಬಿಟ್ಟಿದ್ದ.
“ತಾಳುವಿಕೆಗಿಂತಲೂ ತಪವು ಇಲ್ಲ!”
“ಯಾರೇ ರಂಗನ ಯಾರೇ ಕೃಷ್ಣನ”
“ನಾರಾಯಣಾ ನಿನ್ನ ನಾಮದ ಸ್ಮರಣೆಯ”
“ದೇವಾದಿ ದೇವ ಶ್ರೀ ವಾಸುದೇವ”
“ರಾ ರಾ ರಾಜೀವ ಲೋಚನ ರಾಮಾ”
“ಬ್ರೋಚೇವಾ ರೆವರುರಾ?”
ಈ ಎಲ್ಲ ಹಾಡುಗಳನ್ನು ಹಾಡಿ ಮಗನೇನು ಮಾಡುತ್ತಿರುವನೆಂದು ನೋಡಲು ತಿರುಗಿದಾಗ ಅವನು ಮಲಗಿದ್ದುದು ಕಣ್ಣಿಗೆ ಬಿದ್ದಿತ್ತು.
“ಅರೆರೆ! ಪುಟ್ಟಾ! ಮಲಗಿಬಿಟ್ಟೆಯಾ?”ಎಂದು ಉದ್ಗರಿಸಿದವಳು ಅವನಿಗೆ ಊಟ ಮಾಡಿಸಲು ಅಡುಗೆಕೋಣೆಯ ಕಡೆಗೆ ನಡೆಯುತ್ತಿದ್ದಾಗ ಬಾಗಿಲ ಬಳಿ ಸದ್ದಾಗಿತ್ತು. ಬಾಗಿಲ ಕಡೆಗೆ ನೋಡಿದಾಗ ಅಲ್ಲಿ ಕಂಡಿದ್ದರು ಶಂಭು ಅಣ್ಣ ಮತ್ತು ಒಬ್ಬ ಮಹಿಳೆ.
“ಶಂಭು ಅಣ್ಣಾ!” ಎಂದು ಉದ್ಗಾರವೆತ್ತಿ ಲಗುಬಗೆಯಿಂದ ಚಾಪೆಯೊಂದನ್ನು ಹಾಸಿ “ಬನ್ನಿ ಕುಳಿತುಕೊಳ್ಳಿ” ಎಂದು ಆ ಮಹಿಳೆಯನ್ನು ಆಹ್ವಾನಿಸಿದಳು. ಅವರು ಕುಳಿತ ನಂತರ ಅಡುಗೆಕೋಣೆಗೆ ಹೋಗಿ ಕಾಫಿ ಮತ್ತು ಕೋಡುಬಳೆಗಳನ್ನು ಒಂದು ತಟ್ಟೆಯಲ್ಲಿ ಜೋಡಿಸಿಕೊಂಡು ಬಂದಳು. ಅವರಿಬ್ಬರ ಮುಂದಿಟ್ಟು ತಾನೂ ಅವರೆದುರಿಗೆ ಕುಳಿತಳು.
“ಸುಹಾಸಿನೀ, ಇವರು ಹರಿಣಾಕ್ಷಿ. ನಾನು ಮಹಾರಾಜಾಸ್ ಕಾಲೇಜಿನಲ್ಲಿ ಮೇಷ್ಟರಾಗಿದ್ದಾಗ ಇವರು ನನ್ನ ಸಹೋದ್ಯೋಗಿ ಆಗಿದ್ದರು”
“ನಮಸ್ಕಾರ!” ಎಂದು ಆದರದಿಂದ ಕೈ ಜೋಡಿಸಿದಳು ಸುಹಾಸಿನಿ.
“ನಮಸ್ಕಾರ! ನೀವು ತುಂಬಾ ಚೆನ್ನಾಗಿ ಹಾಡ್ತೀರಿ” ಎಂದಳು ಹರಿಣಾಕ್ಷಿ ಮೆಚ್ಚುಗೆಯಿಂದ. ಸುಹಾಸಿನಿ ಅವಳನ್ನೇ ದಿಟ್ಟಿಸಿ ನೋಡಿದಳು. ಸುಮಾರು ಮೂವತ್ತರ ವಯಸ್ಸು. ತೆಳ್ಳಗೆ ಉದ್ದವಾಗಿದ್ದಳು. ಬಾದಾಮಿ ಆಕಾರದ ಮುಖದಲ್ಲಿ ಕಣ್ಣುಗಳು ಲಕಲಕನೆ ಹೊಳೆಯುತ್ತಿದ್ದವು.
ಸುಹಾಸಿನಿ ನಗುತ್ತಾ “ಯಾವ ಹಾಡು ಕೇಳಿದಿರಿ?” ಎಂದಳು.
“ನಿಮಗೆ ಗೊತ್ತಾ? ನಿಮ್ಮದು ಬಹಳ ಬ್ಯೂಟಿಫುಲ್ ಸ್ಮೈಲ್ ಅಂತ?” ಎಂದು ಶ್ಲಾಘಿಸಿ, “ನಾವು ನಿಮ್ಮ ಮೊದಲ ಹಾಡು ಹಾಡುವಾಗಲೇ ಬಂದೆವು. ಇವನು ಒಳಗೆ ಹೋಗಲು ನೋಡಿದಾಗ ನಾನೇ ತಡೆದೆ” ಎಂದಳು ಹರಿಣಾಕ್ಷಿ.
ಅವಳ ದನಿಯಲ್ಲಿನ ಮೆಚ್ಚುಗೆ ಸುಹಾಸಿನಿಗೆ ಮುಜುಗರ ತಂದಿತ್ತು. ಆದರೆ ಸೌಜನ್ಯಕ್ಕೆ ಮುಗುಳ್ನಕ್ಕಳು.
ಈಕೆ ಶಂಭು ಅಣ್ಣನನ್ನು ‘ಇವನು’ ಎಂದಳು. ಅಂದರೆ ಇವರಿಬ್ಬರ ನಡುವೆ ಸಲಿಗೆ ಇದೆ!
“ನನ್ನ ಮೇಲೆ ದೂರು ಹೇಳುತ್ತಿರುವೆಯೋ? ಇಲ್ಲಾ ಬಂದ ಕೆಲಸ ಮಾಡುವೆಯೋ?” ಎಂದು ರೇಗಿಸಿದ ಶಂಭು.
“ಶಂಭೂ, ನೀನು ಹೇಳಿದ್ದನ್ನು ಕೇಳಿ ಏನು ಮಾಡಬೇಕು ಅಂತ ಯೋಚಿಸುತ್ತಲೇ ಇಲ್ಲಿಗೆ ಬಂದೆ. ಇವರ ಬಳಿ ಚಿನ್ನದ ಗಣಿ ಇದೆ. ಇದನ್ನೇ ಉಪಯೋಗಿಸಿಕೊಳ್ಳೋಣ” ಎಂದಳು ಮಾರ್ಮಿಕವಾಗಿ.
ಸುಹಾಸಿನಿ, ಶಂಭು ಇಬ್ಬರೂ ಹರಿಣಾಕ್ಷಿಯತ್ತ ಪ್ರಶ್ನಾರ್ಥಕವಾಗಿ ನೋಡಿದರು. ಹರಿಣಾಕ್ಷಿ ಮುಗುಳ್ನಕ್ಕು, ಸುಹಾಸಿನಿಯತ್ತ ತಿರುಗಿ, “ನೋಡಿ ಸುಹಾಸಿನಿ! ನಿಮಗೆ ಕೆಲಸ ಕೊಡಿಸೆಂದು ಇವನು ದುಂಬಾಲು ಬಿದ್ದಿದ್ದಾನೆ. ಏನು ಕೆಲಸ ಕೊಡಿಸೋದು ಎಂದು ಯೋಚನೆ ಮಾಡುತ್ತಿದ್ದೆ. ಆದರೆ ಯಾವ ಯೋಚನೆಯೂ ಬೇಡವೆಂದು ನಿಮ್ಮ ಹಾಡುಗಳು ನನಗೆ ಹೇಳಿದವು” ಎಂದಳು.
ಸುಹಾಸಿನಿ ಅಣ್ಣನನ್ನೂ, ಹರಿಣಾಕ್ಷಿಯನ್ನೂ ನೋಡಿದಳು. ಅವಳಿಗೆ ಈ ಸಂಭಾಷಣೆಯ ಸಂಪೂರ್ಣ ಅರ್ಥ ಇನ್ನೂ ಆಗಿರಲಿಲ್ಲ.
(ಸಶೇಷ)