ನಲವತ್ತನಾಲ್ಕು
ಪಾಪ ಸುಹಾಸಿನಿ! ಬದುಕಿನ ಮೇಲೆ ಮಹದಾಶೆ ಇಟ್ಟುಕೊಂಡವಳು. ಎಲ್ಲ ಮನುಷ್ಯರಂತೆ ಅವಳಿಗೂ ಒಂದು ಬಲಹೀನ ಕ್ಷಣದಲ್ಲಿ ಸಾಯುವ ಆಸೆ ಉಂಟಾಗಿತ್ತು. ಆದರೆ ಈಗಲ್ಲ. ಎದ್ದಳು. ಆ ಹಾಳೆಯನ್ನು ಜೀವರಕ್ಷಕನೆಂಬಂತೆ ಎದೆಗವಚಿಕೊಂಡು ಬಾಗಿಲಿಗೆ ಬಂದಳು. ರೈಲು ಯಾವುದೋ ನಿಲ್ದಾಣದಲ್ಲಿ ನಿಂತಿತು. ಇಳಿದುಬಿಟ್ಟಳು.
ಎದುರು ದಿಕ್ಕಿನಿಂದ ಬಂದ ಮತ್ತೊಂದು ರೈಲುಗಾಡಿ ಹತ್ತಿ ಮೈಸೂರು ತಲುಪಿದಳು. ಒಂದು ವೇಳೆ ಟಿಕೆಟ್ ಕೇಳಲು ಅಧಿಕಾರಿ ಯಾರಾದರೂ ಬಂದರೆ ಏನಾದರೊಂದು ನೆಪ ಹೇಳುವ ಬದಲು ಸತ್ಯವನ್ನು ಹೇಳಿ, ಟಿಕೆಟ್ ಹಣದೊಂದಿಗೆ ದಂಡವನ್ನೂ ತಂದುಕೊಡುವೆನೆಂದು ಹೇಳಬೇಕು ಎಂದುಕೊಂಡಳು. ಆದರೆ ಪುಣ್ಯವಶಾತ್ ಯಾರೂ ಅವಳನ್ನು ತಡೆಯಲಿಲ್ಲ.
ಮತ್ತೆ ದಾರಿಯುದ್ದಕ್ಕೂ ನಡೆದು ಮನೆ ತಲುಪಿದಳು. ಮನದಲ್ಲಿ ನೂರಾರು ನಿರ್ಧಾರಗಳು, ಆಲೋಚನೆಗಳು. ಏನು ಮಾಡಬೇಕು ತಾನೀಗ? ಪತಿ ಸಿಡುಕಿದರೆ ನಗುತ್ತಾ ಸಹಿಸಿಕೊಳ್ಳುವುದು, ಅವರಿಗೆ ತನ್ನ ನಗೆ ಇಷ್ಟವಿಲ್ಲದಿದ್ದರೆ ಅವರೆದುರಿಗೆ ನಗದೇ ಇದ್ದರಾಯಿತು.
ಇನ್ನು ಮಗ, ಅವನ ವಯಸ್ಸಾದರೂ ಎಷ್ಟು? ಹನ್ನೊಂದು ವರ್ಷಗಳು. ಹೇಳಿದರೆ ಕೇಳಿಯಾನು…
ಬಾಗಿಲ ಚಿಲಕ ಹಾಕಿರಲಿಲ್ಲ. ತಾನು ಹೋಗುವಾಗ ಹೇಗೆ ಮುಚ್ಚಿದ್ದಳೋ ಹಾಗೆಯೇ ಇತ್ತು.
ಒಳಗೆ ಹೋದಳು. ಗಜಾನನ ಎಚ್ಚರವಾಗಿಯೇ ಇದ್ದ.
“ಸುಹಾಸಿನಿ ಬಂದೆಯಾ? ನನ್ನನ್ನು ಕ್ಷಮಿಸುವೆಯಾ? ಏಕೋ ಬಹಳ ಕೆಟ್ಟದಾಗಿ ಆಡಿದೆ ಎಂದು ನೀನು ಹೊರಟಮೇಲೆ ಪಶ್ಚಾತ್ತಾಪ ಆಯಿತು. ನನ್ನನ್ನು ದಯವಿಟ್ಟು ಕ್ಷಮಿಸು” ಎಂದ ಕ್ಷಮಾಯಾಚನೆಯ ಸ್ವರದಲ್ಲಿ.
ಅವಳಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಸುಮ್ಮನೆ ಹೋಗಿ ಹಜಾರದಲ್ಲಿ ಮಲಗಿಕೊಂಡಳು.
ಮರುದಿನ ಎಂದಿನಂತೆ ಬೆಳಗಾಗಿತ್ತು. ವಿಚಿತ್ರವೆಂದರೆ ಗಜಾನನ ಬಹಳವೇ ಉಲ್ಲಾಸದಿಂದಿದ್ದ. ಅವನಿಗೆ ಕಾಫಿ ನೀಡಿದಳು.
ಅವನ ಮೊಗದಲ್ಲಿ ನಗೆ ಅರಳಿತ್ತು. ಮಗನನ್ನು ಕೂಗಿ ಕರೆದಳು. ಅವನು ಬಂದ. ಅವನ ವದನದ ಮೇಲೆ ಕೂಡಾ ತಪ್ಪಿತಸ್ಥ ಮನೋಭಾವವಿತ್ತು.
ಅವನ ಕೆನ್ನೆ ನೇವರಿಸಿ, ಕಾಫಿ ನೀಡಿದಳು. ತಾಯಿಯ ಮುಖದ ಮೇಲಿದ್ದ ಕಿರುನಗೆ ಭಾರತೀಪ್ರಿಯನಲ್ಲಿ ಧೈರ್ಯ ತುಂಬಿತು.
ಸುಹಾಸಿನಿಯ ತಲೆಯಲ್ಲಿ ಆ ‘ಮಂಕುತಿಮ್ಮ’ನೇ ಓಡುತ್ತಿದ್ದ. ಅಬ್ಬಾ! ಅದೆಷ್ಟು ಶಕ್ತಿ ಇದೆ ಅದರ ಪದ್ಯಗಳಲ್ಲಿ. ತಾನು ಓದಿದ ಒಂದು ಪದ್ಯವೇ, ಸಾಯುವುದರಲ್ಲಿದ್ದ ತನಗೆ ಮತ್ತೆ ಬದುಕುವ ಶಕ್ತಿ ನೀಡಿದೆ. ಅಂದರೆ ನೀರಿನಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿಯ ಆಸರೆ ಎನ್ನುವ ಹಾಗೆ ತನಗೆ ಅವಲಂಬನವಾಗಿ ಆ ಪದ್ಯಗಳ ಹಾಳೆ ದೊರಕಿದೆ. ಇದಲ್ಲವೇ ದೈವನಿಯಮ?
ಶಂಭು ಅಣ್ಣ ಹೇಳಿದ್ದ ಮಾತು ನೆನಪಿಗೆ ಬಂದಿತ್ತು. ಕೈಗಳು ಯಾಂತ್ರಿಕವಾಗಿ ಪಾತ್ರೆಗಳನ್ನು ತೊಳೆಯುತ್ತಿದ್ದರೂ, ಅಡುಗೆ ಮಾಡುವಾಗಲೂ ಅಣ್ಣನ ಜ್ಞಾಪಕ! ಅವನ ಮಾತುಗಳ ನೆನಪು!!
ಶ್ರೀಕೃಷ್ಣ ಇನ್ನೂ ರಥದಲ್ಲಿ ಕುಳಿತೇ ಇರುವಾಗ ತಾನು ಹೇಗೆ ಸಾಯುವ ಆಲೋಚನೆ ಮಾಡಿದಳು? ಇದು ತಪ್ಪು. ಇದೇ ಕೊನೆಯ ಸಲ. ಇನ್ನೆಂದೂ ಈ ಆಲೋಚನೆ ತನಗೆ ಬರಕೂಡದು.
ಭಗವದ್ಗೀತೆಯಲ್ಲಿನ ಒಂದು ಶ್ಲೋಕದ ಸಾರಾಂಶ ಹೇಳಿಕೊಂಡಳು.
ಯಾರ ದೇಹಕ್ಕೆ ಶೀತ-ಉಷ್ಣಗಳ ವ್ಯತ್ಯಾಸ ತಿಳಿಯುವುದಿಲ್ಲವೋ, ಯಾರ ಮನಸ್ಸಿಗೆ ಸುಖ-ದುಃಖಗಳು ಬೇರೆ ಬೇರೆ ಅಲ್ಲವೋ, ಯಾರ ಬುದ್ಧಿಗೆ ಮಾನ-ಅಪಮಾನಗಳು ಒಂದೇ ಎನ್ನಿಸುವುದೋ ಆ ಮನುಷ್ಯ ಸದಾ ನನ್ನನ್ನೇ ನೆನೆಯುತ್ತಿರುತ್ತಾನೆ; ನನ್ನ ಅಧೀನದಲ್ಲಿರುತ್ತಾನೆ; ನಾನು ಅವನಿಗೆ / ಅವಳಿಗೆ ಕಾವಲಾಗಿರುತ್ತೇನೆ.
ಅಬ್ಬಾ! ಏನಾಗಿತ್ತ ತನ್ನ ಬುದ್ಧಿಗೆ? ಹಾಳು ಮನಸ್ಸು! ಅದು ಹೇಳಿದ ಹಾಗೆ ಬುದ್ಧಿ ಕೇಳಿದ್ದಕ್ಕೇ ತಾನು ಸಾಯಲು ಹೊರಟಿದ್ದುದು. ಇನ್ನೆಂದೂ ಯಾವ ಪ್ರಮಾಣದ ಕಷ್ಟ ಬಂದರೂ ತಾನು ಸಾಯಲು ಯತ್ನಿಸುವುದಿಲ್ಲ, ಇದು ಸತ್ಯ ಎಂದು ತನಗೆ ತಾನೇ ವಚನ ನೀಡಿಕೊಂಡಳು.
ದಿನಗಳು ಓಡಿದ್ದವು.
ಅವಳಿಗೆ ಅಂದು ಒಂದು ಕೆಟ್ಟ ಸುದ್ದಿ… ಅಲ್ಲಲ್ಲ ಎರಡು ಕೆಟ್ಟ ಸುದ್ದಿಗಳು ದೊರೆತಿದ್ದವು.
ಅಂದು ಅವಳು ತಲೆನೋವೆಂದು ಮನೆಗೆ ಇದ್ದಕ್ಕಿದ್ದಂತೆ ಬಂದಿಳಿದಾಗ ಮನೆಯಲ್ಲಿ ಭಾರತೀಪ್ರಿಯ ಇದ್ದಿದ್ದು ಕಂಡು ಅಚ್ಚರಿಗೊಂಡಳು. ಅವನು ಅವಳನ್ನು ನೋಡಿ ತಲೆ ತಗ್ಗಿಸಿಕೊಂಡು ದಡದಡನೆ ಹೊರಗೆ ಹೊರಟುಹೋಗಿದ್ದ.
ಪತಿಯನ್ನು ಕಂಡಾಗ ಮಗ ಬಂದಿದ್ದೇಕೆಂದು ಅರ್ಥವಾಗಿತ್ತು. ದಿನವೂ ಮಗನಿಂದ ಮದ್ಯವನ್ನು ತರಿಸಿ ಕುಡಿಯುತ್ತಿದ್ದ. ಅದಕ್ಕೆ ಬೇಕಾದ ಹಣವನ್ನು ಕೂಡ ಸುಹಾಸಿನಿಯ ಆಪದ್ಧನದ ಗಂಟಿನಿಂದಲೇ ತೆಗೆದುಕೊಂಡು ಹೋಗುತ್ತಿದ್ದ.
ಪತಿಯನ್ನು ತಿದ್ದಲು ಇನ್ನು ಸಾಧ್ಯವಿಲ್ಲ, ಮಗನನ್ನು ತಿದ್ದಲು ಇನ್ನೂ ಸಾಧ್ಯವಿದೆಯೇ ಎಂದು ಆಲೋಚಿಸಿ ಹೈರಾಣಾಗುತ್ತಿದ್ದಳು. ಆದರೂ ಸಮಯ ಸಿಕ್ಕಾಗಲೆಲ್ಲಾ ಮಗನಿಗೆ ದುಷ್ಚಟವಿರುವ ಗೆಳೆಯರಿಂದ ದೂರವಿರಲು ತಿಳಿಹೇಳುತ್ತಿದ್ದಳು. ಅಂದೇ ಕೊನೆ. ಮತ್ತೆ ಮನೆಗೆ ಗೆಳೆಯರನ್ನು ಕರೆತರಲಿಲ್ಲ ಭಾರತೀಪ್ರಿಯ.
ಮತ್ತೊಂದು ದಿನ ಶಾಲೆಯಿಂದ ನೇರವಾಗಿ ಪುಸ್ತಕದ ಅಂಗಡಿಗೆ ಹೋದಳು. “ಬನ್ನಿಯಮ್ಮಾ, ಯಾವ ಪುಸ್ತಕ ಬೇಕಿತ್ತು?” ಎಂದು ಕೇಳಿದ ಅಂಗಡಿಯಾತ.
ಹೇಗೆ ಹೇಳುವುದೆಂದು ಸಂಕೋಚ ಪಟ್ಟಳು. ಅವಳಿಗೆ ಪುಸ್ತಕದ ಹೆಸರು ಗೊತ್ತಿರಲಿಲ್ಲ. ನಂತರ ಅಂಗಡಿಯಾತನಿಗೆ ತಿಳಿಯದಿದ್ದರೆ ಬೇರೆ ಯಾರಿಗೆ ತಿಳಿಯಬಹುದೆಂದು ಅಂದುಕೊಂಡು, “ಒಂದು ಪುಸ್ತಕದಲ್ಲಿ ನಾಲ್ಕು ಸಾಲಿನ ಪದ್ಯಗಳಿವೆ. ಪ್ರತಿ ಪದ್ಯದ ಕೊನೆಯಲ್ಲಿ ‘ಮಂಕುತಿಮ್ಮ’ ಎಂದು ಬರೆದಿದೆ” ಎಂದಳು ತಾನು ಹೇಳಿದ್ದು ಅಂಗಡಿಯಾತನಿಗೆ ಅರ್ಥವಾಗುವುದೋ ಇಲ್ಲವೋ ಎಂದುಕೊಂಡು.
“ಓ.. ಮಂಕುತಿಮ್ಮನ ಕಗ್ಗ…!” ಎಂದು ಉದ್ಗರಿಸಿ “ತಗೊಳ್ಳಿ” ಎಂದು ಹೇಳಿ ಪುಸ್ತಕವನ್ನು ತೆಗೆದುಕೊಟ್ಟ.
ಸುಹಾಸಿನಿ ಪುಸ್ತಕದ ಮುಖಪುಟದಲ್ಲಿ ಸಂಪಾದಕ ಡಿ.ವಿ. ಗುಂಡಪ್ಪ ಎಂಬುದನ್ನು ಓದಿ, ಹಣ ನೀಡಿ ಮನೆಗೆ ಪುಸ್ತಕ ತಂದಳು.
ನಿಜಕ್ಕೂ ಇದು ಭಗವದ್ಗೀತೆ! ಎಂದುಕೊಂಡಳು ಪ್ರತಿ ಪದ್ಯವನ್ನೂ (ಕಗ್ಗ ಎಂದಿದ್ದಾರೆ ಸಂಪಾದಕರು ಎಂದುಕೊಂಡಳು) ಮನನವಾಗುವಂತೆ ಓದಿದಳು.
ಶಂಭು ಅಣ್ಣ ಇರಬೇಕಿತ್ತು. ಅವನೂ ಇದನ್ನು ಬಹಳವೇ ಮೆಚ್ಚಿಕೊಳ್ಳುತ್ತಿದ್ದ. ಆಗ ತಾನೇ ಮುಗಿದಿದ್ದ ಪ್ರಪಂಚದ ಎರಡನೆಯ ಮಹಾಯುದ್ಧದ ದುಷ್ಪರಿಣಾಮವನ್ನು ಬಿಂಬಿಸುವ ಪದ್ಯಗಳನ್ನು ಓದಿ ಮನಸ್ಸಿಗೆ ಯುದ್ಧ ತರುವ ಕೆಟ್ಟ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬಲ್ಲವಳಾದಳು.
ಏನು ಪ್ರಪಂಚವಿದು!
ಮುತ್ತಿರುವುದಿಂದು ಭೂಮಿಯನೊಂದು
ಹೀಗೇ ಅವಳು ತನ್ನ ಬದುಕಿಗೆ ಮಂಕುತಿಮ್ಮನ ಕಗ್ಗದ ಪದ್ಯಗಳನ್ನು ಅಳವಡಿಸಿಕೊಂಡು ಸಂದರ್ಭಕ್ಕೆ ತಕ್ಕಂತೆ ಹಾಡಿಕೊಳ್ಳುತ್ತಿದ್ದಳು. ಅಚ್ಚರಿಯೆಂದರೆ ಅವಳಿಗೆ ಅದು ಅಗಾಧವಾದ ಮನೋಬಲವನ್ನು ನೀಡುತ್ತಿತ್ತು.
ಅವಳ ದೈನಂದಿನ ಪಾಡಿಗಂತೂ ಈ ಪದ್ಯ ಬಹಳವೇ ಚೆನ್ನಾಗಿ ಹೊಂದಿಕೊಂಡಿತ್ತು.
ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ|
ಸೃಷ್ಟಿಯಲಿ ತತ್ತ್ವವೆಲ್ಲಿಯೊ ಬೆದಕಿ ನರನು||
ಕಷ್ಟಪಡುತಿರಲೆನುವುದೇ ಬ್ರಹ್ಮವಿಧಿಯೇನೊ!|
ಅಷ್ಟೆ ನಮ್ಮಯ ಪಾಡು? – ಮಂಕುತಿಮ್ಮ||
ಆ ಪದ್ಯವನ್ನೊಮ್ಮೆ ಹೇಳಿಕೊಂಡೊಡನೆ ಅವಳ ದುಗುಡ ಅವಳನ್ನು ಬಿಟ್ಟೋಡುತ್ತಿತ್ತು.
ಗಜಾನನನೂ ಸೌಮ್ಯನಾಗಿದ್ದ. ಅವನ ಕುಡಿತವು ಅವಳೆದುರಿಗೇ ಮುಂದುವರೆದಿತ್ತು. ನೋಡಿಯೂ ನೋಡದಂತೆ, ಸುಮ್ಮನಿರದೇ ಬೇರೇನೂ ಮಾಡಲು ಅವಳಿಗೆ ಸಾಧ್ಯವಾಗಲಿಲ್ಲ. ಅವನ ಸೇವೆಯನ್ನು ಮಾಡುವುದನ್ನು ಮಾತ್ರ ಮುಂದುವರಿಸಿದ್ದಳು. ಮಾನಸಿಕವಾಗಿ ಗಟ್ಟಿಯಾಗಿಯೇ ಇದ್ದ ಗಜಾನನ ಶಾರೀರಿಕವಾಗಿ ಬಲಹೀನನಾಗುತ್ತಾ ಹೋದ.
“ಸುಹಾಸಿನೀ! ಸ್ವಾತಂತ್ರ್ಯ ಬರಲು ಹೆಚ್ಚು ದಿನಗಳು ಬೇಕಿಲ್ಲ. ಗಾಂಧಿ ಏನೋ ಮೋಡಿ ಮಾಡುತ್ತಿರುವ ಹಾಗಿದೆ” ಎಂದಿದ್ದ ಒಮ್ಮೆ.
“ದೇಶದ ಬಿಡುಗಡೆಗೆ ದಿನಾಂಕ ಗೊತ್ತು ಮಾಡಿದ್ದಾರೆ ಸುಹಾಸಿನೀ” ಎಂದಿದ್ದ ಮತ್ತೊಂದು ದಿನ.
“ಛೇ! ದೇಶ ವಿಭಜನೆ ಮಾಡಿ ಸ್ವಾತಂತ್ರ್ಯ ಘೋಷಿಸುವರಂತೆ” ಎಂದಿದ್ದ ಇನ್ನೂ ಒಂದು ದಿನ.
ಅದಾಗಿ ಕೆಲವು ತಿಂಗಳಲ್ಲಿ ದೇಶದ ಹವಾಮಾನ ಬದಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬರುವ ದಿನ ಹತ್ತಿರವಾಗುವಂತೆ ತೋರಿತ್ತು.
ಆದರೆ ಗಜಾನನನ ಆರೋಗ್ಯ ಕ್ಷೀಣಿಸುತ್ತಾ ಹೋಗಿತ್ತು.
ಭಾರತೀಪ್ರಿಯನೂ ತಂದೆಯ ಅನಾರೋಗ್ಯ ಉಲ್ಬಣವಾಗಿರುವುದನ್ನು ಕಂಡು ತಾಯಿಗೆ ಎಲ್ಲ ರೀತಿಯಲ್ಲಿಯೂ ಸಹಾಯ ಮಾಡತೊಡಗಿದ್ದ. ಹಠದಿಂದ ಅವನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು ತಾಯಿ, ಮಗ ಸೇರಿಕೊಂಡು. ಆಸ್ಪತ್ರೆಯಲ್ಲಿ ಅವನನ್ನು ಒಳರೋಗಿಯಾಗಿ ಸೇರಿಸಿಕೊಂಡಿದ್ದರು. ದಿನಗಳು ಕಳೆಯುತ್ತಿದ್ದಂತೆ ಗಜಾನನನ ಪರಿಸ್ಥಿತಿ ಘೋರವಾಗತೊಡಗಿತ್ತು. ವಿಲವಿಲನೆ ಒದ್ದಾಡುತ್ತಿದ್ದ. ಆದರೆ ಮೆದುಳು ಮಾತ್ರ ಚುರುಕಾಗಿತ್ತು. “ಪಾಕಿಸ್ತಾನ ಅಂತೆ ಹೊಸ ದೇಶದ ಹೆಸರು. ಅವರ ಧ್ವಜವನ್ನು ಬ್ರಿಟಿಷರು ಒಪ್ಪಿದ್ದಾರಂತೆ” ಎಂದ. “ಹದಿನಾಲ್ಕಕ್ಕೆ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ, ನಮಗೆ ಹದಿನೈದು!” ಎಂದಿದ್ದ ಸಂಭ್ರಮದಿಂದ.
ಆಸ್ಪತ್ರೆಯಲ್ಲಿ ರೇಡಿಯೋ, ವೃತ್ತಪತ್ರಿಕೆಗಳು ಸುದ್ದಿಯನ್ನು ತಿಳಿಸುತ್ತಿದ್ದವು.
ಡಾಕ್ಟರು ಸುಹಾಸಿನಿಯನ್ನು ಕರೆದು, “ಮನೆಗೆ ಕರೆದೊಯ್ದುಬಿಡಿ. ಇನ್ನು ಯಾವ ಚಿಕಿತ್ಸೆಯೂ ಸಾಧ್ಯವಿಲ್ಲ” ಎಂದು ಕೈಚೆಲ್ಲಿದ್ದರು.
ಮನೆಗೆ ಕರೆತಂದಿದ್ದರು ಗಜಾನನನನ್ನು. “ಸುಹಾಸಿನೀ, ರೇಡಿಯೋ ಆನ್ ಆಗಿರಲಿ. ಭಾರತಕ್ಕೆ ಸ್ವಾತಂತ್ರ್ಯ ಇಂದು ರಾತ್ರಿ ಹನ್ನೆರಡು ಗಂಟೆಗೆ!” ಎಂದ ಸಡಗರದಿಂದ. ಅವನ ಧ್ವನಿಯಲ್ಲಿ ಅವನು ಮೊದಲಿನಿಂದ ಮಾಡಿದ ಹೋರಾಟದ ಬಗ್ಗೆ ಹೆಮ್ಮೆ ಎದ್ದು ಕಾಣಿಸುತ್ತಿತ್ತು.
ಜವಾಹರಲಾಲ್ ನೆಹರೂ ಅವರ ಸ್ವರದಲ್ಲಿ “ಲಾಂಗ್ ಯಿಯರ್ಸ್ ಎಗೋ ವಿ ಮೇಡ್ ಎ ಟ್ರಿಸ್ಟ್ ವಿತ್ ಡೆಸ್ಟಿನಿ, ಆಂಡ್ ನೌ ದಿ ಟೈಮ್ ಕಮ್ಸ್ ವ್ಹೆನ್ ವಿ ಷಲ್ ರಿಡೀಮ್ ಅವರ್ ಪ್ಲೆಡ್ಜ್, ನಾಟ್ ವ್ಹೋಲ್ಲೀ ಆರ್ ಇನ್ ಫುಲ್ ಮೆಷರ್, ಬಟ್ ವೆರಿ ಸಬ್ಸ್ಟ್ಯಾನ್ಷಿಯಲೀ. ಅಟ್ ದಿ ಸ್ಟ್ರೋಕ್ ಆಫ್ ಮಿಡ್ನೈಟ್ ಅವರ್, ವ್ಹೆನ್ ದಿ ವರ್ಲ್ಡ್ ಸ್ಲೀಪ್ಸ್, ಇಂಡಿಯಾ ವಿಲ್ ಅವೇಕ್ ಟು ಲೈಫ್ ಆಂಡ್ ಫ್ರೀಡಂ…” ಕೇಳಿ ಬರುತ್ತಿತ್ತು.
ಆ ಕ್ಷಣದಲ್ಲಿ ಗಜಾನನನ ಲೈಫು ಹೋಗಿತ್ತು. ಸುಹಾಸಿನಿಗೆ ಫ್ರೀಡಂ ದೊರಕಿತ್ತು.
(ಸಶೇಷ)