ನಲವತ್ತೇಳು
ಸಂಜೆ ಏಳಾದರೂ ಭಾರತೀಪ್ರಿಯ ಮನೆಗೆ ಬರಲಿಲ್ಲ. ಸುಹಾಸಿನಿ ಹೆದರಲಿಲ್ಲ. ಎಲ್ಲಿಯೋ ಗೆಳೆಯರೊಂದಿಗೆ ಸುತ್ತುತ್ತಿರಬೇಕು ಎಂದುಕೊಂಡಳು. ಸುಮಾರು ಹತ್ತುಗಂಟೆಗೆ ಅವನು ಬಂದು ಅವನು ತಂಗಿದ್ದ ಮನೆಗೆ ಹೋಗಿದ್ದು ತಿಳಿಯಿತು.
“ಊಟ ಮಾಡುವೆಯಾ?” ಎಂದಳು ರೂಮಿನ ಕಿಟಕಿಯ ಮೇಲೆ ಬಡಿದು.
“ನನ್ನ ಊಟ ಆಯ್ತು. ಸಿನಿಮಾಗೆ ಹೋಗಿದ್ದೆ. ಹಾಗೇ ಹೊಟೇಲಿನಲ್ಲಿ ತಿಂದೆವು” ಎಂದ. ಅವನು ಮಲಗಿ ಮಾತಾಡುತ್ತಿರುವನೆಂದು ಅವನ ಸ್ವರ ಬರುತ್ತಿದ್ದ ರೀತಿಯಿಂದಲೇ ತಿಳಿದುಕೊಂಡಳು.
“ಯಾವ ಸಿನಿಮಾ ಮಗೂ?” ಎಂದು ಕೇಳಿದಳು.
“ಬೇಡರ ಕಣ್ಣಪ್ಪ ಅಂತ ಅಮ್ಮಾ. ಯಾರೋ ಹೊಸನಟ. ರಾಜಕುಮಾರ್ ಅಂತೆ. ಕಣ್ಣಪ್ಪನಾಗಿ ಅಭಿನಯ ಬಹಳ ಚೆನ್ನಾಗಿದೆ” ಎಂದ ಉತ್ಸಾಹದ ಸ್ವರದಲ್ಲಿ.
ಅವಳೆಂದೂ ಸಿನಿಮಾಗೆ ಹೋದ ನೆನಪಿಲ್ಲ. ಇತ್ತೀಚೆಗೆ ಅವಳು ಸ್ಟಾಫ್‍ರೂಮಿನಲ್ಲಿ ಕುಳಿತಿದ್ದಾಗ ಉಳಿದ ಟೀಚರುಗಳು, ಮೇಷ್ಟರುಗಳು ಮಾತಾಡಿಕೊಳ್ಳುವುದಿತ್ತು.
‘ಎರಡುವರ್ಷಗಳ ಹಿಂದೆ ಹರಿಣಿ ನಟಿಸಿದ ಜಗನ್ಮೋಹಿನಿ ನೋಡಿದೆ. ಬಹಳ ಚೆನ್ನಾಗಿದೆ ಚಿತ್ರ!’
‘ಹೊನ್ನಪ್ಪ ಭಾಗವತರ ಗುಣಸಾಗರಿ, ಕೆಂಪರಾಜ ಅರಸರ ರಾಜಾ ವಿಕ್ರಮ ಕೂಡ ಒಳ್ಳೆಯ ಸಿನಿಮಾ’
ಹೀಗೇ ಹಲವಾರು ಮಾತುಗಳನ್ನು ಕೇಳಿದ್ದಳು. ಅವಳಿಗೇಕೋ ಸಿನಿಮಾಗಳಿಗೆ ಹೋಗುವ ಅವಕಾಶವೇ ಬಂದಿರಲಿಲ್ಲ. ಹಾಗೆ ನೋಡಿದರೆ ಹೋಗಬೇಕೆಂದೂ ಅನ್ನಿಸಿರಲಿಲ್ಲ.
“ಅಮ್ಮಾ, ನನಗೆ ಇನ್ನೊಂದು ಸಲ ನೋಡಬೇಕೆನ್ನಿಸಿದೆ. ನಾನೂ, ನೀನೂ ಹೋಗೋಣ” ಎಂದ ಒಳಗಿನಿಂದಲೇ.
“ಸರಿ!” ಎಂದು ಅಲ್ಲಿಂದ ಹೊರಟು ತನ್ನ ಮನೆಗೆ ಬಂದುಬಿಟ್ಟಳು.
ಅವನು ಒಳಗೆ, ತಾನು ಹೊರಗೆ ನಿಂತು ಪಂಕಜಳ ವಿಷಯ ಕೇಳಿದರೆ ಚೆನ್ನಾಗಿರುವುದಿಲ್ಲ ಎಂದುಕೊಂಡು ಮಲಗಿದಳು.
ಮರುದಿನ ಬೆಳಿಗ್ಗೆ ಯಥಾಪ್ರಕಾರ ಭಾರತೀಪ್ರಿಯ ಕೆಲಸಕ್ಕೆ ಹೊರಟುಬಿಟ್ಟ. ಸುಹಾಸಿನಿಗೆ ಅವನನ್ನು ಕೆಲಸಕ್ಕೆ ಹೋಗುವಾಗ ಪಂಕಜಳ ವಿಷಯ ಕೇಳಲು ಮನಸ್ಸು ಬರಲಿಲ್ಲ. ಹಾಗೆಂದು ಈ ವಿಷಯವನ್ನು ಮುಂದೂಡುವುದೂ ತಪ್ಪಾಗುತ್ತದೆ. ತಾನು ಕೂಡ ನಾಗಜ್ಜಿಗೆ ವಿಷಯ ಹೇಳಿದ್ದು ತಡವಾಗಿಯೇ.
ನಾಲ್ಕನೆಯ ದಿನ ಬೆಳಿಗ್ಗೆ ಮಗ ತಿಂಡಿ ತಿನ್ನುತ್ತಿರುವಾಗ “ಮಗೂ, ಸಿನಿಮಾ.. ಬೇಡರ ಕಣ್ಣಪ್ಪ.. ಎಂದೆಯಲ್ಲ… ಯಾವಾಗ ಕರೆದುಕೊಂಡು ಹೋಗುತ್ತೀ?” ಎಂದಳು ಸುಹಾಸಿನಿ.
ತಾಯಿಯ ಮಾತು ಯಾವಾಗಲೂ ಕರಾರುವಾಕ್ ಆಗಿ ಇರುವುದನ್ನೇ ಕೇಳಿಸಿಕೊಂಡಿದ್ದ ಭಾರತೀಪ್ರಿಯ ತಲೆ ಬಗ್ಗಿಸಿ ತಿನ್ನುತ್ತಿದ್ದವನು ತಟ್ಟೆಯಿಂದ ಚಕಿತನಾಗಿ ತಾಯಿಯತ್ತ ನೋಡಿದ. ಇದೇನು? ಅಮ್ಮ ಸಿನಿಮಾಗೆ ಕರೆದೊಯ್ಯುವ ವಿಷಯದಲ್ಲಿ ಹಿಂದೆಗೆತ ತೋರುತ್ತಿದ್ದಾರೆ?
“ಈ ಭಾನುವಾರ ಹೋಗೋಣ ಅಮ್ಮಾ. ನಾನು ಹೋಗಿ ಟಿಕೆಟ್ ತೆಗೆದುಕೊಂಡಿರುತ್ತೇನೆ ಮ್ಯಾಟ್ನಿಗೆ. ನೀನು ಷೋ ಶುರುವಾಗುವ ಮೊದಲು ಬಂದುಬಿಡು” ಎಂದ ಮೇಲೆದ್ದು ಕೈ ತೊಳೆದುಕೊಳ್ಳುತ್ತಾ.
ಅವನು ಹೊರಟಾಗ ಅವನ ಕೈಗೆ ಬುತ್ತಿ ನೀಡಿ, “ಮೂರು ಟಿಕೆಟ್ ತಗೋ ಭಾರತೀ…! ನನ್ನ ಗೆಳತಿಯೊಬ್ಬಳು ಬರುತ್ತಿದ್ದಾಳೆ” ಎಂದಳು. ಅವನಿಗೆ ಮತ್ತಷ್ಟು ಅಚ್ಚರಿ! ಸಿನಿಮಾಗೆ ಬರುವುದು ಒಂದು ಆಶ್ಚರ್ಯವಾದರೆ ಗೆಳತಿಯನ್ನು ಕರೆತರುವುದು…. ನಿಜಕ್ಕೂ ಅಚ್ಚರಿಯ ಸಂಗತಿ!!
ಅವನು ಹೋದ ಮೇಲೆ ಆಲೋಚಿಸಿದಳು. ಹೇಗೂ ಭಾನುವಾರ ಬೆಳಿಗ್ಗೆ ಪಂಕಜಳನ್ನು ಬರಹೇಳಿದ್ದಾಳೆ….
ಭಾನುವಾರ ಬಂದೇ ಬಂದಿತು. ಯಥಾಪ್ರಕಾರ ಭಾರತೀಪ್ರಿಯ ಬೆಳಿಗ್ಗೆಯೇ ಹೊರಟುಬಿಟ್ಟ, ಸಿನಿಮಾ ಥಿಯೇಟರಿಗೆ ಅಮ್ಮನನ್ನು ಬರಹೇಳಿ.
“ನನ್ನ ಗೆಳತಿ… ಟಿಕೆಟ್ ಮರೀಬೇಡ” ಎಂದಳು ಸುಹಾಸಿನಿ ನೆನಪಿಸುವಂತೆ.
“ಖಂಡಿತ. ಥಿಯೇಟರ್ ಗೊತ್ತು ತಾನೇ? ಅರಮನೆಯ ಹತ್ತಿರ ಹಾರ್ಡಿಂಜ್ ಸರ್ಕಲ್…” ಎಂದು ಹೇಳಿ ಬೈಸಿಕಲ್ ಹತ್ತಿ ಹೊರಟುಹೋದ.
ಅವನು ಅತ್ತ ಹೊರಡುತ್ತಿದ್ದಂತೆ ಪಂಕಜ ಬೆದರುತ್ತಲೇ ಒಳಗೆ ಬಂದಿದ್ದಳು. ಅವಳ ಆತಂಕ ಸುಹಾಸಿನಿಗೆ ಅರ್ಥವಾಗದ್ದೇನಲ್ಲ. ಅದೇ ದೋಣಿಯಲ್ಲಿ ತೇಲಿದವಳಲ್ಲವೇ ತಾನು?
“ನನ್ನ ತಂದೆಗೆ ಇನ್ನೂ ಹೇಳಿಲ್ಲ. ನಿಮ್ಮ ಮಗ ಕೂಡ ನಮ್ಮ ಅಂಗಡಿಯ ಬಳಿ ಸುಳಿದಿಲ್ಲ. ನಾನೇ ಅಂಗಡಿಯಲ್ಲಿರುತ್ತೇನೆ. ಇವತ್ತು ರಜಾ. ತಂದೆಯವರ ಆರೋಗ್ಯ ಸುಧಾರಿಸುತ್ತಿಲ್ಲ. ಯಾಕೋ ಅವರನ್ನು ನೋಡಿದರೆ ಭಯವಾಗುತ್ತೆ. ಟಿ.ಬಿ. ಇರಬಹುದು ಎನ್ನುತ್ತಿದ್ದಾರೆ ಗೌರ್ನಮೆಂಟ್ ಆಸ್ಪತ್ರೆಯಲ್ಲಿ”
“ನಿನಗೆ ಒಡಹುಟ್ಟಿದವರು, ತಾಯಿ …?” ಅರ್ಧೋಕ್ತಿಗೆ ನಿಲ್ಲಿಸಿದಳು.
“ಯಾರೂ ಇಲ್ಲ ಅಮ್ಮ” ಎಂದು ಅವಳು ಕಂಬನಿದುಂಬಿ ಹೇಳಿದಾಗ ಸುಹಾಸಿನಿ ಅವಳತ್ತ ಕಕ್ಕುಲತೆಯಿಂದ ನೋಡಿದಳು. ಯಾರೂ ಇಲ್ಲ ಎಂದು ಹೇಳಿದುದು ಸುಹಾಸಿನಿಯ ಮೆದುಳಿನಲ್ಲಿ ಮುದ್ರಿತವಾಯಿತು; ಆದರೆ ಅಮ್ಮ ಎಂದು ಅವಳು ಸಂಬೋಧಿಸಿದ್ದು ಅವಳ ಮನಸ್ಸಿನಲ್ಲಿ ಮಾರ್ದವತೆ ಮೂಡಿಸಿತು.
ತನ್ನನ್ನು ಈ ಹುಡುಗಿ ಅಮ್ಮ ಎನ್ನುತ್ತಿದ್ದಾಳೆ! ಅದೆಷ್ಟು ಚೆನ್ನಾಗಿ ಕೇಳಿಸುತ್ತಿದೆ ಈ ಶಬ್ದ!
ಒಮ್ಮೆ ಭಾರತೀಪ್ರಿಯನನ್ನೂ, ಪಂಕಜಳನ್ನೂ ಒಂದು ಸ್ಥಳದಲ್ಲಿ ಸೇರಿಸಬೇಕು. ಅವನ ಮುಖಭಾವವನ್ನು ಗಮನಿಸಬೇಕು. ಆ ನಂತರ ಮುಂದಿನ ಹೆಜ್ಜೆ ಎಂದುಕೊಂಡಳು. “ನಡಿ ಹೋಗೋಣ. ನಿನಗೆ ಸಂಜೆ ಏಳೂವರೆ ಹೊತ್ತಿಗೆ ಮನೆ ತಲುಪಿದರೆ ಪರವಾಗಿಲ್ಲ ಅಲ್ಲವೇ?” ಎಂದು ಕೇಳಿದಳು ಸುಹಾಸಿನಿ ಪಂಕಜಳನ್ನು.
“ಪರವಾಗಿಲ್ಲ ಅಮ್ಮ. ನನ್ನ ಅಪ್ಪನಿಗೆ ಹೇಳಿ ಬಂದಿದ್ದೇನೆ” ಎಂದಳು ಪಂಕಜ.
ಇಬ್ಬರೂ ಚಾಮುಂಡಿವನಂನಿಂದ ನಡೆದೇ ಅರಮನೆಯ ಮುಂದೆ ಬಂದರು. ಅರಮನೆಯನ್ನು ದಾಟಿ ಹಾರ್ಡಿಂಜ್ ಸರ್ಕಲ್ ಬಳಿ ಬಂದು ಅಲ್ಲಿಯೇ ಎಡಗಡೆಯಿದ್ದ ಮರಗಳ ಗುಂಪನ್ನು ದಾಟಿ ಎಡಗಡೆಗೆ ತಿರುಗಿದರು. ಆಗಲೇ ಆಷಾಢ ಮಾಸ ಬಂದಿದ್ದರಿಂದ ಗಾಳಿ ಜೋರಾಗಿ ಬೀಸುತ್ತಿತ್ತು.
ನ್ಯೂ ಅಪೇರಾ ಥಿಯೇಟರ್ ಮುಂದೆ ಬೇಡರ ಕಣ್ಣಪ್ಪ ಸಿನಿಮಾದ ಪೋಸ್ಟರ್ ಇತ್ತು. ಪಂಕಜಳಿಗೆ ಸಿನಿಮಾನಟರ ಪರಿಚಯವಿದ್ದುರಿಂದ “ಈಕೆ ಪಂಢರೀಬಾಯಿ, ಇವರು ಜಿ.ವಿ. ಅಯ್ಯರ್, ಇವರು ನರಸಿಂಹರಾಜು, ಕಣ್ಣಪ್ಪನ ಪಾತ್ರದಲ್ಲಿ ರಾಜಕುಮಾರ್ ಅಂತ ಹೊಸಬರಂತೆ” ಎಂದು ಪರಿಚಯಿಸಿದಳು.
ತಾನೆಂದೂ ಸಿನಿಮಾ ಥಿಯೇಟರ್‌ಗೆ ಬಂದಿಲ್ಲವೆಂದು ಸುಹಾಸಿನಿ ಹೇಳಲೇಬೇಕಿರಲಿಲ್ಲ. ಅವಳ ಬೆರಗುಗಣ್ಣುಗಳ ನೋಟವನ್ನು ಕಂಡ ಪಂಕಜ ತಾನೇ ಮುತುವರ್ಜಿ ವಹಿಸಿ ಒಳಗೆ ಕರೆದೊಯ್ದಳು. ಸಿನಿಮಾ ಆಗಲೇ ಎಂಬತ್ತು ದಿನಗಳಿಗೂ ಹೆಚ್ಚು ಕಾಲ ಪ್ರದರ್ಶಿತವಾಗಿದೆಯೆಂದು ಅಲ್ಲಿದ್ದ ಮತ್ತೊಂದು ಪೋಸ್ಟರ್ ನೋಡಿ ಪಂಕಜ ವಿವರಿಸಿದಳು.
ನ್ಯೂಸ್‍ರೀಲ್ ಶುರುವಾಗಿತ್ತು. ಅಮ್ಮನನ್ನು ಗುರುತಿಸಿದ ಭಾರತೀಪ್ರಿಯ ಪಂಕಜಳನ್ನು ಗುರುತಿಸಲಿಲ್ಲ. ಲಂಗ, ದಾವಣಿ ಬದಲು ಅವಳು ಸೀರೆ ಉಟ್ಟು ಎರಡು ಜಡೆಯ ಬದಲು ಒಂದು ಜಡೆ ಹಾಕಿಕೊಂಡಿದ್ದೂ ಕಾರಣವಿರಬಹುದು.
ಸಿನಿಮಾ ಥಿಯೇಟರಿನ ಜನಜಂಗುಳಿ, ಆ ಶಬ್ದ ಎಲ್ಲವೂ ಹೊಸತು ಸುಹಾಸಿನಿಗೆ. ಆದರೆ ಅವಳು ಬಂದಿರುವುದು ತನ್ನ ಮಗನ ವಿಷಯ ತಿಳಿಯಲು, ಪಂಕಜಳ ಭವಿಷ್ಯದ ಬಗೆಗೆ ನಿರ್ಧಾರ ತಳೆಯಲು. ಆದರೂ ಸಿನಿಮಾ ಅವಳಿಗೆ ಮುದ ನೀಡಿತ್ತು. ಕಣ್ಣಪ್ಪನ ಪಾತ್ರದ ರಾಜಕುಮಾರ್ ಅಭಿನಯ ಅವಳನ್ನು ಮಂತ್ರಮುಗ್ಧಳನ್ನಾಗಿ ಮಾಡಿತ್ತು.
ವಿರಾಮದ ವೇಳೆ ಥಿಯೇಟರಿನ ದೀಪಗಳು ಹೊತ್ತಿಕೊಂಡವು. ಆಗ ಗುರುತಿಸಿದ್ದ ಭಾರತೀಪ್ರಿಯ ಪಂಕಜಳನ್ನು! ಸುಹಾಸಿನಿಗೆ ಬೇರೇನೂ ಪುರಾವೆ ಬೇಕಿರಲಿಲ್ಲ. ಅವನೂ ಏನೂ ಮಾತಾಡಲಿಲ್ಲ. ನಿಜ ಹೇಳಬೇಕೆಂದರೆ ಮೂವರೂ ಮೌನವಾಗಿದ್ದು ಸಿನಿಮಾ ನೋಡಿದರು. ಕಣ್ಣಪ್ಪನ ಭಕ್ತಿಯ ಪರಾಕಾಷ್ಠೆ ಸುಹಾಸಿನಿಗೆ ಬಹಳವೇ ಇಷ್ಟವಾಗಿತ್ತು.
ಪಂಕಜ ಒಂಟಿಯಾಗಿ ಸಿಕ್ಕಾಗ ಮರುದಿನವೇ ಬರಲು ಸಾಧ್ಯವೇ ಎಂದು ಕೇಳಿ, ಅವಳ ಒಪ್ಪಿಗೆ ಸಿಕ್ಕಾಗ, ತನಗೆ ನಾಳೆ ಅರ್ಧದಿನ ಕೆಲಸವಿರುವುದೆಂದೂ, ಮಧ್ಯಾಹ್ನ ಬರಬೇಕೆಂದೂ ಹೇಳಿದಳು. ಮರುದಿನ ಹೇಳಿದ ಸಮಯಕ್ಕೆ ಪಂಕಜ ಬಂದಳು. ಅವಳ ಮೊಗದ ಮೇಲಿನ ಅನಿಶ್ಚಯತೆ ಸುಹಾಸಿನಿಯಲ್ಲಿ ಕರುಣೆ ಮೂಡಿಸಿತ್ತು.
ಡಾ. ಕೋಕಿಲ ಸುಹಾಸಿನಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡು, “ಬಾ ಬಾ ಚಿರಸ್ಮಿತಾ!” ಎಂದರು ಆದರದಿಂದ.
(ಸಶೇಷ)
ಸನಾತನ ಎಂದರೆ ಶಾಶ್ವತ ಎಂದರ್ಥ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಹೇಳಿಕೆ ನೀಡಿದರೆ ಒಳಿತು: ನಿರ್ಮಲಾನಂದ ಸ್ವಾಮೀಜಿ
ಸನಾತನ ಎಂದರೆ ಶಾಶ್ವತ ಎಂದರ್ಥ, ಅಂದರೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದೇ ಸನಾತನ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಹೇಳಿಕೆ ನೀಡಬೇಕೆಂದು ಆದಿಚುಂಚನಗಿರಿಯ ಶ್ರೀನಿರ್ಮಲಾನಂದ...