2027ಕ್ಕೆ ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ಮೂಲದ ನ್ಯಾ. ಬಿ.ವಿ.ನಾಗರತ್ನ . ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ತಂದೆ ಶ್ರೀ ಇ.ಎಸ್.ವೆಂಕಟರಾಮಯ್ಯ ಕೂಡಾ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಜೂನ್ 19, 1989 ರಿಂದ ಡಿಸೆಂಬರ್ 17, 1989 ರವರೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಶ್ರೀ ಇ.ಎಸ್.ವೆಂಕಟರಾಮಯ್ಯ ಕಾರ್ಯನಿರ್ವಹಿಸಿದ್ದರು. ಅಕ್ಟೋಬರ್ 30, 1962 ರಲ್ಲಿ ಜನಿಸಿದ ಬಿ.ವಿ.ನಾಗರತ್ನ ಕಾನೂನು ವಿದ್ಯಾಭ್ಯಾಸ ಪೂರ್ಣಗೊಳಿಸಿ 1987 ರಲ್ಲಿ ವಕೀಲ ವೃತ್ತಿಗೆ ನೋಂದಾಯಿಸಿಕೊಂಡರು. ಸಂವಿಧಾನ, ಸೇವಾ ಕಾನೂನು, ಆಡಳಿತ, ವಾಣಿಜ್ಯ ಕಾನೂನು ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಪರಿಣತಿ ಹೊಂದಿದ್ದಾರೆ.
ಕರ್ನಾಟಕದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಸೇರಿದಂತೆ 9 ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಾಗರತ್ನ ಅವರೊಂದಿಗೆ ಎ.ಎಸ್. ಓಕಾ, ವಿಕ್ರಮ್ ನಾಥ್, ಜೆ.ಕೆ. ಮಹೇಶ್ವರಿ, ಹಿಮಾ ಕೊಹ್ಲಿ, ಸಿ.ಟಿ. ರವೀಂದ್ರಕುಮಾರ್, ಎಂ.ಎಂ. ಸುಂದರೇಶ್, ಬೇಲಾ ತ್ರಿವೇದಿ ಹಾಗೂ ಪಿ.ಎಸ್. ನರಸಿಂಹ ಅವರಿಗೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣಾ ಪ್ರಮಾಣ ವಚನ ಬೋಧಿಸಿದರು.