ಸ್ವಪ್ನಸೃಷ್ಟಿ – ೩
“ಈಗೆಲ್ಲಾ ಮಕ್ಕಳು ಶಾಲೆ, ಕಾಲೇಜಿನ ನಂತರ ಟಿವಿ, ಮೊಬೈಲ್, ಕಂಪ್ಯೂಟರ್ ಅಂತ ಕೂತುಬಿಡೋದು ನನಗಿಷ್ಟ ಇಲ್ಲ. ಅವರ ತಂದೆ ತಾಯಿಯರಿಗೆ ಹೇಳಿ, ನಂತರ ಈ ಹುಡುಗರಿಗೇ ಮನಗಾಣಿಸಿ ಈ ಕೆಲಸಕ್ಕೆ ಇಳಿಸಿದ್ದೇನೆ. ಸುಮಾರು ಎರಡು ಗಂಟೆ ಕಾಲದ ದೈಹಿಕಶ್ರಮ ಅವರಿಗೆ ಹುರುಪು, ಉತ್ಸಾಹ ತರುವುದಂತೆ”
ಮೊದಲೇ ಸಿದ್ಧ ಪಡಿಸಿಟ್ಟುಕೊಂಡಿದ್ದ ಉತ್ತರಗಳು ತಡಬಡಿಸದೇ ಹೊರಬಂದಿದ್ದವು. ಏಕೆಂದರೆ ಈ ಉತ್ತರಗಳನ್ನು ಅವನು ಅನೇಕ ಕಷ್ಟತರವಾದ ಸನ್ನಿವೇಶಗಳಲ್ಲಿ ಹೇಳಲು ಚೆನ್ನಾಗಿ ತಯಾರಿ ನಡೆಸಿದ್ದ.
ನೆಲದ ಮೇಲೆ ಎರಡು ಚಾಪೆಗಳನ್ನು ಹಾಸಿದ. ಒಂದರ ಮೇಲೆ ಪವಡಿಸಿ, “ಮಲಗಿ ಸ್ವಲ್ಪ ಹೊತ್ತು” ಎಂದ.
“ಏಕೆ?” ಕೇಳಿದ ಸೀನ.
“ಪವರ್ ನ್ಯಾಪ್!” ಎಂದು ಮುಗುಳ್ನಕ್ಕ ವಿವಿಕ್ತ ಚಾಪೆಯ ಮೇಲೆ ಪವಡಿಸಿ, ತನ್ನ ತೋಳನ್ನೇ ತಲೆದಿಂಬನ್ನಾಗಿ ಮಾಡಿಕೊಂಡು, “ಹದಿನೈದು ನಿಮಿಷ ಮಲಗಿ ಎದ್ದರೆ, ಹೊಸ ಶಕ್ತಿಯ ಸಂಚಾರವಾಗುತ್ತೆ ಮೈಯಲ್ಲಿ. ಮತ್ತೆ ದಿನಕಳೆಯಲು ಹುರುಪು ತುಂಬುಕೊಳ್ಳುತ್ತೆ” ಎಂದು ಹೇಳಿ ಟಕ್ಕನೆ ಮಲಗಿಬಿಟ್ಟ.
ಸೀನ ಇವನ ಈ ಅಭ್ಯಾಸವನ್ನು ಮೆಚ್ಚಿಕೊಳ್ಳದಿರದಾದ. ಇವನು ಒಂದೊಂದು ವಿಷಯದಲ್ಲಿಯೂ ಒಂದೊಂದು ಮೆಟ್ಟಿಲು ಏರುತ್ತಲೇ ಇದ್ದಾನೆ. ಅವರು ಹೇಳಿದ್ದು ಸರಿಯೇ… ಇವನು ಸರಿಯಾದ…. ಅವನ ಯೋಚನೆ ಪೂರ್ತಿಯಾಗುವ ಮೊದಲೇ ಅವನಿಗೂ ನಿದ್ರೆ ಹತ್ತಿತ್ತು.
ಭುಜದ ಮೇಲೆ ಗಟ್ಟಿ ಬೆರಳುಗಳು ಒತ್ತಿ ಅಲುಗಾಡಿಸಿದಾಗ ಸೀನ ಬೆಚ್ಚಿ ಕಣ್ಣುಬಿಟ್ಟ. ಹತ್ತಿರದಲ್ಲಿ ವಿವಿಕ್ತನ ನಗೆಮೊಗವಿತ್ತು. ಅವನ ಕೈಯಲ್ಲಿ ಹಬೆಯಾಡುವ ಚಹಾ ಇತ್ತು.
“ತಗೊಳ್ಳಿ. ಚೇತನ ಮೈ ತುಂಬುತ್ತೆ” ಎಂದ. ಸೀನ ಎದ್ದು ಕುಳಿತು ಚಹಾದ ಲೋಟ ಕೈಗೆತ್ತಿಕೊಂಡ. ಹೂಂ… ಚಹಾ ಹದವಾಗಿ, ರುಚಿಯಾಗಿ, ಹಿತವಾಗಿತ್ತು.
ಇನ್ನೊಂದು ಅಂಕ… ಎಂದುಕೊಂಡ ಸೀನ.
ಚಾಪೆಯನ್ನು ಸುರುಳಿ ಮಾಡಿ ಎತ್ತಿಟ್ಟು, ಬಚ್ಚಲು ಮನೆಗೆ ನಡೆದ ವಿವಿಕ್ತ ಮುಖ ತೊಳೆದು ಬಂದ. ಅಲ್ಲಿಯೇ ಗೂಟದ ಮೇಲೆ ನೀಟಾಗಿ ನೇತಾಡುತ್ತಿದ್ದ ಟೀಷರ್ಟ್ ಧರಿಸಿದ. ಟ್ರ್ಯಾಕ್ಪ್ಯಾಂಟನ್ನು ಧರಿಸಿದ. ಇವನು ಇದ್ದಾನೆಂಬ ಸಂಕೋಚ ಪ್ಯಾಂಟ್ ಬದಲಿಸುವಾಗ ಇರಲಿಲ್ಲವೆಂಬ ವಿಷಯ ಸೀನನಿಗೆ ಬೋಧೆಯಾಗಿತ್ತು.
ಸ್ಪೋರ್ಟ್ಸ್ ಷೂಗಳನ್ನು ಧರಿಸಿ ಹೊರನಡೆದ. ಸೀನ ಹೊರಬಂದ ಮೇಲೆ ಬೀಗ ಹಾಕಿ ಹತ್ತಿರದ ಮೈದಾನಕ್ಕೆ ನಡೆದ. ಒಂದು ವಿಶೇಷ ರಾಗದ ಸಿಳ್ಳೆ ಹಾಕಿದ. ಎಲ್ಲಿದ್ದರೋ, ಹತ್ತುಹನ್ನೆರಡು ಜನ ಯುವಕರು.. ಹದಿನೈದರಿಂದ ಇಪ್ಪತ್ತರವರು ಅವನ ಬಳಿಗೆ ಬಂದರು. ಅವರೆಲ್ಲಾ ಇವನಂತೆಯೇ ದಿರಿಸು ಧರಿಸಿದ್ದರು.
“ವಿವಿ ಅಣ್ಣಾ… ಗುಡ್ ಆಫ್ಟರ್ ನೂನ್” ಎಂದರು ಒಕ್ಕೊರಲಲ್ಲಿ. ಆಗ ಸುಮಾರು ನಾಲ್ಕೂವರೆ ಗಂಟೆ.
“ಸರಿ, ವಾರ್ಮ್ ಅಪ್…” ಎಂದು ಆಣತಿ ಇತ್ತ. ಅಷ್ಟು ಹುಡುಗರೂ ಮೈದಾನದ ಸುತ್ತಲೂ ಒಂದು ಸುತ್ತು ಓಡತೊಡಗಿದರು. ಸೀನನ ಕಡೆಗೆ ನೋಡಿ, “ಈಗೆಲ್ಲಾ ಮಕ್ಕಳು ಶಾಲೆ, ಕಾಲೇಜಿನ ನಂತರ ಟಿವಿ, ಮೊಬೈಲ್, ಕಂಪ್ಯೂಟರ್ ಅಂತ ಕೂತುಬಿಡೋದು ನನಗಿಷ್ಟ ಇಲ್ಲ. ಅವರ ತಂದೆ ತಾಯಿಯರಿಗೆ ಹೇಳಿ, ನಂತರ ಈ ಹುಡುಗರಿಗೇ ಮನಗಾಣಿಸಿ ಈ ಕೆಲಸಕ್ಕೆ ಇಳಿಸಿದ್ದೇನೆ. ಸುಮಾರು ಎರಡು ಗಂಟೆ ಕಾಲದ ದೈಹಿಕಶ್ರಮ ಅವರಿಗೆ ಹುರುಪು, ಉತ್ಸಾಹ ತರುವುದಂತೆ” ಎಂದು ನಕ್ಕ.
ನಂತರ “ಬನ್ನಿ” ಎಂದು ಕರೆದು ತಾನು ಅವರನ್ನು ಸೇರಿ ಓಡಿದ. ಕ್ರಿಕೆಟ್ ಚೆಂಡನ್ನು ಎಸೆದು ‘ಕ್ಯಾಚ್’ ಅಭ್ಯಾಸ ಮಾಡಿಸಿದ. ಸುಮಾರು ಹೊತ್ತು ಅನೇಕ ಆಟಗಳನ್ನು ಆಡಿ ದಣಿದು, ಆದರೂ ಸಂತಸದಿಂದ ವಿವಿಕ್ತನಿಗೆ ಕೈ ಬೀಸಿ ವಿದಾಯ ಹೇಳಿದ ಹುಡುಗರು ಬಂದಂತೆಯೇ ಮಾಯವಾದರು.
“ಭಾನುವಾರ ಸಂಜೆ ಒಂದು ಗಂಟೆ ಕಾಲ ಅವರಿಗೆ ಯಾವುದಾದರೂ ಪುರಾಣದ ಸಂಗತಿ ಹೇಳುತ್ತೇನೆ. ಆಮೇಲೆ ಒಂದು ಗಂಟೆ ಕಾಲ ಅಂತ್ಯಾಕ್ಷರಿ, ಪ್ರಥಮಾಕ್ಷರಿ ಆಡುತ್ತೇವೆ” ಎಂದ ವಿವಿಕ್ತ.
“ಪ್ರಥಮಾಕ್ಷರಿ?” ಎಂದ ಸೀನ ಅಚ್ಚರಿಯಿಂದ. ಅವನು ಅಂತ್ಯಾಕ್ಷರಿ ಬಗ್ಗೆ ತಿಳಿದಿದ್ದ.
“ಓ ಅದಾ? ಅಕ್ಷರಮಾಲೆಯ ಅ ಇಂದ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಎಲ್ಲ ಹಾಡುಗಳೂ ಎಕ್ಜ್ಹಾಸ್ಟ್ ಆಗೋವರೆಗೂ ಹಾಡಬೇಕು” ಎಂದ.
ಸೀನನ ಮುಖದಲ್ಲಿನ ಸಂದೇಹ ಕಂಡು, “ಈಗ ನಾನು ಅ ಆ ಇ ಈ ಕನ್ನಡದಾ ಅಕ್ಷರಮಾಲೆ… ಅಂತ ಹಾಡ್ತೀನಿ. ನನ್ನ ಎದುರು ಟೀಮಿನವರು ‘ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು’ ಹಾಡುತ್ತಾರೆ. ನಾನು ‘ಅಮ್ಮಾ ಅಮ್ಮಾ ನಾ ಅಮ್ಮಾ ಎಂದಾಗ ಏನು ಸಂತೋಷವೋ’ ಎಂದು ಹಾಡುತ್ತೇನೆ… ಹೀಗೆ” ಎಂದ ವಿವಿಕ್ತ ಮುಗುಳ್ನಕ್ಕು.
“ನೀವು ಚೆನ್ನಾಗಿ ಹಾಡ್ತೀರಿ!” ಎಂದ ಅಚ್ಚರಿಯಿಂದ ಸೀನ.
“ಹೂಂ… ನನಗೆ ಕರ್ನಾಟಿಕ್ ಮತ್ತು ಉತ್ತರಭಾರತೀಯ ಶೈಲಿಯ ಸಂಗೀತದ ಪಾಠಗಳಾಗಿವೆ” ಎಂದ ಹಸನ್ಮುಖನಾಗಿ.
ಅಂದರೆ ಗುರೂಜಿ ಹೇಳಿದ್ದರಲ್ಲಿ ಸುಳ್ಳಿಲ್ಲ. ಇವನು ಸಕಲಕಲಾವಲ್ಲಭ…. ಎಂದುಕೊಂಡ ಸೀನ.
“ಬನ್ನಿ, ಇನ್ನೊಂದು ರೊಟೀನ್ ಇದೆ ನನ್ನದು” ಎಂದು ಅವನನ್ನು ಮನೆಗೆ ಕರೆದೊಯ್ದ. ಜೀನ್ಸ್ ಪ್ಯಾಂಟ್ ಧರಿಸಿ, ಟೀಷರ್ಟ್, ಸ್ಪೋರ್ಟ್ಸ್ ಶೂಗಳೊಂದಿಗೆ ಹೊರಟ ವಿವಿಕ್ತ.
ಅವರು ಹೋಗಿದ್ದು ಒಂದು ವೃದ್ಧಾಶ್ರಮಕ್ಕೆ.
ಸುಮಾರು ಹದಿನೈದು ವೃದ್ಧವೃದ್ಧೆಯರು ಅಲ್ಲಿ ಇವನಿಗಾಗಿ ಕಾದು ಕುಳಿತಿದ್ದರು.
ಒಂದು ವಿದ್ಯುನ್ಮಾನ ಶ್ರುತಿಪೆಟ್ಟಿಗೆಯನ್ನು ಅಲ್ಲಿದ್ದ ಬೀರೂವಿನಿಂದ ತಂದಿಟ್ಟು, ಹಾಸಲ್ಪಟ್ಟಿದ್ದ ಜಮಖಾನದ ಮೇಲೆ ಕುಳಿತು ಸುಶ್ರಾವ್ಯವಾಗಿ ದೇವರನಾಮಗಳನ್ನು ಹಾಡಿದ.
“ಭಾಗ್ಯದ ಲಕ್ಷ್ಮೀಬಾರಮ್ಮಾ” ಹಾಡಿದ. ಕೇಳಲು ಬಲು ಮಧುರವಾಗಿತ್ತು. ಸ್ಪಷ್ಟ ಅಕ್ಷರ ಉಚ್ಚಾರಣೆ.
ವೃದ್ಧೆಯೊಬ್ಬರು, “ಮಗೂ ವಿವಿಕ್ತಾ, ಇವತ್ತು ಇದನ್ನು ಇನ್ನೂ ಎರಡು ರೀತಿಯಲ್ಲಿ ಹಾಡು” ಎಂದರು.
“ಅಮ್ಮಾ, ಈಗ ನಾನು ಹಾಡಿದ್ದು ಉತ್ತರಾದಿ ಶೈಲಿಯಲ್ಲಿ, ಶುಭಪಂತುವರಾಳಿ ರಾಗದಲ್ಲಿ. ಈಗ ನಾನು ನಿಮಗೆ ಇನ್ನೂ ಮೂರು ರೀತಿ ಹಾಡುತ್ತೇನೆ. ಆದರೆ ಉಳಿದವರು ಇದರಿಂದ ಬೇಸರಗೊಳ್ಳಬಾರದು” ಎಂದ ಕಿರುನಗೆ ಬೀರಿ.
“ಇಲ್ಲ ಇಲ್ಲ. ನಿನ್ನ ಹಾಜರಿಯೇ ನಮಗೆ ಖುಷಿ ತರುತ್ತೆ. ನೀನು ಏನು ಬೇಕಾದರೂ ಹಾಡು” ಎಂದರು ವೃದ್ಧರೊಬ್ಬರು. ಎಲ್ಲರೂ “ಹೌದು” ಎಂದರು.
ಮೂರು ರೀತಿಯಲ್ಲಿ ಹಾಡಿದ ಅದೇ ಹಾಡನ್ನು ವಿವಿಕ್ತ. “ಮೊದಲಿನದ್ದನ್ನು ಭೀಮಸೇನ ಜೋಷಿಯವರ ಬಾಯಲ್ಲಿ ಕೇಳಿರುತ್ತೀರಿ. ಎರಡು, ಮೂರನೆಯದು ದಕ್ಷಿಣಾದಿ ಶೈಲಿಯಲ್ಲಿ ಶ್ರೀರಾಗ, ಮಧ್ಯಮಾವತಿ ರಾಗದಲ್ಲಿ ಹಾಡಿದೆ. ಇವೆರಡರ ಆರೋಹಣ ಒಂದೇ. ಅವರೋಹಣ ಸ್ವಲ್ಪ ವ್ಯತ್ಯಾಸವಿದೆ. ಕೊನೆಯಲ್ಲಿ ಹಾಡಿದ್ದು ಸೂಲಮಂಗಲಂ ಸೋದರಿಯರು ಸಿನಿಮಾ ಒಂದರಲ್ಲಿ ಹಾಡಿದ ರೀತಿ” ಎಂದು ಹೇಳಿ ಅವರಿಗೆ ನಮಸ್ಕರಿಸಿ, ಅವರಿಗೆಲ್ಲ ಒಂದಿಷ್ಟು ಸಿಹಿಖಾರಗಳನ್ನು ಹಂಚಿ ಅಲ್ಲಿಂದ ಹೊರಟುಬಿಟ್ಟ.
ಆಗ ಸೀನನಿಗೆ ತಾನು ಬಂದಿದ್ದ ಮತ್ತೊಂದು ಕೆಲಸದ ನೆನಪಾಗಿತ್ತು.
“ಬನ್ನಿ, ಇಲ್ಲಿ ಕೂರೋಣ” ಎಂದು ಮರಗಳ ಗುಂಪಿದ್ದ ಒಂದು ಸ್ವಾಭಾವಿಕ ವನಕ್ಕೆ ಕರೆತಂದ.
ಸಂಜೆಯ ಕತ್ತಲು ಮುಸುಕುತ್ತಿತ್ತು. ಎಲ್ಲಿಯೂ ಜನಸಂಚಾರವಿರಲಿಲ್ಲ. ಅಲ್ಲಿ ತಾನು, ಸೀನ ಇಬ್ಬರೇ ಇರುವಂತೆ ವಿವಿಕ್ತನಿಗೆ ಭಾಸವಾಗಿತ್ತು. ಅವನ ಮನಸ್ಸು ಏನೋ ಕೇಡನ್ನು ಶಂಕಿಸಿತ್ತು. ಅವನ ಮಾತು ನಿಜವಾಗುವಂತೆ ಅಲ್ಲೊಂದು ಘಟನೆ ನಡೆದಿತ್ತು.
ಇಬ್ಬರು ಯುವಕರು ಸದ್ದಿಲ್ಲದೇ ನಡೆದು ಇವರಿಬ್ಬರ ಹಿಂದೆ ನಿಂತರು. ಮಾತಿನಲ್ಲಿ ಮುಳುಗಿದಂತಿದ್ದ ಸೀನ ಅವರನ್ನು ಗಮನಿಸಲಿಲ್ಲವೇನೋ.. ಆದರೆ ವಿವಿಕ್ತನ ಕಣ್ಣುಗಳಿಗೆ ಅವರಿಬ್ಬರೂ ಸಿಲುಕಿದ್ದರು. ಅವನ ಬೆನ್ನ ಹಿಂದೆ ಏನೋ ನಡೆಯುತ್ತಿದೆ ಎಂಬ ಸೂಚನೆಯನ್ನು ಅವನ ಆರನೆಯ ಇಂದ್ರಿಯ ನೀಡಿತ್ತು.
ಸರಕ್ಕನೆ ತಿರುಗುವಷ್ಟರಲ್ಲಿ ಮಿಂಚಿನ ವೇಗದಲ್ಲಿ ಅವನ ಕೈಗಳೆರಡನ್ನೂ ಅವನ ಹಿಂದೆ ಕಟ್ಟಿದ್ದ ಒಬ್ಬ ಯುವಕ. ವಿಚಿತ್ರವೆಂದರೆ ಅವರು ನಾಲ್ವರ ಹೊರತಾಗಿ ಬೇರಾರೂ ಅಲ್ಲಿರಲಿಲ್ಲ.
(ಸಶೇಷ)
ಮುಂದುವರೆಯುತ್ತದೆ…..
-ಯತಿರಾಜ್ ವೀರಾಂಬುಧಿ