ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1ರಂದು ಮನೆ, ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಜೆಡಿಎಸ್ ಕರೆ ನೀಡಿದೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ನಾಳೆ ಗಡಿನಾಡು ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಂಚರತ್ನ ರಥ ಯಾತ್ರೆಗೆ ಚಾಲನೆ ನೀಡುವ ಮುನ್ನ ಸಾಮಾನ್ಯ ಕಾರ್ಯಕರ್ತರೊಬ್ಬರ ಮನೆಯ ಮೇಲೆ ಕನ್ನಡ ಬಾವುಟ ಕಟ್ಟುವ ಮೂಲಕ ಚಾಲನೆ ನೀಡಲಿದ್ದಾರೆ.
ಅದಕ್ಕೂ ಮುನ್ನ ಅವರು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬೆಳಗ್ಗೆ 7 ಗಂಟೆಗೆ ಕನ್ನಡ ಧ್ವಜಾರೋಹಣ ಮಾಡುವರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಹಾಜರು ಇರುವರು.
ರಾಜ್ಯದ ಪ್ರತಿ ಮನೆಯ ಮೇಲೂ ಕನ್ನಡದ ಬಾವುಟ ಹಾರಿಸಲು ಕನ್ನಡಿಗರಲ್ಲಿ ಮನವಿ ಮಾಡಿರುವ ಹೆಚ್ ಡಿಕೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಬಾವುಟವನ್ನು ಮನೆಯ ಮೇಲೆ ಹಾರಿಸುವ ಅಭಿಯಾನವನ್ನು ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.
ಕನ್ನಡ ಬಾವುಟದ ಅಭಿಯಾನದಲ್ಲಿ ಪಕ್ಷದ ಎಲ್ಲಾ ನಾಯಕರು, ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಪಕ್ಷದ ಪದಾಧಿಕಾರಿಗಳು, ಶಾಸಕರು, ತಮ್ಮ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕನ್ನಡ ಬಾವುಟಗಳ ಮೆರವಣಿಗೆ ಹಾಗೂ ವಿತರಣೆಯ ಅಭಿಯಾನವನ್ನು ನಡೆಸಿದ್ದಾರೆ.
ನವೆಂಬರ್ 1ರಂದು ನಮ್ಮ ಪಕ್ಷದ ವತಿಯಿಂದ ಮನೆ ಮನೆ ಮೇಲೆ ಕನ್ನಡ ಬಾವುಟ ಹಾರಿಸುವ ಸಂಕಲ್ಪ ಮಾಡಿದ್ದೇವೆ. ರಾಜ್ಯದ ಜನರು ಇದರಲ್ಲಿ ಭಾಗವಹಿಸಬೇಕೆಂದು ಕುಮಾರಸ್ವಾಮಿ ಅವರು ಕರೆ ನೀಡಿದ್ದಾರೆ.
ಜೆಡಿಎಸ್ ಪಕ್ಷ ಈಗಾಗಲೇ ಹಲವು ಕನ್ನಡ ಪರ ಅಭಿಯಾನದ ಮೂಲಕ ಜನರನ್ನು ತಲುಪುತ್ತಿದೆ. ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರದಲ್ಲಿ ಧ್ವನಿ ಎತ್ತುತ್ತಿದೆ.