ನಾನು ದೂರದರ್ಶನದಲ್ಲಿ ನಿರೂಪಕಿಯಾಗಿ ಅನೇಕ ಸಾಧಕರ ಸಂದರ್ಶನ ಮಾಡಿದ್ದೆ. ಅವರೆಲ್ಲಾ ತಮ್ಮ ವಿವರ ಕೊಟ್ಟಾಗ, ಒಂದು ವಿಷಯದ ಬಗ್ಗೆ ನನಗೆ ಯಾವಾಗಲೂ ತಕರಾರು ಇರುತ್ತಿದ್ದಿತು!
ಕೆಲವರು ತಮಗೆ ಬಂದ ಪ್ರಶಸ್ತಿಗಳ ಬಗ್ಗೆ ತಿಳಿಸುವಾಗ ” ಇಂತಿಂಥ ಪ್ರಶಸ್ತಿಯನ್ನು ತೆಗೆದುಕೊಂಡಿದ್ದೇವೆ/ ತೆಗೆದುಕೊಂಡಿದ್ದಾರೆ ” ಎಂದು ನಮೂದಿಸಿರುತ್ತಿದ್ದರು. ಈ ” ತೆಗೆದುಕೊಂಡಿದ್ದಾರೆ” ಎಂಬ ಪದ ನನಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಆ ಪದದ ಮೇಲೆ ಅಳಿಸಿ ” ಲಭಿಸಿವೆ , ಸ್ವೀಕರಿಸಿದ್ದಾರೆ, ಅರಸಿ ಬಂದಿವೆ, ಸಂದಿವೆ” ಎಂದು ತಿದ್ದುತ್ತಿದ್ದೆ.
“ಪ್ರಶಸ್ತಿ” ಎನ್ನುವುದು ಪ್ರಶಂಸೆ, ಗೌರವ, ಪುರಸ್ಕಾರ ಎಂಬ ಉನ್ನತ ಭಾವವನ್ನು ಹೊಂದಿದೆ. ಅದನ್ನು ಯಾರಾದರೂ ಗುರುತಿಸಿ, ಮನಃಪೂರ್ವಕವಾಗಿ ನೀಡಬೇಕೇ ಹೊರತು ತಾವಾಗಿಯೇ ತೆಗೆದುಕೊಳ್ಳುವುದಲ್ಲ ಎಂದು ತುಂಬಾ ಗ್ರಮಾಟಿಕ್ ಆಗಿ ಅರ್ಥೈಸಿಕೊಳ್ಳುವವಳು ನಾನು!
ಈವರೆಗೂ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಅವೆಲ್ಲವೂ ನನ್ನ ಕೆಲಸವನ್ನು ಗುರುತಿಸಲ್ಪಟ್ಟು ಬಂದಿವೆಯೇ ಹೊರತು ನಾನೆಂದೂ ಶಿಫಾರಸ್ಸು, ಲಾಭಿ, ಬೇಡುವಿಕೆ ಮಾಡದ್ದಿಲ್ಲ ಹಾಗೂ ಯಾವುದೇ ರೀತಿಯಲ್ಲಿ ಹಣವನ್ನೂ ತೆತ್ತಿಲ್ಲ! ಹಾಗಾಗಿ ಆ ಪ್ರಶಸ್ತಿಗಳು ಬಂದಿರುವುದರ ಬಗ್ಗೆ ಯಾವಾಗಲೂ ನನಗೆ ಹೆಮ್ಮೆ!
ಅಂಥ ಮತ್ತೊಂದು ಹೆಮ್ಮೆಯ ಗರಿ ನೀಡಿತು KWAA (Karnataka woman achiever award). ಈ ಪ್ರಶಸ್ತಿ ಬಗ್ಗೆ ಅತ್ಯಂತ ಸಂತೋಷ ನೀಡಿದ್ದು ಅವರು ನಡೆಸಿದ ಆಯ್ಕೆ ಪ್ರಕ್ರಿಯೆ. ಅರ್ಹ ಪರಿಣಿತರ ಮಂಡಳಿ ಅದೆಷ್ಟು ಕೂಲಂಕುಶವಾಗಿ ಪ್ರತಿಯೊಬ್ಬ ಅಭ್ಯರ್ಥಿಯ ವಿವರಗಳನ್ನು ಪರಿಶೀಲಿಸಿದ್ದಾರೆಂಬುದೇ ಅಚ್ಚರಿ ಹುಟ್ಟಿಸಿತು. ಈ ಪ್ರಶಸ್ತಿಗಾಗಿ ರಾಜ್ಯದಾದ್ಯಂತ ಸುಮಾರು 4,300ಕ್ಕೂ ಹೆಚ್ಚು nominations ಬಂದಿದ್ದವು ಎಂಬುದನ್ನು ತಿಳಿದಾಗ ಇನ್ನಷ್ಟು ಸಂತಸವಾಯ್ತು.
ಅಷ್ಟೊಂದು ಜನರಲ್ಲಿ ಕೇವಲ ಇಪ್ಪತ್ತು ಸಾಧಕರನ್ನು ಅವರು ಆರಿಸಬೇಕಾಗಿತ್ತು ಎಂದರೆ ಅದೆಂತಹ ಅತಿಸೂಕ್ಷ್ಮ ಕಾಯಕ! ಐದಾರು ತಿಂಗಳುಗಳ ಕಾಲ ನಿರಂತರವಾಗಿ ಪ್ರತಿಯೊಬ್ಬರ ವಿವರಗಳನ್ನೂ ಪರಿಶೀಲಿಸಿದ್ದಾರೆ. ಮೊದಲ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ವಿಶದವಾಗಿ ಅವಲೋಕಿಸಿದ್ದಾರೆ. ಒಂದು ಸಂಸ್ಥೆ ಹಾಗೂ ಅದರ ತೀರ್ಪುಗಾರರ ಮಂಡಳಿ ಅಷ್ಟೊಂದು ಗಹನವಾಗಿ ವಿವರಗಳನ್ನು ಪರಿಶೀಲಿಸುವುದು ನಿಜಕ್ಕೂ ತೃಪ್ತಿಕರ ಭಾವನೆಯನ್ನು ಮೂಡಿಸುತ್ತದೆ. ನಿಜವಾದ ಸಾಧಕರನ್ನು ಗುರುತಿಸುತ್ತದೆ ಎಂಬ ವಿಷಯವೇ ಒಂದು ಆಶಾದಾಯಕ ಅನುಭೂತಿಯನ್ನು ನೀಡುತ್ತದೆ.
” ಸಾಹಿತ್ಯ ಕ್ಷೇತ್ರದಿಂದ ನಿಮ್ಮನ್ನು ವಿಜೇತರನ್ನಾಗಿ ಆಯ್ಕೆ ಮಾಡಿದ್ದೇವೆ” ಎಂದು ಕರೆಮಾಡಿ ತಿಳಿಸಿದಾಗ ತುಂಬಾ ಸಂತೋಷವಾಯ್ತು. “ನಿಮ್ಮ ಇಂತಿಂಥ ಕೆಲಸಗಳನ್ನು ಪರಿಗಣಿಸಿದ್ದೇವೆ” ಎಂದು ಮೇಲ್ ಸಹ ಬಂದಾಗ ಎಂಥದ್ದೋ ತೃಪ್ತಿ.
ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿದ ಕೆಲವು ಸಾಧನೆಗಳು ಕೇವಲ ನನ್ನ ಮಟ್ಟಿನ ನೆನಪುಗಳು ಮಾತ್ರ…ಅವಕ್ಕೇನೂ ಗುರುತಿಸುವಿಕೆಯಿಲ್ಲ, ಬೆಲೆಯಿಲ್ಲ ಎಂದು ಎಷ್ಟೋಸಲ ಅನ್ನಿಸಿಬಿಡುತ್ತಿದ್ದಿತು. ಆದರೆ ಇಂಥ ಪರಿಶುದ್ದ ಪ್ರಶಸ್ತಿಗಳು ಆ ಕೆಲಸಗಳನ್ನು ಗುರುತಿಸಿದಾಗ ಸಿಗುವ ನೆಮ್ಮದಿಯೇ ಅಪಾರ.
ಒಂದೊಂದು ಕ್ಷೇತ್ರದಿಂದ ಒಬ್ಬೊಬ್ಬ ಸಾಧಕರನ್ನು ಆರಿಸಿದ ಈ ಸಂಸ್ಥೆ ಪ್ರಾರಂಭದ ಹಂತದಿಂದಲೂ ಅದೆಷ್ಟು ಆಸ್ಥೆಯಿಂದ, ಶ್ರದ್ಧೆಯಿಂದ ಕೆಲಸ ಮಾಡಿದೆಯೆಂದರೆ ವರ್ಣಿಸಲಸಾಧ್ಯ! ಸುಮಾರು ಅರವತ್ತಕ್ಕಿಂತಲೂ ಹೆಚ್ಚು ಸದಸ್ಯರನ್ನು ಒಳಗೊಂಡ ಈ ಸಂಸ್ಥೆಯ ಪ್ರತಿಯೊಬ್ಬರೂ ತಮಗೆ ಒದಗಿಸಿದ ಕೆಲಸಗಳನ್ನು ಪ್ರೀತಿಯಿಂದ ಮಾಡಿದ್ದಾರೆ. ವಿಜೇತರಿಗೆ ಫಲಿತಾಂಶ ತಿಳಿಸಿದ ಕ್ಷಣದಿಂದಲೂ ಆ ವಿಜೇತರಿಗೆ ಈ ಸಂಸ್ಥೆ ತಮ್ಮ ಮನೆಯೇ ಏನೋ ಎಂಬಷ್ಟು ಆತ್ಮೀಯ ಭಾವನೆಯನ್ನು ಮೂಡಿಸಿದ್ದು ಎಲ್ಲಕ್ಕಿಂತಲೂ ಮಿಗಿಲು. ಇಷ್ಟೆಲ್ಲಾ ಹೇಳಿದ ಮೇಲೆ ಈ ಸಂಸ್ಥೆಯ ಮುಖ್ಯಸ್ಥೆಯ ಹೆಸರನ್ನು ಹೇಳುವುದನ್ನು ಇನ್ನೂ ತಡಮಾಡಲಾರೆ!
ಸ್ಪೂರ್ತಿ ವಿಶ್ವಾಸ್ ಎಂಬ ಸೃಜನಶೀಲ ಮನಸಿನ ಚೈತನ್ಯದ ಚಿಲುಮೆಯೇ ಈ KWAA ಯ ಸ್ಥಾಪಕಿ. ಜಾಲಿಡೇಸ್, ಪೃಥ್ವಿ, ಮದುವೆ ಮನೆ, ಚೆಲ್ಲಿದರು ಸಂಪಿಗೆಯಾ, ಬುಲ್ ಬುಲ್…ಮುಂತಾದ ಅನೇಕ ಚಲನ ಚಿತ್ರಗಳಲ್ಲಿ ಅಭಿನಯಿಸಿರುವ ಸ್ಪೂರ್ತಿ ಕಲಾವಿದೆಯಾಗಿ ನಾಡಿನ ಜನತೆಗೆ ಪರಿಚಿತರು. ಅವರ ಕನಸಿನ ಕೂಸೇ KWAA. ಮಹಿಳಾ ಸಾಧಕಿಯರನ್ನು ಗುರುತಿಸಿ, ಗೌರವಿಸುವ ಆಶಯದಿಂದ ಸ್ಪೂರ್ತಿಯವರು ಸ್ಥಾಪಿಸಿದ ಈ ಸಂಸ್ಥೆ ಕೇವಲ ಐದಾರು ವರ್ಷಗಳಲ್ಲಿ ಒಂದು ಬ್ರ್ಯಾಂಡ್ ಆಗಿ ಹೆಸರು ಗಳಿಸಿರುವುದು ಅವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.

ವಿಜೇತರನ್ನು ಪೂರ್ವಭಾವಿಯಾಗಿ ಕರೆಸಿ ಒಂದು ಆತ್ಮೀಯ ಕೂಟವನ್ನು ಏರ್ಪಡಿಸಿದ್ದೂ ವಿಶೇಷವೆನ್ನಿಸಿತು. ಆ ಸಂದರ್ಭದಲ್ಲಿ ವಿಜೇತರು ಪರಸ್ಪರ ಪರಿಚಯ ಮಾಡಿಕೊಳ್ಳುವಲ್ಲಿ ಇದು ಸಹಕಾರಿಯಾಯಿತು.
ಆನಂತರ, ಅಂದರೆ ಇದೇ ಡಿಸೆಂಬರ್ 23ರಂದು ತಾಜ್ ವಿವಂತಾ ಹೋಟೆಲ್ ಸಭಾಂಗಣದಲ್ಲಿ ಅದ್ದೂರಿಯಾಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಮತಿ ಅಶ್ವಿನಿ ಪುನೀತ್ ರಾಜ್‍ಕುಮಾರ್‌ರವರು ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿಸಿದರು.

ಝಗಝಗಿಸುವ ದೀಪಗಳು, ವಿಶಿಷ್ಠವಾಗಿ ರೂಪಿತವಾದ ವೇದಿಕೆ, ಸೊಗಸಾದ ವ್ಯವಸ್ಥೆಗಳಿಂದ ಇಡೀ ಸಭಾಂಗಣವೇ ವೈಭವದಿಂದ ಶೋಭಿಸುತ್ತಿದ್ದಿತು.
ಸುಂದರವಾದ ಫ್ಯಾಶನ್ ಶೋ, ಆಕರ್ಷಕವಾದ ನಿರೂಪಣೆ, ಅಚ್ಚುಕಟ್ಟಾದ ನಿರ್ವಹಣೆಗಳಿಂದ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭವು ಒಂದು ದಿವ್ಯ ನೆನಪಾಗಿ ಉಳಿಯುವಂತಾಯ್ತು .

ವಿಜೇತರಿಂದ ಯಾವೊಂದು ಸಣ್ಣ ಶುಲ್ಕವನ್ನೂ ಪಡೆಯದೆ ಇಂಥ ಒಂದು ಅದ್ದೂರಿ ಸಮಾರಂಭವನ್ನು ಮಾಡಿ, ತುಂಬು ಅಭಿಮಾನದಿಂದ ಗೌರವಿಸಿದ್ದು ಅವಿಸ್ಮರಣೀಯವೆನ್ನಿಸಿತು. ಈ ಅಪೂರ್ವ ಕಾರ್ಯಕ್ರಮಕ್ಕೆ ಕಾರಣರಾದ ಪ್ರಾಯೋಜಕರನ್ನು ಖಂಡಿತವಾಗಿಯೂ ನೆನೆಯಲೇ ಬೇಕು. ಮುಖ್ಯ ಪ್ರಾಯೋಜಕರಾದ ಹೆಸರಾಂತ ಆಭರಣ ಮಳಿಗೆಯ ಮಾಲಿಕರಾದ “ಸಿ.ಕೃಷ್ಣಯ್ಯಚೆಟ್ಟಿ ಅಂಡ್ ಸನ್ಸ್ ” , ಅವರ ಪಾಲ್ಗೊಳ್ಳುವಿಕೆಯೇ ಶ್ಲಾಘನೀಯವೆನ್ನಿಸಿತು.
ವಿಜೇತರ ಪೂರ್ವಭಾವಿ ಮೀಟಿಂಗ್ ಆಗಿದ್ದು ಅವರ ಶೋರೂಮ್‍ನಲ್ಲಿಯೇ. ಎಲ್ಲಾ ವಿಜೇತರಿಗೂ ಅವರ ಉಡುಗೆಗೆ ಸೂಕ್ತವಾಗುವ ಹಾಗೂ ಬೆಲೆಬಾಳುವ ಮನಮೋಹಕ ಆಭರಣಗಳನ್ನು ಫೋಟೊಶೂಟ್‌ಗಾಗಿ ನೀಡಿದ್ದು ಇನ್ನಷ್ಟು ವಿಶಿಷ್ಟವೆನ್ನಿಸಿತು. ಹಾಗೆಯೇ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿಯೂ ಸಹ ಎಲ್ಲಾ ವಿಜೇತರಿಗೂ, ತೀರ್ಪುಗಾರರಿಗೂ ಆ ಸಂದರ್ಭದಲ್ಲಿ ಧರಿಸಲು ಅತ್ಯಂತ ಬೆಲೆಬಾಳುವ ಸುಂದರವಾದ ಆಭರಣಗಳನ್ನು ನೀಡಿದ್ದು ಅವರ ವಿಶ್ವಾಸನೀಯ ಮನಸ್ಸಿಗೆ ಸಾಕ್ಷಿಯಾಗಿತ್ತು. ಅದಷ್ಟೇ ಅಲ್ಲದೆ ಸಮಾರಂಭದ ಪೂರ್ತಿ ಸಮಯ ತಾವೂ ಜೊತೆಯಾಗಿ ಪಾಲ್ಗೊಂಡಿದ್ದು ಸಿ.ಕೃಷ್ಣಯ್ಯಚೆಟ್ಟಿ ಅಂಡ್ ಸನ್ಸ್ ಮಾಲಿಕರಾದ ಶ್ರೀ ವಿನೋದ್ ಹಯಗ್ರೀವ್ ಹಾಗೂ ಶ್ರೀಮತಿ ತ್ರಿವೇಣಿ ಅವರ ಗೌರವಪೂರ್ಣ ವ್ಯಕ್ತಿತ್ವವನ್ನು ಸಾಕ್ಷಾತ್ಕರಿಸಿತು.
ನಿಜಕ್ಕೂ ಸಾಧನೆಯ ಮುಂದಿನ ಹಾದಿಯಲ್ಲಿ ಇನ್ನಷ್ಟು ಸಾಧಿಸಬೇಕು ಎಂಬ ಉತ್ಸಾಹವನ್ನು ನೀಡುವುದೇ ಇಂಥ ಪ್ರಶಸ್ತಿಗಳ ಹಿರಿಮೆ.