ಬಾಬು ರಾಜೇಂದ್ರ ಪ್ರಸಾದ್ ಪ್ರಧಾನಿ ಹುದ್ದೆಯಲ್ಲಿ ಇದ್ದಾಗ ಸಾಂಕೇತಿಕವಾಗಿ ಒಂದು ₹ಸಂಬಳ ಪಡೆಯುತ್ತಿದ್ದರು. ಅವರ ಪತ್ನಿ ಹರಿದ ಸೀರೆ ಮನೆಯಲ್ಲಿ ತಾವೇ ಹೊಲಿದುಕೊಳ್ಳುತ್ತಿದ್ದರು. ರವಿಕೆ ಸಹ ತಮ್ಮ ತಾವೇ ತಯಾರಿಸಿಕೊಳ್ಳುತ್ತಿದ್ದರು. ಇವೆಲ್ಲ ಈಗ ನಂಬಲು ಅಸಾಧ್ಯ ಅನ್ನುವ ಹಂತಕ್ಕೆ ನಾವಿಂದು ತಲುಪಿ ಆಗಿದೆ. ಇನ್ನೇನು… ಚುನಾವಣೆ ಹತ್ತಿರ ಬಂದಿದೆ. ಹರಿದ ಸೀರೆ ಬದಲು ಹೊಸ ಸೀರೆ ಹಂಚುವ ಜನ ಬರುತ್ತಾರೆ. ಮಬ್ಬುಗತ್ತಲೆಯಲ್ಲಿ ನೋಟ್ ಇರಿಸಿದ ಕವರ್ ಕೈಗೆ ತುರುಕಿ ಹೋಗುವವರು ಬರುತ್ತಾರೆ. ಎಲ್ಲೋ ಪೊಲೀಸ್ ಕಣ್ಣು ತಪ್ಪಿಸಿ ಡ್ರಿಂಕ ಮತ್ತು ಪಾರ್ಟಿ ನಡೆಯುತ್ತವೆ. ನಿಮಗೆ ಅಚ್ಚರಿ ಆಗಬಹುದು…. ಧಾಬಗಳಲ್ಲಿ ಡ್ರಿಂಕ್ಸ್ ಪೂರೈಕೆ ಇಲ್ಲದೆ ಇದ್ದರೂ ಸ್ವಲ್ಪ ರೇಟ್ ಜಾಸ್ತಿ ಕೊಡುವುದಾದರೆ ಬಯಲು ಇಲ್ಲವೇ ಹೊಲಗಳಲ್ಲಿ ನೆಲದೊಳಗೆ ಹುಗಿದಿರಿಸಿದ ಬಾಟಲ್ ಹೊರ ಬರುತ್ತವೆ. ಹಬ್ಬಗಳ ಹೆಸರಿನಲ್ಲಿ ದೇವರುಗಳು ಹಂಚಲ್ಪಡುತ್ತವೆ. ಟಿವಿ ಒಂದೆರಡು ದಿನ ನೋಡಬಹುದು. ಕುಕ್ಕರ್ ಎರಡು ಹೊತ್ತಿನ ಅನ್ನ ಬೇಯಿಸಿದರೆ ಅದು ದೊಡ್ಡ ಭಾಗ್ಯ. ಪ್ರಚಾರಕ್ಕೆ ಜೊತೆ ಬರುವವರಿಗೆ ದುಡ್ಡು ಕೊಡಬೇಕು. ಅವರ ಊಟ ವ್ಯಸನಕ್ಕೆ ವ್ಯವಸ್ಥೆ ಮಾಡಬೇಕು. ಸ್ಟಾರ್ ಪ್ರಚಾರಕರು ಬಂದರಂತೂ ಡೋಲು ಬಾಜಾ ಭಜಂತ್ರಿ, ಕ್ರೇನ್ ಮೂಲಕ ಹಾರ ಇತ್ಯಾದಿ ವ್ಯವಸ್ಥೆ ಮಾಡಬೇಕು.
ಇದಕ್ಕೆಲ್ಲ ದುಡ್ಡು ಬೇಕು. ಮೊದಲು ಪಕ್ಷಗಳೇ ಖರ್ಚಿಗೆ ದುಡ್ಡು ಕೊಡುತ್ತಿದ್ದವು. ಈಗ ಅಭ್ಯರ್ಥಿಗಳೇ ಪಕ್ಷಕ್ಕೆ ಲಕ್ಷಾಂತರ ದುಡ್ಡು ಕೊಟ್ಟು ಟಿಕೆಟ್ ಪಡೆಯಬೇಕು. ಹೀಗಾಗಿ ಏನಿಲ್ಲವೆಂದರೂ 5-6ಕೋಟಿ ಹಣ ಬೇಕು. ಇದು ಸಾಮಾನ್ಯನಿಗೆ ನಿಲುಕದ ನಕ್ಷತ್ರ…!! ಕೋಟ್ಯಾಧೀಶರಿಗೆ ಮಾತ್ರ ಇಲ್ಲಿ ಅವಕಾಶ..!! ಪ್ರಜ್ಞಾವಂತ ವ್ಯಕ್ತಿಗಳಿಗೆ ರಾಜಕೀಯ ಪ್ರವೇಶ ಅಂದರೆ ಮುಚ್ಚಿದ ಬಾಗಿಲು…
ಗೆದ್ದವರು ಮೊದಲು ಮಾಡುವುದು ತಾವು ಹಾಕಿದ ಹಣ ಬಳಿದುಕೊಳ್ಳುವುದು. ಸೋತವರು ಆಡಳಿತದ ಗೌಪ್ಯ ವ್ಯವಹಾರಗಳ ಬಗ್ಗೆ ನಿಗಾ ಇಟ್ಟು ಬೆದರಿಕೆ ಒಡ್ಡಿ ಕಮಿಷನ್ ಪಡೆಯುವುದು.
ಚುನಾವಣಾ ಆಯೋಗ ಎಷ್ಟೇ ಜಾಗರೂಕ ಹೆಜ್ಜೆ ಇಟ್ಟರೂ ಪ್ರತಿಫಲ ಸಿಗುವುದಿಲ್ಲ. ಈಗಾಗಲೇ ಸುಮಾರು 8000ಕೋಟಿಗೂ ಮೀರಿ ನಗದು ವಶಕ್ಕೆ ಪಡೆದಿದ್ದಾರೆ. ಲಕ್ಷಾನುಗಟ್ಟಲೆ ವಸ್ತು, ಬಂಗಾರ, ಬೆಳ್ಳಿ ವಶ ಪಡೆದಿರುವರು. ಇದು ತಮಗೆ ಸಂಬಂಧಿಸಿದ್ದು ಅಲ್ಲ ಅನ್ನುವುದೇ ಎಲ್ಲ ಈ ಸಭ್ಯರ ವಿವರಣೆ.
ಇನ್ನು ಪಕ್ಷಾoತರ. ಹಣ ಮತ್ತು ಅಧಿಕಾರಕ್ಕಾಗಿ ಪ್ರತಿಯೊಬ್ಬರೂ ನೈತಿಕತೆಗೆ ನೈವೇದ್ಯ ನೀಡಿ ಗಿಡ ಮಂಗ ಆಟ ಆರಂಭಿಸುತ್ತಾರೆ. ಕೆಲವರಿಗೆ ಇದೊಂದು ಲಾಭ ತರುವ ಬಿಸಿನೆಸ್. ಗೆಲುವು ಗಗನ ಕುಸುಮ ಎಂದು ಗೊತ್ತಿದ್ದರೂ ನಾಮ ಪತ್ರ ಸಲ್ಲಿಸುವುದು ಮತ್ತು ದೊಡ್ಡ ಪಕ್ಷಗಳು ಸಂಪರ್ಕಿಸಿ ದುಡ್ಡು ಕೊಟ್ಟಾಗ ಐದು ವರ್ಷದ ಕಮಾಯಿ ಆಯ್ತೆoದು ನಾಮ ಪತ್ರ ಹಿಂದೆ ಪಡೆಯುವುದು.
ಇದು ಹಣಕಾಸಿನ ವಿಚಾರವಾದರೆ ಈಗ ಚುನಾವಣೆ ಜಾತಿ ಧರ್ಮಗಳನ್ನು ಸಹ ಅಪ್ಪಿಕೊಂಡಿವೆ. ಹೆಸರಿಗಷ್ಟೇ ನಮ್ಮದು ಸರ್ವ ಸ್ವತಂತ್ರ ಜಾತ್ಯತೀತ ರಾಷ್ಟ್ರ. ಆದರೆ ಇಲ್ಲಿ ಜಾತಿ ಧರ್ಮಗಳೇ ಮೂಲಾಧಾರ. ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಮತ ಚಲಾವಣೆ ವರೆಗೆ ಇದು ಅಸ್ತಿತ್ವದಲ್ಲಿ ಇರುತ್ತದೆ.
ಪಕ್ಷಗಳ ಪ್ರಣಾಳಿಕೆಗಳೂ ಇಲ್ಲಿ ಆಸೆ ಹುಟ್ಟಿಸುತ್ತವೆ. ಒಬ್ಬರು ರೈತರಿಗೆ ಹಣ ಕೊಡುತ್ತೇವೆ ಅಂದರೆ ಇನ್ನೊಬ್ಬರು ನಿರುದ್ಯೋಗಿಗಳಿಗೆ, ಮನೆ ವಡತಿಗೆ ಹಣದ ಭರವಸೆ ಕೊಡುತ್ತದೆ. ಇದೆಲ್ಲ ಸಾಧ್ಯವೇ? ಅಷ್ಟು ಹಣ ಖಜಾನೆ ಭರಿಸಿಕೊಂಡು ಸರಕಾರ ನಡೆಸಲು ಸಾಧ್ಯವೇ.? ಸಾಧಾರಣ ಅವಧಿಯಲ್ಲೇ ನೌಕರರಿಗೆ ಸಕಾಲಿಕ ಸಂಬಳ ನೀಡುವ ಪರಿಸ್ಥಿತಿ ಇಲ್ಲ. ಇನ್ನು ಹೆಚ್ಚುವರಿ ಹಣದ ಭಾರ ತೂಗಿಸುವುದು ಆಕಾಶ ದೀಪವೇ ಸರಿ. ಸಿಲಿಂಡರ್ ಸಬ್ಸಿಡಿ ಮುಂದುವರಿಸಲು ಕೇಂದ್ರವೇ ವಿಫಲ ಆಗಿರುವಾಗ ರಾಜ್ಯಕ್ಕೆ ಇದು ಹೇಗೆ ಸಾಧ್ಯ? ಪ್ರಣಾಳಿಕೆ ಮುಖ್ಯ ಅಲ್ಲ. ಅವುಗಳ ಅನುಷ್ಠಾನಕ್ಕೆ ಏನು ವ್ಯವಸ್ಥೆ ಮಾಡಲಾಗುವುದು ಅನ್ನುವ ಚಿಂತನೆ ಬೇಕು. ಒಬ್ಬರು ಭರವಸೆ ಕೊಟ್ಟರೆಂದರೆ ಇನ್ನೊಬ್ಬರು ಕೊಡುವುದು…
ಇವು ಯಾವುದೂ ಆಚರಣೆಗೆ ಬರುವುದಿಲ್ಲ.
ಬೆಲೆ ಏರಿಕೆ.. ಹೌದು. ಡೀಸೆಲ್ ಪಟ್ರೊಲ್ ದರ ಜಾಗತಿಕ ಮಾರುಕಟ್ಟೆ ಲಭ್ಯತೆ ಅವಲಂಬಿಸಿರುತ್ತದೆ. ಬೇರೆ ಸರಕಾರ ಬಂದ ಮಾತ್ರಕ್ಕೆ ಇವುಗಳ ಬೆಲೆ ಇಳಿಸಲು ಸಾಧ್ಯ ಇಲ್ಲ. ಕೇವಲ ಅಕ್ಕಿ ಕೊಟ್ಟರೆ ಅಡುಗೆ ಪೂರ್ಣ ಆಗುವುದಿಲ್ಲ. ಈ ಪುಕ್ಕಟೆ ಅಕ್ಕಿ ಓಣಿ ಗಲ್ಲಿಗಳಲ್ಲಿ ₹15ಕ್ಕೆ ಕೆಜಿ ಮಾರಾಟ ಆಗುವ ವಿಷಯ ಗೊತ್ತಿದ್ದೂ ನೀಡುವುದರ ಅವಶ್ಯಕತೆ ಏನು?
ಮನೆ ಮನೆಗೆ ನೀರು… ಅಂಕಿ ಸಂಖ್ಯೆ ಹೇಳುತ್ತಾರೆ ಅಷ್ಟೇ. ಎಷ್ಟು ನಳಗಳಲ್ಲಿ ನೀರು ಬರುತ್ತದೆ ಮೀಟರ್ ಕೂರಿಸಲಾಗಿದೆ ಯಾರಿಗೂ ಗೊತ್ತಿಲ್ಲ. ಆಯ್ಕೆ ಆದ ವ್ಯಕ್ತಿ ಹಾರ, ಶಾಲು ಸನ್ಮಾನಕ್ಕೆ ಒಮ್ಮೆ ಬಂದರೆ ಮುಗಿಯಿತು. ಈಗ ಕೈ ಮುಗಿಯುತ್ತ ಬಂದವರು ಮುಂದೆ ಕೈಗೆ ಸಿಗುವುದಿಲ್ಲ ಅನ್ನುವುದು ಹಿರೀಕರೆಲ್ಲರ ಅಭಿಮತ.
ಹೀಗೆ ಭಾರತದ ಚುನಾವಣೆ ವ್ಯವಸ್ಥೆ ರಾಜಕೀಯ ವ್ಯಕ್ತಿಗಳ ಕೈಗೆ ಸಿಕ್ಕು ಅರ್ಥ ಕಳೆದುಕೊಂಡಿದೆ. ಮತದಾರರ ಅವಗಣನೆಗೆ ತುತ್ತಾಗಿದೆ. ಯಾರು ಗೆದ್ದರೂ ನಮ್ಮ ಜೀವನ ಕ್ರಮದಲ್ಲಿ ಯಾವುದೂ ಸುಧಾರಣೆ ಸಾಧ್ಯ ಇಲ್ಲ ಅನ್ನುವ ಅಚಲ ನಂಬಿಕೆ ಬಂದು ಬಿಟ್ಟಿದೆ. ಸುಮ್ಮನೆ ಹೊಟ್ಟೆ ಕಿಚ್ಚಿಗೆ ಮತದಾನಕ್ಕೆ ತೆರಳಿ ಕಣ್ಮುಚ್ಚಿ ಯಾವುದೋ ಒಂದು ಬಟನ್ ಪ್ರೆಸ್ ಮಾಡಿ ಬಂದು ಬಿಡುತ್ತಾರೆ ಅಷ್ಟೇ.
ಹಗ್ಗ ಹರಿಯುವುದಿಲ್ಲ… ಕೋಲು ಮುರಿಯುವುದಿಲ್ಲ.