ಚಿತ್ರದುರ್ಗದ ಪಾಳೇಪಟ್ಟಿನ ಸ್ಥಾಪಕ ; ಅತುಲ ಪರಾಕ್ರಮಿಯೂ… ಆಸೀಮ ಧೈರ್ಯಶಾಲಿಯೂ ಆದ ಮತ್ತಿ ತಿಮ್ಮಣ್ಣ ನಾಯಕ… Part – 1

Matti thimmanna nayaka


ಈತನ ಯುದ್ಧ ಚಾತುರ್ಯವನ್ನೂ… ಎಂದಿಗೂ ಸೋಲೊಪ್ಪದ ಶೌರ್ಯವನ್ನೂ ಕಣ್ಣಾರೆ ಕಂಡ ವಿಜಯನಗರದ ದಳಪತಿಗಳು ಕ್ರಿಸ್ತಶಕ 1593 ರ ವಿಭವ ಸಂವತ್ಸರದ ಒಂದು ಶುಭಘಳಿಗೆಯಲ್ಲಿ ಮತ್ತಿ ತಿಮ್ಮಣ್ಣ ನಾಯಕರಿಗೆ ಚಿತ್ರದುರ್ಗದ ಅಧಿಪತ್ಯವನ್ನು ನೀಡಿದರು…
ಹಾಗಂತ… ಅವರು ಕೊಟ್ಟ ಮೇಲೆಯೇ ಚಿತ್ರದುರ್ಗದ ಉದಯವಾಯಿತೇನು… ದುರ್ಗದ ಸಿಂಹಾಸನದ ಅಲಂಕರಿಸಿದ್ದಕ್ಕೇನೇ ಮತ್ತಿ ತಿಮ್ಮಣ್ಣ ನಾಯಕರು ದೊರೆ ಎನಿಸಿಕೊಂಡರೇನು…
ಅಲ್ಲವೇ ಅಲ್ಲ…
ದುರ್ಗದ ಸಿಂಹಾಸನ ದಕ್ಕೊದಕ್ಕೆ ಬಹಳ ಮುಂಚಿತವಾಗೇ ಮತ್ತಿ ತಿಮ್ಮಣ್ಣ ನಾಯಕರು “ಹಡವನ ಹಾಳಿ” ಗೆ ಬಂದು ತಮ್ಮ ಪಾಳೆಪಟ್ಟನ್ನು ಸ್ಥಾಪಿಸಿಕೊಂಡಿದ್ದರು… ಕ್ರಿಸ್ತಶಕ 1565 ರ ಐತಿಹಾಸಿಕ ತಾಳೀಕೋಟೆ ಯುದ್ಧದಲ್ಲಿ ವಿಜಯನಗರದ ಪ್ರಾಬಲ್ಯ ಸಂಪೂರ್ಣವಾಗಿ ಕುಸಿದು ಹೋಗಿತ್ತು…
ಇತ್ತ… ಸ್ವತಃ ವೀರಾಗ್ರಣಿಯಾದ ಮತ್ತಿ ತಿಮ್ಮಣ್ಣ ನಾಯಕರು ಯಾವ ದೊಣ್ಣೆ ನಾಯಕನ ಅಪ್ಪಣೆಗೂ ಕಾಯದೆ ಒಂದಾದ ಮೇಲೊಂದು ಪಾಳೆಪಟ್ಟನ್ನು ಗೆಲ್ಲುತ್ತಾ ತಮ್ಮ ಸೀಮೆಯನ್ನು ಭರ್ಜರಿಯಾಗಿ ಕಟ್ಟುತ್ತಿದ್ದರು… ಇದನ್ನೆಲ್ಲಾ ಮೂಕವಿಸ್ಮಿತರಾಗಿ ನೋಡುತ್ತಿದ್ದ ವಿಜಯನಗರದ ದಳಪತಿಗಳು ಇಂಥಾ ವೀರ್ಯವಂತನೊಬ್ಬ ನಮ್ಮ ಸ್ನೇಹಿತನಾಗಿದ್ದರೆ ನಮಗೇ ಲಾಭವೆಂದರಿತು ಅವರಿಗೆ ದುರ್ಗದ ನಾಯಕತ್ವವನ್ನು ನೀಡಿದರು… ಹೀಗೆ ಸಿಕ್ಕ ಅವಕಾಶವನ್ನು ಸಂಪೂಣವಾಗಿ ಉಪಯೋಗಿಸಿಕೊಂಡ ನಾಯಕರು ಅತ್ಯಂತ ದುರ್ಭೆದ್ಯವಾದ ಏಳುಸುತ್ತಿನ ಕೋಟೆಯನ್ನು ನಿರ್ಮಿಸಿ ದುರ್ಗದ ಸಿಂಹಾಸನದ ಮೇಲೆ ವಿರಾಜಮಾನರಾದರು…
ಮುಂದೆ ಬಂದAತಹ ನಾಯಕರ ವಂಶಸ್ಥರೆಲ್ಲ ಯಾರ ಹಂಗಿಗೂ ಬೀಳದೆ ಸರ್ವತಂತ್ರ ಸ್ವತಂತ್ರರಾಗಿ ತಮ್ಮ ಸರಹದ್ದನ್ನು ವಿಸ್ತರಿಸುತ್ತಾ ಬಂದರು…
ಹೀಗಿರುವಾಗ… ಧೀರೋದಾತ್ತರ ಪರಂಪರೆಯ ಹೆಮ್ಮೆಯ ಕುಡಿ ಮದಕರಿ ನಾಯಕರು ಆಳುವಂಥ ಕಾಲಕ್ಕೆ ದುರ್ಗದ ಸಿಂಹಾಸನ ಕುಸಿಯಲು ಕಾರಣಗಳೇನು…
ಅತುಲ ಪರಾಕ್ರಮಿ ಮತ್ತಿ ತಿಮ್ಮಣ್ಣ ನಾಯಕರು ಸ್ವಸಾಮರ್ಥ್ಯದಿಂದ ಒಂದರ ಹಿಂದೊAದು ಯುದ್ಧಗಳನ್ನು ಗೆಲ್ಲುತ್ತಾ ತಮ್ಮ ಶೌರ್ಯ ಪ್ರದರ್ಶನ ಮಾಡುತ್ತಿದ್ದ ಹೊತ್ತಿನಲ್ಲೇ… ವಿಜಯನಗರದ ದಳಪತಿಗಳು ಸ್ನೇಹ ಹಸ್ತ ಚಾಚಿದ ಫಲವಾಗಿ ಚಿತ್ರದುರ್ಗದಲ್ಲಿ ತಕ್ಕ ಮಟ್ಟಿಗಿನ ಕೋಟೆಯನ್ನೂ… ಅರಮನೆಯನ್ನೂ ಕಟ್ಟಿಕೊಂಡು ನಿಂತದ್ದು ಸರಿಯಷ್ಟೇ…
ಸ್ನೇಹ ಬರೀ ಗಂಟಲಿನಾಚೆಗೆ ಆಡುತ್ತಿತ್ತು… ಒಳಗೆ ಕಿಬ್ಬೊಟ್ಟೆಯಾಳದಲ್ಲಿ ಮತ್ಸರವೆಂಬ ಕಿಚ್ಚಿನ ದಾವನಲ ಧಗಧಗನೆ ಉರಿಯುತ್ತಿತ್ತು… ನಾಯಕರ ಏಳಿಗೆಯನ್ನು ವಿಜಯನಗರದ ದಳಪತಿಗಳು ಕನಸಿನಲ್ಲೂ ಸಹಿಸದೇ ಹೋದರು…
ಕಳ್ಳನಿಗೊಂದು ಪಿಳ್ಳೆ ನೆವ…
ಹ್ಯಾಗಾದ್ರೂ ಮಾಡಿ ಮತ್ತಿ ತಿಮ್ಮಣ್ಣ ನಾಯಕರನ್ನ ತೆಗೆದು ಬಿಡಬೇಕು ಅನ್ನೋ ಹಠಕ್ಕೆ ಬಿದ್ದ ದಳಪತಿಗಳು ಸೇನಾಧಿಪತಿ ಸಾಳುವ ನರಸಿಂಗರಾಯನನ್ನು ದುರ್ಗಕ್ಕೆ ಕಳಿಸಿದರು… ರಣವೀಳ್ಯ ಪಡೆದ ನರಸಿಂಗರಾಯ ತನ್ನ ಸೇನೆಯೊಡನೆ ದುರ್ಗದ ಬೆಟ್ಟದ ಕಿಬ್ಬೆಯಲ್ಲಿ ಡೇರೆ ಹಾಕಿ ನಿಂತ…
ನಕ್ಕರು… ವಿಷಯ ತಿಳಿದ ಮತ್ತಿ ತಿಮ್ಮಣ್ಣ ನಾಯಕರು… ಒಡನೆಯೇ ಅವುಡುಗಚ್ಚಿತು… ಹುಬ್ಬು ಹಾರಿತು… ಕಣ್ಣು ಕೆಂಡದುAಡೆಗಳಾಗಿ ಮೂಗಿನ ಹೊಳ್ಳೆಗಳಲ್ಲಿ ಬಿಸಿಗಾಳಿ ಆಡಲಾರಂಭಿಸಿತು… ಬಲಗಾಲನ್ನು ರಪ್ಪನೆ ನೆಲಕ್ಕೆ ಬಡಿದು ಹೊಸಕಿ ಹಾಕುತ್ತಾ… ಎಲಾ ಕುನ್ನಿ… ಹುಲಿ ಗುಹೆಯ ಬಾಗಿಲಿಗೇ ಬರುವಷ್ಟು ಧೈರ್ಯವೇ ನಿನಗೆ… ಜೊತೆಗೆ ಸೈನ್ಯ ತಕ್ಕೊಂಡು ಬಂದಿರೋ ರಣಹೇಡಿ ನೀನು… ಒಬ್ಬನೇ ನಿನ್ನ ಡೇರೆಗೆ ನುಗ್ಗಿ ಧೂಳೆಬ್ಬಿಸಲಿಲ್ಲಾ ಆಗ ಕೇಳು… ಅಬ್ಬರಿಸಿದ ನಾಯಕರು ರಾತ್ರಿಯಾಗುವುದನ್ನೇ ಕಾಯುತ್ತ ಕುಳಿತರು…

ಮಧ್ಯರಾತ್ರಿ ಸಮೀಪಿಸಿತು… ಸರಸರನೆ ಬೆಟ್ಟವಿಳಿದ ತಿಮ್ಮಣ್ಣ ನಾಯಕರು ಬೆಕ್ಕಿನ ಹೆಜ್ಜೆಗಳನ್ನಿಡುತ್ತಾ ಶತ್ರು ಪಾಳೆಯಕ್ಕೆ ನುಗ್ಗಿದರು… ಗಾಡಾಂಧಕಾರ… ನಾಯಕರ ಹುಲಿಯಂಥ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು… ಡೇರೆಯ ಒಂದೊAದು ಗೂಡನ್ನೂ ತೀಕ್ಷವಾಗಿ ದಿಟ್ಟಿಸುತ್ತಾ ಬಂದ ನಾಯಕರು ಒಂದೆಡೆ ತಟ್ಟನೆ ನಿಂತರು… ಅಲ್ಲಿತ್ತು ಅದು…

To Be Continued…..

-ಧರ್ಮೇಂದ್ರ ಕುಮಾರ್ ಅರೇನಹಳ್ಳಿ

Leave a Comment

Your email address will not be published. Required fields are marked *

Scroll to Top