ಲೇಟಾದರೂ ಪರವಾಗಿಲ್ಲ ಡಾ. ವಿಜಯಲಕ್ಷ್ಮಿ ಅವರಿಗೆ‌ ಪದ್ಮಶ್ರೀ ಪ್ರಶಸ್ತಿಗೆ ಗೌರವ ಬಂದಂತಾಯ್ತು.

ಕಾಟನ್ ಸೀರೆ, ಸದಾ ಹೆಗಲು ಮುಚ್ಚುವ ಸೆರಗು, ಹಣೆಯಲ್ಲಿ ಕುಂಕುಮ, ಮುಖದಲ್ಲೊಂದು ಮಾಸದ ನಗು. ಸದಾಸೀದ ಹೆಣ್ಣು ಮಗಳು. ಹಮ್ಮು, ಬಿಮ್ಮು‌ ಬಿಡಿ, ಗಟ್ಟಿಯಾಗಿ ‌ಮಾತನಾಡಿದ್ದು ಕೇಳದವರಿಲ್ಲ. ಸಣ್ಣ ಮನೆಯೊಂದರಲ್ಲಿ ಸರಳ ಜೀವನ. ಕೃಷ್ಣನ ಪರಮಭಕ್ತೆ.
ಕೈಯಲ್ಲಿ ಸ್ಟೆತಾಸ್ಕೋಪ್ ಹಿಡಿದು ಆಕೆ ನಡೆದು ಬರುತ್ತಿದ್ದರೆ,‌ ಜೀವನ್ಮರಣದ ನಡುವೆ ಹೋರಾಡುತ್ತಿರುವ ರೋಗಿಗಳ ಕಣ್ಣಲ್ಲಿ ಭರವಸೆಯ ಬೆಳಕು. ಕ್ಯಾನ್ಸರ್ ‌ರೋಗಿಗಳ ಪಾಲಿನ ಆಶಾಕಿರಣವೇ ಡಾ. ವಿಜಯಲಕ್ಷ್ಮಿ ‌ದೇಶಮಾನೆ.
ಕಲಬುರಗಿ ಮೂಲದ ಹೆಸರಾಂತ ಕ್ಯಾನ್ಸರ್‌ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಪದ್ಮಶ್ರೀ ಪುರಸ್ಕಾರ ಒಲಿದು ಬಂದಿದೆ.
ತರಕಾರಿ ಮಾರಾಟ ಮಾಡುವ ಕುಟುಂಬದಿಂದ ಕ್ಯಾನ್ಸರ್‌ ಸರ್ಜನ್‌ , ಪದ್ಮಶ್ರೀ ಪುರಸ್ಕಾರವರೆಗೆ ವಿಜಯಲಕ್ಷ್ಮೀ ಸಾಗಿದ ದಾರಿಯುದ್ದಕ್ಕೂ ಬರೀ‌ ಕಷ್ಟಗ ಸರಮಾಲೆ ಹೊತ್ತೆ ಸಾಧಿಸಿದವರು.
ಕ್ಯಾನ್ಸರ್‌ ರೋಗಿಗಳ ಪಾಲಿನ ಧನ್ವಂತರಿ ಎಂದೇ ಖ್ಯಾತಿ ಗಳಿಸಿದ್ದರು. ಅದಕ್ಕೆ ಕಾರಣ ಅವರ ಶ್ರದ್ಧೆ, ಶ್ರಮ, ತ್ಯಾಗ, ಮಾನವೀಯ ಕಳಕಳಿ, ವೈದ್ಯ ವೃತ್ತಿಯನ್ನೇ ಉಸಿರಾಗಿಸಿಕೊಂಡು ಬದುಕಿದ ಅಪರೂಪದ ವೈದ್ಯೆ.
ಎಂ ಬಿ ಬಿ ಎಸ್, ಎಂ ಎಸ್ (ಜನರಲ್ ಸರ್ಜರಿ) ಎಫ.ಎ. ಐ. ಎಸ್‌. ಪದವಿ ಪಡೆದು ಕಿದ್ವಾಯಿ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್‌ ಎನ್ನಾಲಜಿಯಲ್ಲಿ ಸರ್ಜರಿಯ ಪ್ರಾಧ್ಯಾಪಕರಾಗಿದ್ದ ಅವರು ‌ಕಿದ್ವಾಯಿ‌‌ ನಿರ್ದೇಶಕಿಯಾಗಿಯೂ ಕೆಲಸ ನಿರ್ವಹಿಸಿದ್ದರು.
ಕಲಬುರಗಿಯ ಕೊಳಗೇರಿ ಪ್ರದೇಶದಲ್ಲಿ ವಾಸವಾಗಿದ್ದರು ವಿಜಯಲಕ್ಷ್ಮಿ ‌ಹೆತ್ತವರು. ತಂದೆ ಬಾಬುರಾವ್ ಕಟ್ಟಿಗೆ ಕಡಿಯುವುದು, ಕೂಲಿ ಮಾಡುತ್ತಾ ಮಿಲ್ ಒಂದರಲ್ಲಿ ಕಾರ್ಮಿಕನಾಗಿ ಸೇರಿದರು. ತಾಯಿ ರತ್ನಮ್ಮ ತರಕಾರಿ ಮಾರಾಟದಿಂದ ಕುಟುಂಬಕ್ಕೆ ನೆರವಾಗಿದ್ದರು.. ಬಾಬುರಾವ್- ರತ್ನಮ್ಮ ದಂಪತಿಗೆ ವಿಜಯಲಕ್ಷ್ಮಿಸೇರಿದಂತೆ ಏಳು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ದಿನದ ದುಡಿಮೆಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಕುಟುಂಬದಲ್ಲಿ ವಿಜಯಲಕ್ಷ್ಮಿ ಅವರು ವೈದ್ಯೆಯಾಗಿ ಬಡವರಿಗೆ ಒಳ್ಳೆಯ ಸೇವೆ ಒದಗಿಸಬೇಕು ಎಂಬುದು ಹೆತ್ತವರ ಕನಸು.

ಕಲಬುರಗಿಯ ಚಕ್ರಕಟ್ಟಾ ಮಾರುತಿ ಮಂದಿರದ ಬಳಿ ತರಕಾರಿ ಮಾರುತ್ತ ಜೀವನ ಸಾಗಿಸುತ್ತಿದ್ದ ತಾಯಿಯೊದಿಗೆ ತರಕಾರಿ ಮಾರುತ್ತಲೇ ಹೈಸ್ಕೂಲ್‌ ಶಿಕ್ಷಣ ಕನ್ನಡ ಪೂರೈಸಿದ ವಿಜಯಲಕ್ಷ್ಮೀ ನಂತರ ಹುಬ್ಬಳ್ಳಿಯಿಂದ ವೈದ್ಯಕೀಯ ಪದವಿ ಪಡೆದರು. ಮಗಳು ವೈದ್ಯಳಾಗಬೇಕೆಂಬ ಆಸೆಗೆ ತಾಯಿ ರತ್ನಮ್ಮ ತಮ್ಮ ಮಂಗಳಸೂತ್ರ ಮಾರಿ ಅದರಿಂದ ಬಂದ ಹಣದಿಂದಲೇ ವಿಜಯಲಕ್ಷ್ಮೀಯವರ ವೈದ್ಯಕೀಯ ಶಿಕ್ಷಣದ ಶುಲ್ಕ ಭರಿಸಿದ್ದರು.
ತರಕಾರಿ ಮಾರುತ್ತಲೇ ಓದುತ್ತಾ, ಡಾಕ್ಟರ್ ಪದವಿ ಪಡೆದ ಬಂದ ಡಾ. ವಿಜಯಲಕ್ಷ್ಮೀ ದೇಶಮಾನ್ಯೆ ಕ್ಯಾನ್ಸರ್‌ ಸರ್ಜನ್‌ ಆಗಿ ಮಾಡಿರುವ ಸಾಧನೆ, ಸಾಗಿದ ದಾರಿ, ಏರಿದ ಎತ್ತರ ಮಾದರಿ. ರೋಗಿಗಳ ಸೇವೆಯೇ ಪರಮ‌ ಧ್ಯೇಯವಾಗಿಸಿಕೊಂಡಿದ್ದ ಡಾ. ವಿಜಯಲಕ್ಷ್ಮಿ, ದಿನದ ಬಹುತೇಕ ‌ಸಮಯ ಆಸ್ಪತ್ರೆಯಲ್ಲೇ ಕಳೆಯುತ್ತಿದ್ದರು. ಸಮಯದ ಪರಿವೆಯೇ ಇಲ್ಲದೇ ಚಿಕಿತ್ಸೆ ನೀಡಬೇಕೆಂಬ ಉದ್ದೇಶಕ್ಕೆ ಡಾ.ವಿಜಯಲಕ್ಷ್ಮಿ ವಾಚ್ ಕಟ್ಟುತ್ತಲೇ ಇರಲಿಲ್ಲವಂತೆ. ಅವರು ಗಳಿಸಿದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ದೇಶ, ವಿದೇಶಗಳಲ್ಲೂ ಅವರ ಸಾಧನೆ ಗುರುತಾಗಿದೆ. ತಮ್ಮ ಬದುಕನ್ನೇ ವೈದ್ಯ ವೃತ್ತಿಗೆ ಸಮರ್ಪಿಸಿದ ಡಾ. ವಿಜಯಲಕ್ಷ್ಮಿ, ರಾತ್ರೋರಾತ್ರಿ ‌ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ವೈದ್ಯರ ನಡುವೆ, ಸೇವೆಯಿಂದಲೇ ಫೇಮಸ್ ಆದ ಡಾ.ವಿಜಯಲಕ್ಷ್ಮಿ.

   

Courtesy :
Smt Shobha Malavalli

Leave a Comment

Your email address will not be published. Required fields are marked *

Scroll to Top