ಆಗಿನ್ನು ಹೊರಗೆ ಆಕಾಶದಲ್ಲಿ ಸೂರ್ಯ ಜಾರಿ ಚಂದ್ರ ಇಣುಕುತಲಿದ್ದ. ಇತ್ತ ಶಾಲೆಯಿಂದ ಬಂದ ದೀಕ್ಷಾ ಎರಡು ದಿನದಿಂದ ಇಟ್ಟಿದ್ದ ತನ್ನ ಬೇಡಿಕೆಯನ್ನು ರಾಗವೆಳೆಯುತ್ತಾ.. ಮತ್ತೆ ಪೆಚ್ಚು ಮೋರೆ ಹಾಕಿಕೊಂಡು ಅಮ್ಮನ ಬೆನ್ನು ಬಿದ್ದಿದ್ದಳು.
“ಅಮ್ಮ ನೀನು ಅಪ್ಪನಿಗೆ ಹೇಳ್ತೀನಿ ಹೇಳ್ತೀನಿ ಅಂತ ಎರಡು ದಿನ ಆಯ್ತು ನಾಳೆ ಅಂತೂ ಶನಿವಾರ ಅಪ್ಪನಿಗೂ ರಜೆ ನೀನು ಅವರಿಗೆ ನನಗಾಗಿ ಮೇಲುಗಡೆಯ ಖಾಲಿ ರೂಮ್ ಅನ್ನು ರೆಡಿ ಮಾಡಿ ಕೊಡಿ ಅಂತ ಹೇಳಲೇ ಬೇಕು ಆಯ್ತಾ..? ನನ್ನ ಫ್ರೆಂಡ್ ನೀಲಿ ನೋಡು ಅವಳದೇ ಒಂದು ರೂಮು ಅವಳ ತಮ್ಮನದೇ ಒಂದು ರೂಮು ನಾವು ಮಾತ್ರ ಎಲ್ಲ ಇಲ್ಲೇ ಎಲ್ಲಾ ಒಟ್ಟಿಗೆ ಇಟ್ಕೋಬೇಕು ಈ ಧೀರು ಅಂತೂ ಒಂದು ಚೂರು ಕ್ಲೀನ್ ಇಲ್ಲ ಬ್ಯಾಟು, ಪೆನ್ನು ಪೆನ್ಸಿಲ್ಲು, ಚಡ್ಡಿ , ಟವೆಲ್ಲು ಎಲ್ಲಾ ಎಲ್ಲೆಂದರಲ್ಲಿ ಹಾಕ್ತಾನಮ್ಮ, ನಂಗೊತ್ತಿಲ್ಲ ನಾನು ಮೇಲಿನ ರೂಮಿನಲ್ಲಿ ನಂದಲ್ಲ ವಸ್ತುಗಳನ್ನು ಇಟ್ಟು ಕೊಳ್ಳುತ್ತೇನೆ. ನನಗೆ ಓದೋಕೂ ಆರಾಮ ಆಗುತ್ತೆ” ಎಂದು ಅಸಮಾಧಾನದಿಂದ ಮುಖವನ್ನು ದೊಡ್ಡದು ಮಾಡಿದಾಗ ಕುಸುಮ “ಆಯ್ತು ಅಂತ ಹೇಳಿದ್ನಲ್ಲೇ.. ಎಷ್ಟು ಸರಿ ಹೇಳಿದ್ದೆ ಹೇಳ್ತೀಯಾ ಇವತ್ತೇ ಅಪ್ಪನ ಹತ್ತಿರ ಮಾತಾಡುತ್ತೇನೆ ಸರೀನಾ ಈಗ ಮೊದಲು ಹಾಲು ಕುಡಿ” ಎಂದು ಹೊಗೆಯಾಡುವ ನೊರೆ ಹಾಲನ್ನು ದೀಕ್ಷಾಳ ಮುಂದಿಡುತ್ತಲೇ “ನಾಳೆ ಅಜ್ಜಿ ಬರ್ತಾರೆ ಅಂತ ಅಪ್ಪ ಮಧ್ಯಾಹ್ನ ಹೇಳುದ್ರು ಅವರು ಬಂದು ಹೋದ ಮೇಲೆ ರೆಡಿ ಮಾಡಿ ಕೊಡ್ತಾರೆ ಬಿಡು” ಎಂದು ತಾನು ತಂದಿದ್ದ ತರಕಾರಿಗಳನ್ನು ತೊಳೆಯ ತೊಡಗಿದಳು ಕುಸುಮ.
” ಹ್ಞಾಂ…! ಹೌದಾ..? ಇನ್ನು ನಾಳೆ ಅವರ ಜೊತೆನೂ ರೂಮ್ ಷೇರು ಮಾಡ್ಕೋಬೇಕಾ” ಎಂದು ಮುಖ ಮುರಿದಾಗ “ಯಾಕೆ ದೀಕ್ಷಾ ಹಾಗೆ ಹೇಳ್ತೀಯಾ… ಅಜ್ಜಿ ಅಲ್ಲವೇನೇ… ಹೌದು ದೀಕ್ಷಾ ನಿನಗೆ ಧೀರು ಇಲ್ಲದೆ ಬೇಜಾರ್ ಆಗೋದಿಲ್ಲವಾ.. ಅಷ್ಟು ಜಗಳ ಆಡ್ತೀರಿ, ಮಾತಾಡ್ತೀರಿ, ಆಟ ಆಡ್ತೀರಿ ಅವನಿಗಂತೂ ಹೋಂ ವರ್ಕ್ ಗೆ ಸಹಾಯ ಮಾಡಲು ನೀನೇ ಬೇಕು ಇನ್ನು ಅವನಿಗೆ ನಿನ್ನನ್ನು ಹಿಡ್ಕೊಂಡು ಮಲಗಿಯೇ ಅಭ್ಯಾಸ ನಿನಗೆ ಇದೆಲ್ಲಾ ಓಕೆ ನಾ.. ದೀಕ್ಷಾ…”
“ಹ್ಞಾ.. ಅಮ್ಮ ಒಂದು ಸ್ವಲ್ಪ ಹೊತ್ತು ಅವನ ಜೊತೆ ಟೈಮ್ ಕಳೆದು ಮತ್ತೆ ನನ್ನ ರೂಮಿಗೆ ಹೋಗಿ ಬಿಡ್ತೀನಿ”.
“ಸರಿ ಹಾಗಾದರೆ ಅವನಿಗೂ ರೂಢಿ ಆಗಬೇಕಲ್ಲ ಇವತ್ತಿನಿಂದ ನನ್ನ ಜೊತೆಯೇ ಮಲಗುತ್ತಾನೆ ಬಿಡು” ಎಂದು ತೊಳೆದು ತರಕಾರಿಗಳನ್ನು ಅಣಿಗೊಳಿಸಿದಳು ಕುಸುಮ.
ಪಕ್ಕದ ಮನೆಯಿಂದ ಆಟವಾಡಿ ಬಂದ ಧೀರುವಿಗೆ ಅಕ್ಕ ತನ್ನ ಬಟ್ಟೆ ಬರೆಗಳನ್ನು ಜೋಡಿಸುತ್ತಿದ್ದುದು ಕಂಡು ಆಶ್ಚರ್ಯವಾಯಿತು. “ಯಾಕೆ ಅಕ್ಕ ಎಲ್ಲಿಗೆ ಹೋಗುತ್ತಿದ್ದೀಯಾ..!? ಬಟ್ಟೆಗಳನ್ನೆಲ್ಲಾ ಜೋಡಿಸುತ್ತಿದ್ದೆಯಲ್ಲಾ..”
“ಎಲ್ಲೂ ಇಲ್ಲ ಮೇಲ್ಗಡೆ ರೂಮನ್ನು ನಾಳೆ ಅಪ್ಪ ಕ್ಲೀನ್ ಮಾಡಿ ಕೊಡ್ತಾರಂತೆ ನಾನು ಅಲ್ಲಿಗೆ ಹೋಗ್ತೀನಿ, ನೀನು ನನಗೆ ಬರೀ ರಗಳೆ ಮಾಡ್ತೀಯ ಸರಿ ಓದೋಕೂ ಆಗಲ್ಲ ನಂದೆಲ್ಲ ವಸ್ತುಗಳನ್ನು ಇಲ್ಲಿ ಸರಿಯಾಗಿ ಜೋಡಿಸಿಕೊಳ್ಳೋಕು ಆಗಲ್ಲ ಅದಕ್ಕೆ ” ಎಂದು ತನ್ನ ಬಟ್ಟೆಗಳನ್ನು ಮಡಿಸುತ್ತಿದ್ದಳು.
“ಹೋ ಹೌದಾ.. ಎಂದು ಅಪ್ಪನ ಕೇಳಿದ್ಯಾ…”
“ಹ್ಞೂಂ ಅಮ್ಮ ಹೇಳ್ತೀನಿ ಅಂದಿದ್ದಾಳೆ” “ಮತ್ತೆ ನಂಗೆ ಒಬ್ಬನಿಗೆ ಇಲ್ಲಿ ಭಯ ಆಗಲ್ವಾ ಅಕ್ಕ…”?
“ಏನಿಲ್ಲ ಅಮ್ಮ ಅವಳ ಜೊತೆ ನಿನ್ನನ್ನು ಮಲಗಿಸಿಕೊಳ್ಳುತ್ತೇನೆ ಎಂದಿದ್ದಾಳೆ, ನಾನು ಆಗಾಗ ಇಲ್ಲಿಗೆ ಬರುತ್ತಿರುತ್ತೇನೆ. ಇವತ್ತು ಅಮ್ಮನ ಜೊತೆಗೆ ನೀನು ಮಲ್ಕೋ ಸರಿನಾ..”ಎಂದು ಪುಸ್ತಕ ಗಳನ್ನು ಜೋಡಿಸಿದಳು. “ಹೋ ಹೌದಾ ಸರಿ”
ಎಂದು ಅಲ್ಲೇ ಇದ್ದ ಡ್ರಾಯಿಂಗ್ ಬುಕ್ ತೆಗೆದುಕೊಂಡು ಕಲ್ಲರ್ ಗೀಚುತ್ತಾ ಕುಳಿತ ಧೀರಜ್.
ದೀಕ್ಷಾ ಪುಸ್ತಕಗಳನ್ನು ಜೋಡಿಸುತ್ತದೆ ತನ್ನ ತಮ್ಮನಿಗಾಗಿ ಮಾಡಿದ ಗ್ರೀಟಿಂಗ್ಸ್ ಕೈಗೆ ಸಿಕ್ಕಿತ್ತು ‘ಯು ಆರ್ ದ ಬೆಸ್ಟ್ ಬ್ರದರ್ ಇನ್ ದ ವರ್ಲ್ಡ್ ಐ ಯಾಮ್ ಆಲ್ವೇಸ್ ವಿತ್ ಯು’ ಎರಡು ಚಿತ್ರಗಳು ಅದನ್ನು ಹಾಗೆ ಗೋಡೆಗೆ ಅಂಟಿಸುತ್ತಲೇ ತನ್ನ ಸಹಾಯಕ್ಕಾಗಿ ಅಮ್ಮ ಬಂದಿದ್ದಳು . ಕಪಾಟುಗಳನ್ನು ವರೆಸುತ್ತಲೇ ಮಾತಿಗಿಳಿದ ಅಮ್ಮ “ನಾವಂತೂ ಹೇಗಿರಲಿಲ್ಲ ದೀಕ್ಷಾ.. ನಿನ್ನ ದೊಡ್ಡಮ್ಮ, ಚಿಕ್ಕು, ಚಿಕ್ಕಮ್ಮ ಎಲ್ಲರೂ ಒಂದೇ ರೂಮನ್ನು ಹಂಚಿಕೊಳ್ಳುತ್ತಿದ್ದೆವು. ಅದು ರೂಮು ಎನ್ನುವ ಹಾಗೂ ಇರಲಿಲ್ಲ ಬಟ್ಟೆ ಬರೆಯೆಲ್ಲಾ ಕೋಣೆಯಲ್ಲಿದ್ದರೆ ಪುಸ್ತಕಗಳನ್ನೆಲ್ಲಾ ಜಗಲಿಯಲ್ಲಿ ಹರಡಿಕೊಂಡು ನಾವು ಓದಿ ಬರೆದು ಮಾಡುತ್ತಿದ್ದು. ಇಬ್ಬರು ಮೇಜಿನ ಮೇಲೆ ಇಬ್ಬರು ಚಾಪೆ ಹಾಕಿಕೊಂಡು ಅರ್ಧಕೌಚಿ ಮಲಗಿ ಬರಿಯುವುದೇ ಅಭ್ಯಾಸವಾಗಿತ್ತು. ಇದ್ದುದು ಒಂದೇ ಕನ್ನಡಿ ಅದೂ ನಮ್ಮ ಹಳೆಯ ಬಿಂದಿಯಿಂದ ತುಂಬಿ ಹೋಗಿರುತ್ತಿತ್ತಾದರೂ ಚಿಕ್ಕು ಒಂದು ದಿನವೂ ಹೀಗೆ ಹೇಳಿದವನಲ್ಲ ಹಾಗೆ ಕೋಣೆಯ ಮೂಲೆಯಲ್ಲಿ ಇರುತ್ತಿದ್ದ ಅವನ ಬಾಲು, ಬ್ಯಾಟು, ಪೆಟ್ಲು ಅವನೇ ಮಾಡಿದ ಬಿಲ್ಲು, ಬಾಣ ಯಾವುದು ನಮಗೆ ನಮ್ಮ ಭಾವನೆಗಳಿಗೆ ತಡೆಯಾಗಲೇ ಇಲ್ಲ. ಇನ್ನು ಅಲ್ಲೇ ನೇತಾಡುತ್ತಿದ್ದ ಬಳೆಗಳ ಗಂಟು, ಸರಗಳು, ರಿಬ್ಬನ್ನು ಯಾವುದೂ ಚಿಕ್ಕುವಿನ ಮನಸ್ಸಿಗೆ ಬಂದಿರಲಿಕ್ಕಿಲ್ಲ. ಒಂದು ದೊಡ್ಡ ಜಮಖಾನ ಹಾಕಿ ಅಜ್ಜನ ಹಳೆಯ ಪಂಚೆ ಇಲ್ಲವಾ ಅಜ್ಜಿಯ ಹಳೆಯ ಸೀರೆ ಜೊತೆ ಹೊಂಬಳಿ ಹೊದ್ದು ಮಲಗಿದರೆ ಮುಗಿಯಿತು ನೋಡು ಇವೆಲ್ಲವೂ ನನ್ನ ಮನಸ್ಸಿನಲ್ಲಿ ಇಂದಿಗೂ ಜೀವಂತ ಬದುಕಿನ ಸಾಕ್ಷಿಗಳಾಗಿ ಭಾವಗಳಾಗಿ ಗಟ್ಟಿಯಾಗಿ ನಿಂತಿವೆ ಯಾವ ಕಾಲಕ್ಕೂ ಯಾವ ಅಲೆಗಳಿಗೂ ಅಳಿಸದೆ.
ನಾವು ನಾಲ್ವರಿದ್ದರೂ ಎಂದೂ ನಮಗೆ ಪ್ರತ್ಯೇಕ ರೂಮು ಬೇಕು ಎನಿಸಲೇ ಇಲ್ಲ. ಹಾಗೆ ಅದು ರೂಮ್ ಆಗಿಯೂ ಇರಲಿಲ್ಲ ಅದು ಕೇವಲ ನಿಜ ಮನೆ ಮನೆಯ ಒಳಗಿನ ರೂಮು, ಹೊರಗಿನ ರೂಮು ಅಷ್ಟೇ.. ಅದು ನಿನ್ನ ರೂಮು ನನ್ನ ರೂಮು ಆಗಿರಲೇ ಇಲ್ಲ ನೋಡು. ಇನ್ನು ಅಜ್ಜಿ ಬಂದಾರಂತೂ ಅವರು ತರುವ ಚಕ್ಕುಲಿ, ನಿಪ್ಪಟ್ಟು ಕೊಬ್ಬರಿ ಮಿಠಾಯಿಗಳಿಗೆ ಜಗಳವಾಡುವುದರ ಜೊತೆಗೆ ನಮ್ಮ ಜೊತೆ ಮಲಗಿ ನಮ್ಮ ಜೊತೆ ಮಲಗಿ ಎಂದು ಯಾವಾಗಲೂ ಕಿತ್ತಾಡುತ್ತಿದ್ದೆವು. ಆಗ ಅಜ್ಜಿ “ನಾನು ಎರಡು ದಿನ ಇರ್ತೀನಲ್ಲ ಇವತ್ತು ನಿಮ್ಮಿಬ್ಬರ ಮಧ್ಯೆ ನಾಳೆ ನಿಮ್ಮಿಬ್ಬರ ಮಧ್ಯೆ” ಎಂದು ಸಮಾಧಾನಿಸಿ ರಾತ್ರಿ ಆಗುತ್ತಿದ್ದಂತೆ ಆ ಕಥೆ ಈ ಕಥೆ ಹೇಳಿ ನಾವು ಮಲಗಿದ ಮೇಲೆ ನಿದ್ದೆಗೆ ಜಾರುತಿದ್ದರು. ಈಗಿನ ಮಕ್ಕಳಿಗೆ ಆ ಸುಖವೇ ಇಲ್ಲ ಎನ್ನುತ್ತಿದ್ದಂತೆ ಅಪ್ಪನ ಕಾರಿನ ಬರುವಿಕೆಯ ಸೂಚನೆ ಸಿಕ್ಕಿತ್ತು.
ಎಲ್ಲರೂ ಊಟ ಮಾಡಿ ಮಲಗುವ ಸಮಯ ದೀಕ್ಷಾಳಿಗೆ ಅಜ್ಜಿ ಬರುವ ಸಲುವಾಗಿ ತನ್ನ ರೂಮಿನ ಕಥೆ ಒಂದು ದಿನ ತಡವಾಯಿತಲ್ಲ ಎಂಬ ಬೇಜಾರಿನ ಜೊತೆಗೆ ನಾಳೆ ಅಜ್ಜಿನೂ ಇಲ್ಲೇ ಮಲಗುತ್ತಾರೆ.
ಇನ್ನು ನಾಳೆ ಧೀರೂ, ಅಜ್ಜಿ ಇಬ್ಬರ ಜೊತೆ ರೂಮ ಹಂಚಿಕೊಳ್ಳಬೇಕಲ್ಲ ಎಂಬ ಅಸಮಾಧಾನ ದಲ್ಲಿರುವಾಗ ತನ್ನ ತಮ್ಮ ಗೋಡೆಗೆ ಅಂಟಿಸಿದ್ದ ನಕ್ಷತ್ರ ಪುಂಜಗಳು ಫಳಫಳನೆ ಸಣ್ಣ ಬೆಳಕಿಗೆ ಮಿನುಗುತ್ತಿತ್ತು. ಹೊರಗಿನ ಬಾಲ್ಕನಿಯಲ್ಲಿ ತಾನು ಮತ್ತು ಧೀರು ಕಟ್ಟಿದ್ದ ಪುಟ್ಟ ಗಂಟೆಗಳು ಕಣಕಣ ಸದ್ದು ಮಾಡುತ್ತಿದ್ದವು. ಗೋಡೆಯ ಮೇಲಿನ ಅವಳ ಮತ್ತು ಧೀರುವಿನ ಫೋಟೋ ಇಂದೇಕೋ ಹೆಚ್ಚು ಆಪ್ತವೆನಿಸುತ್ತಿತ್ತು. ತಮ್ಮನಿಲ್ಲದ ಮಂಚ ಕಾಲಿ ಎನಿಸುತ್ತಿತ್ತು.
“ಅಕ್ಕ ಅದೇನಾಯ್ತೆ, ಅಕ್ಕ ಟಿವಿಯಲ್ಲಿ ಇದಿತ್ತಂತೆ, ಮೊಬೈಲಲ್ಲಿ ಇದು ನೋಡಿದೆ, ಅಜ್ಜಿ ಬರ್ತಾರಂತೆ” ಅಂತ ನೂರು ಪ್ರಶ್ನೆ ಕೇಳುತ್ತಿದ್ದ ತಮ್ಮ ನಿಲ್ಲದ ಕೋಣೆಯಲ್ಲಿಂದು ನೀರವ ಮೌನ ಆವರಿಸಿದಂತಿತ್ತು. ಎಷ್ಟು ಮಗ್ಗಲು ಬದಲಿಸಿದರೂ ನಿದ್ದೆ ಗಾಣದೆ ಅಮ್ಮ ಹೇಳಿದ ಮಾತುಗಳೇ ಪದೇ ಪದೇ ನೆನಪಾದವು. ಹೌದು ಕೋಣೆ ಕೇವಲ ಕೋಣೆ ಎಷ್ಟೇ ಅಲ್ಲ ಅದೊಂದು ಭಾವನೆ ಎಂದೆನಿಸಿದ ದೀಕ್ಷಾಳು ಪಕ್ಕದ ಅಪ್ಪ-ಅಮ್ಮನ ಕೋಣೆಯ ಬಾಗಿಲನ್ನು ಮೆಲ್ಲಗೆ ತೆಗೆದು ಅಮ್ಮ ತಮ್ಮನ ನಡುವೆ ತೂರಿ ಬೆಚ್ಚಗೆ ಮುದುರಿ ಮಲಗಿದ ದೀಕ್ಷಾಳ ಅರಿವಿಗೆ ಬಂದ ಅಮ್ಮನ ಮುಖದಲ್ಲಿ ಸಣ್ಣನೆಯ ನಗುವಿನ ಗೆರೆ ಮೂಡಿತು.

