ಸಿಂಗಲ್ ಪೇರೆಂಟಿಂಗ್!
——————————-
ಮಗುವನ್ನು ಭೂಮಿಗೆ ತಂದು, ಅದರ ಬೆಳವಣಿಗೆಯ ಹೊಣೆ ಹೊತ್ತು, ಲಾಲಿಸಿ, ಪಾಲಿಸಿ, ಬೆಳಸಿ, ಸಮಾಜದಲ್ಲಿ ಸತ್ಪ್ರಜೆಯನ್ನಾಗಿ ಮಾಡುವ ಜವಾಬ್ದಾರಿ ತಂದೆ ತಾಯಿ ಇಬ್ಬರದು ಆಗಿರುತ್ತದೆ. ಇಷ್ಟೆಲ್ಲಾ ಜವಾಬ್ದಾರಿಯನ್ನು ಒಬ್ಬರೇ ಹೊರುವ ಪರಿಸ್ಥಿತಿ ಬಂದಾಗ, ತಂದೆ ಒಬ್ಬನೇ ಅಥವ ತಾಯಿ ಒಬ್ಬಳಿಗೆ ಮಗುವನ್ನು ಬೆಳೆಸುವ ಹೊಣೆಗಾರಿಕೆ ಹೆಗಲೇರುತ್ತದೆ. ಇದುವೇ ಸಿಂಗಲ್ ಪೇರೆಂಟಿಂಗ್. ಮಗುವು/ಮಕ್ಕಳು ತಾಯಿ ಅಥವಾ ತಂದೆ ಯಾರೊಬ್ಬರನ್ನು ಕಳೆದುಕೊಂಡರೂ ಸಹ ಸಿಂಗಲ್ ಪೇರೆಂಟಿಂಗ್ ಪಾಲನೆಗೆ ಒಳಗೊಳ್ಳುತ್ತದೆ.
ಕಾನೂನಾತ್ಮಕವಾಗಿ ವಿಚ್ಛೇದನವಾದ ಬಹುತೇಕ ಸಂದರ್ಭದಲ್ಲಿ ಚಿಕ್ಕ ಮಗುವಿನ ಹೊಣೆಗಾರಿಕೆಯು ತಾಯಿಗೆ ಬರುವುದಾದರೂ ಕೆಲವು ಪರಿಸ್ಥಿತಿಗಳಲ್ಲಿ ಮಗುವು ತಂದೆಯ ಜವಾಬ್ಧಾರಿಗೆ ಒಳಗೊಳ್ಳುತ್ತದೆ. ಮಗುವಿಗೆ ಅಮ್ಮ/ಅಪ್ಪ ನ ಅಗಲಿಕೆ ತಿಳಿಯಬಾರದೆಂಬ ಮನಸ್ಥಿತಿಯಲ್ಲಿಯೇ ಬೆಳೆಸಿದರೂ ಸಹ ಮಗುವು ಹೊರಗಿನ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿದಂತೆ, ಆ ಮಗುವಿಗೆ ಅಗಲಿಕೆಯ ನೋವು ಕಾಣಿಸಿಕೊಳ್ಳುವುದು. ಸ್ನೇಹಿತರು ಅವರವರ ಮನೆಯ ವಿಷಯಗಳನ್ನು ಮಾತನಾಡುವಾಗ, ಸಂಬಂಧಿಕರು, ನೆರೆ ಹೊರೆಯವರನ್ನು ನೋಡಿದಾಗ, ಪುಸ್ತಕ, ಸಿನಿಮಾ ಅಥವಾ ಪಾಠಗಳಲ್ಲಿ ಬರುವ ತಂದೆ/ತಾಯಿಯ ಚಿತ್ರಣ… ಹೀಗೆ, ಎಲ್ಲವೂ ಸೇರಿ ಏನೊಂದನ್ನೊ ಕಳೆದುಕೊಂಡಿರುವೆ ಎಂಬ ಮನಸ್ಥಿತಿ ಶುರುವಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇವೆ.
ಹಿಂದೆಲ್ಲಾ ತುಂಬು ಕುಟುಂಬಗಳು ಇರುತ್ತಿದ್ದವು. ಅಜ್ಜಿ, ತಾತ, ದೊಡ್ಡಪ್ಪ, ದೊಡ್ಡಮ್ಮ, ಸೋದರತ್ತೆ, ಅವರ ಮಕ್ಕಳು ಹೀಗೆ ಬಹಳಷ್ಟು ಜನ ನನ್ನೊಂದಿಗಿದ್ದಾರೆ ಎಂಬ ಮನೋಧೈರ್ಯ ಒಂದೆಡೆಯಾದರೆ, ಕೆಲಸಗಳು ಎಲ್ಲರ ಮಧ್ಯೆ ಹಂಚಿಹೋಗುತ್ತಿದ್ದವು. ಅನುಸರಿಸಿಕೊಂಡು ಹೋಗುವ ಸ್ವಭಾವ ಕಡಿಮೆಯಾದಂತೆ ಅವಿಭಕ್ತ ಕುಟುಂಬಗಳು ವಿಭಕ್ತವಾಗಿ ಮನೆಯ ಜವಾಬ್ದಾರಿಗಳು ಒಂದೆಡೆ ಹೆಚ್ಚಾದವು. ಸಿಂಗಲ್ ಪೇರೆಂಟಿಂಗ್ ಸಂಸಾರಗಳಲ್ಲಿ ಮನೆ ಜವಾಬ್ಧಾರಿ ಆದಿಯಾಗಿ ಎಲ್ಲವನ್ನು ಒಬ್ಬರೇ ಸುಧಾರಿಸಬೇಕಾಗುವುದು. ಆರ್ಥಿಕವಾಗಿಯೂ ಕಷ್ಟವಿರುವ ಸಂದರ್ಭಗಳಲ್ಲಿ ಇದು ಶಾಪವಾಗಿ ಪರಿಣಮಿಸಿ, ಒತ್ತಡದ ಬದುಕಿಗೆ ದಾರಿಮಾಡಿಕೊಡುವುದು. ಮಗುವಿನ ಬಳಿ ‘ನಿನ್ನ ತಾಯಿ, ತಂದೆ ಎಲ್ಲವೂ ನಾನೆ’ ಎಂದು ಹೇಳುವುದು ಇಂತಹ ಸಂದರ್ಭಗಳಲ್ಲಿ ಅನಿವಾರ್ಯವಾಗಿರುತ್ತದೆ. ಆದರೆ ಅದನ್ನು ನಿಭಾಯಿಸುವುದು ಖಂಡಿತ ಸುಲಭವಲ್ಲ. ಇದರ ನಡುವೆ ಮರು ಮದುವೆಯ ಪ್ರಸ್ತಾಪ, ಮಗುವನ್ನು ರೆಸಿಡೆನ್ಶಿಯಲ್ ಸ್ಕೂಲ್ನಲ್ಲಿ ಓದಿಸುವ ಬಗ್ಗೆ ಮಾತುಕತೆ, ಹೀಗೆ ಎಲ್ಲರಿಂದ ಅನೇಕ ರೀತಿಯ ಸಲಹೆ, ಸೂಚನೆ ಹಾಗು ಮನಸ್ಸಿನ ಗೊಂದಲಗಳೊಂದಿಗೆ ವರ್ಷಗಳು ಉರುಳಿ ಹೋಗಿರುತ್ತದೆ, ಒಬ್ಬಂಟಿತನದ ಅರಿವಾಗಿರುತ್ತದೆ.
ಸ್ವಭಾವಿಕ ಕಾರಣಗಳಿಂದ ಸಂಗಾತಿಯನ್ನು ಕಳೆದುಕೊಂಡಿದ್ದರೆ ವಿಧಿಯಿಲ್ಲವೆಂದು ಸಿಂಗಲ್ ಪೇರೆಂಟಿಂಗ್ಗೆ ಒಗ್ಗಿಕೊಳ್ಳಬೇಕಾಗುವುದು. ಆದರೆ ಸ್ವತಃ ಡೈವೋರ್ಸ್ ನೀಡಿ, ವಿಚ್ಛೆದನ ಪಡೆದ ಸಂಧರ್ಭಗಳಲ್ಲಿ ‘ದುಡುಕಿ ನಿರ್ಧಾರ ತೆಗೆದುಕೊಂಡೆನಾ?’ ಎಂಬುದು ಯಕ್ಷ ಪ್ರಶ್ನೆಯಾಗಿಯೆ ಉಳಿವುದು. ತಂದೆ ತಾಯಿಯರಿಬ್ಬರನ್ನು ಕಳೆದುಕೊಂಡವರನ್ನು ಅನಾಥರು ಎನ್ನುವುದಾದರೆ, ತಂದೆ ಅಥವ ತಾಯಿ ಇಲ್ಲದೆ ಬೆಳೆಯುವವರನ್ನು ಏನೆನ್ನಬೇಕು? ಆರ್ಥಿಕವಾಗಿ ಸಧೃಡವಾಗಿದ್ದೀವಿ ಎಂದಾಕ್ಷಣ ಸಂಭಂದಗಳನ್ನು ಒಬ್ಬಂಟಿಯಾಗಿ ನಿಭಾಯಿಸಬಹುದು ಎಂಬ ತಪ್ಪು ತಿಳುವಳಿಕೆಯಿಂದ ಹೊರಬರಬೇಕಿದೆ. ಜೋಡಿ ಎತ್ತುಗಳಂತೆ ಸಂಸಾರವನ್ನು ತೂಗಿಸಿಕೊಂಡು ಹೋಗಬೇಕಿರುವ ಗಂಡ ಹೆಂಡತಿಯರಲ್ಲಿ ಒಬ್ಬರಿಲ್ಲದಿದ್ದರೂ ಸಂಸಾರದ ಬಂಡಿ ಸಾಗುವುದು ಸುಲಭದ ಮಾತಲ್ಲ. ಹೊಂದಾಣಿಕೆ, ಪರಸ್ಪರ ಗೌರವ, ಪ್ರೀತಿ, ವಿಶ್ವಾಸದಿಂದ ಎಷ್ಟೋ ಜೋಡಿಗಳು ಸಿಂಗಲ್ ಪೇರೆಂಟಿಂಗ್ ಹೊಣೆಗಾರಿಕೆಯಿಂದ ಮುಕ್ತಾರಾಗಬಹುದು, ಮಕ್ಕಳು ತಂದೆ ತಾಯಂದಿರ ಪ್ರೀತಿಯಲ್ಲಿ ಬೆಳೆಯಬಹುದು.