ಈ ಸಲದ ಸುಗ್ಗಿ ಸುಗ್ಗಿ ಅನ್ನಿಸುತ್ತಲೆ ಇಲ್ಲ.. ಹೀಗೆ ಅನ್ನಿಸತೊಡಗಿ ವರ್ಷಗಳೇ ಆದವು.ಎಲ್ಲಿ ನೋಡಿದರೂ ರಾಗಿ ,ಭತ್ತದ ಮೆದೆಗಳು.ಕಣಗಳು,ಕಣಗಳಲ್ಲಿ ದೊಡ್ಡ,ದೊಡ್ಡ ರಾಶಿಗಳು. ಈಗ ಯಾವುದೂ ಇಲ್ಲ.ಮನೆಯಳತೆಗೆ ಬೆಳೆದುಕೊಳ್ಳುವುದೇ ಕಷ್ಟವಾಗಿದೆ.ಕೇವಲ ಹತ್ತು ಹದಿನೈದು ವರ್ಷಗಳಿಂದೀಚೆಗೆ ಎಷ್ಟೊಂದು ಮಾರ್ಪಾಟುಗಳು, ಹಣಕಾಸಿನ ಸ್ಥಿತಿಯಲ್ಲಿ ಎಷ್ಟೊಂದು ಸುಧಾರಣೆಗಳು!! ಜಮೀನ್ದಾರರು ಒಬ್ಬರನ್ನು ಕೂಲಿಗೆ ಕರೆದರೆ,ಮೂರ್ನಾಕು ಜನ ಹೋಗುತ್ತಿದ್ದುದು ಒಂದು ಕಾಲ.ಈಗ ಕೂಲಿ ಮಾಡುವವರೇ ಇಲ್ಲ,ಇದ್ದರೂ ಅವರ ಕೈ ಕಾಲು ಹಿಡಿದು ಕರೆ ತರಬೇಕು.ನಿಜವಾಗಿಯೂ ಇದೊಂದು ಖುಷಿಯ ಸಂಗತಿ.
ರಾಸುಗಳನ್ನು ನೋಡಿ, ತಿಪ್ಪೆ ನೋಡಿ ಹೆಣ್ಣು ಕೊಡುತ್ತಿದ್ದ ಕಾಲವೊಂದಿತ್ತು, ಈಗ ದೊಡ್ಡ ತಿಪ್ಪೆ ಇರಲಿ,ಉಳುವ ದನಗಳೇ ಇಲ್ಲ.(ತಿಪ್ಪೆ,ರಾಸುಗಳಿದ್ದರೆ ಈಗ ಅಂಥ ಮನೆಗೆ ಹೆಣ್ಣನ್ನೇ ಕೊಡುವುದಿಲ್ಲ )ದನವೇ ಇಲ್ಲವೆಂದ ಮೇಲೆ ಸಂಕ್ರಾAತಿಯಲ್ಲಿ ಕಿಚ್ಚು ಹಾಯಿಸುವ ಮಾತೆಲ್ಲಿ ಬಂತು.ನಾವೆಲ್ಲ ಚಿಕ್ಕವರಿದ್ದಾಗ ಯಾರ ದನಗಳನ್ನು ಚೆನ್ನಾಗಿ ಅಲಂಕರಿಸಿದ್ದಾರೆ ಎಂದು ನೋಡಲು ಕಾಯುತ್ತಾ ಕೂರುತ್ತಿದ್ದೆವು,ನಾನು ಹೈಸ್ಕೂಲ್ ನಲ್ಲಿರುವವರೆಗೂ ಆಲೂರಿನ ಹೊಳೆ ಬೀದಿಯಲ್ಲಿ ನಡೆಯುತ್ತಿದ್ದ ಕಿಚ್ಚು ಹಾಯಿಸುವ ಸಂಭ್ರಮವನ್ನು ನೋಡಿ, ಕಣ್ಣು ತುಂಬಿಕೊಳ್ಳುತ್ತಿದ್ದೆ.
ನಮ್ಮ ನಾಗಮಂಗಲದಲ್ಲಿ ತೆಂಗು ಬಿಟ್ಟರೆ ರಾಗಿಯೇ ಪ್ರಮುಖ ಬೆಳೆಯಾಗಿದ್ದರಿಂದ ಹತ್ತು,ಹದಿನೈದು ವರುಷಗಳ ಹಿಂದೆ ಎಲ್ಲಿ ನೋಡಿದರೂ ದೊಡ್ಡ,ದೊಡ್ಡ ಮೆದೆಗಳು.ಮಂಡ್ಯದಳ್ಳಿಯವರು ಭತ್ತವನ್ನು ರಸ್ತೆಯಲ್ಲೇ ಬಡಿದು ಹಸನು ಮಾಡಿದರೆ ಇವರು ಕುಂಟೆ ಲೆಕ್ಕದಲ್ಲಿ ಅಂದರೆ ಅಷ್ಟು ದೊಡ್ಡ ಕಣ ಮಾಡುತ್ತಿದ್ದರು.ತಿಂಗಳಾದರೂ ರಾಗಿ ಒಕ್ಕಣೆ ಮುಗಿಯುತ್ತಿರಲಿಲ್ಲ.ಈಗ ಯಾವ ಊರಿನಲ್ಲೂ ಉಳುವ ದನಗಳೇ ಇಲ್ಲ.ಹಾಗೆಂದ ಮೇಲೆ ರೋಣುಗಲ್ಲಿಗೂ ಕೆಲಸವಿಲ್ಲ.ರಾಗಿ,ಭತ್ತ ಹಸನು ಮಾಡಲು ಅತ್ಯಾಧುನಿಕ ಯಂತ್ರಗಳು ಬಂದಿವೆ.ಬದಲಾವಣೆ ಜಗದ ನಿಯಮ ,ಆದರೂ ಹಿಂದಿನ ಸುಗ್ಗಿ,ಸಂಭ್ರಮವನ್ನು ನೆನೆದು ಮನಸ್ಸು ಮರುಗುತ್ತದೆ.ಕುಂಟೆ,ಕೂರಿಗೆಗಳು,ರೋಣುಗಲ್ಲು,ನೇಗಿಲುಗಳೆಲ್ಲಾ ಮೂಲೆ ಸೇರುತ್ತಿವೆ.ನಮ್ಮ ಮಕ್ಕಳಿಗೆ ಇವುಗಳ ಪರಿಚಯವೇ ಇಲ್ಲ.ಕಡೆಗೊಂದು ದಿನ ರಾಗಿ ಬಿತ್ತನೆಯೇ ಆಗದಿದ್ದರೂ ಸೋಜಿಗ ಅನಿಸದು
ಎಲ್ಲರಿಗೂ ಸಂಕ್ರಾAತಿ ಶುಭಾಶಯಗಳು.
-ಸ್ವರ್ಣಲತಾ ಎ ಎಲ್