ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಗಾಬರಿಯಿಂದ ಕಾರು ಹತ್ತಿ ಕುಳಿತರು. ಹಣೆಯಲ್ಲಿ ಛಳ ಫಳ ಅಂತ ಬೆವರು.
ಕೃಷ್ಣ ಹಾಗೆ ಗಾಬರಿಯಿಂದ ಬೆವರಲೂ ಒಂದು ಕಾರಣವಿತ್ತು. ಅವತ್ತು ವಿದಾನಸೌಧಕ್ಕೆ ಬಂದ ಅವರು ತಮ್ಮ ಕೆಲಸ ಮುಗಿಯುತ್ತಿದ್ದಂತೆಯೇ ಮನೆಗೆ ಹೊರಡಲೆಂದು ಸಚಿವರೊಬ್ಬರ ಜತೆ ಪಶ್ಚಿಮ ದ್ವಾರದ ಬಳಿ ಮೆಟ್ಟಿಲಿಳಿಯುತ್ತಿದ್ದರು.
ಇನ್ನೇನು ಅವರು ಮೆಟ್ಟಿಲಿಳಿದು ಕಾರು ಹತ್ತಿ ಕೂರಬೇಕು. ತಕ್ಷಣವೇ ಅಲ್ಲಿದ್ದ ಧಡೂತಿ ವ್ಯಕ್ತಿಯೊಬ್ಬ ವಿದಾನಸೌಧದ ಕಡೆ ಬೆರಳು ತೋರಿಸುತ್ತಾ, ಇಲ್ಲಿರುವವರೆಲ್ಲ ಕಳ್ಳರು. ಬಡಬಗ್ಗರು ಕೆಲಸಕ್ಕೆ ಅಂತ ಬಂದರೆ ಮಾನ ಮರ್ಯಾದೆ ಏನೂ ಇಲ್ಲದೆ ಲೂಟಿ ಮಾಡಲೂ ಹೇಸದವರು. ಇವರನ್ನೆಲ್ಲ ಒಬ್ಬೊಬ್ಬರನ್ನಾಗಿ ನಿಲ್ಲಿಸಿ, ಗುಂಡು ಹಾಕಿ ಕೊಂದು ಬಿಡಬೇಕು ಎಂದು ಜೋರಾಗಿ ಅರಚಿಕೊಂಡ. ಈ ರೀತಿ ತಾವು ಕಾರು ಹತ್ತಲು ಬರುತ್ತಿರುವಾಗಲೇ ಒಬ್ಬ ವ್ಯಕ್ತಿ,ಅದೂ ಅಪರಿಚಿತನೊಬ್ಬ ಹೀಗೆ ಕೂಗು ಹಾಕಿದ್ದರಿಂದ ಸಹಜವಾಗಿಯೇ ಕೃಷ್ಣ ಅವರಿಗೆ ಗಾಬರಿಯಾಗಿದೆ. ಹಾಗಂತಲೇ ಗಬಕ್ಕಂತ ಕಾರು ಹತ್ತಿ ಕುಳಿತಿದ್ದಾರೆ. ಆದರೆ ಅವರ ಜತೆಗಿದ್ದ ಸಚಿವರು ಮಾತ್ರ ಆ ಸಂದರ್ಭದಲ್ಲಿ ನಗುತ್ತಾ ಕಾರು ಹತ್ತಿದರು.
ಸರಿ, ಕಾರು ಹೊರಟಿತು.ಹೀಗೆ ಹೊರಡುತ್ತಿದ್ದಂತೆಯೇ ನಗುತ್ತಾ ಕುಳಿತಿದ್ದ ಮಂತ್ರಿಯನ್ನು ನೋಡಿದ ಎಸ್.ಎಂ.ಕೃಷ್ಣ ಅವರು, ಅಲ್ರೀ ವಿಶ್ವನಾಥ್, ಹಾಗೆ ಬಾಯಿಗೆ ಬಂದ ಹಾಗೆ ಕೂಗುತ್ತಿದ್ದಾನಲ್ಲ? ಯಾರವನು? ನಿಮಗೆ ಗೊತ್ತಾ?ಅಂತ ಕೇಳಿದ್ದಾರೆ.
ಅದಕ್ಕೆ ಪ್ರತಿಯಾಗಿ ವಿಶ್ವನಾಥ್, ಗೊತ್ತು ಸಾರ್. ಆತನ ಹೆಸರು ಹೆಚ್.ಸಿ.ಗೌಡ ಅಂತ. ತುಂಬ ದೂರದವನೇನಲ್ಲ. ಅಮ್ಮಾವರ (ಶ್ರೀಮತಿ ಪ್ರೇಮಾ ಕೃಷ್ಣ) ಊರಿನವನು.ಆಗಾಗ ವಿದಾನಸೌಧಕ್ಕೆ ಬರುತ್ತಿರುತ್ತಾನೆ. ಬಂದಾಗೆಲ್ಲ ಈ ರೀತಿ ಸತ್ಯವನ್ನೂ ಹೇಳುತ್ತಿರುತ್ತಾನೆ ಎಂದರು. ವಿಶ್ವನಾಥ್ ಹಾಗೆ ಹೇಳಿದ್ದೇ ತಡ,ಎಸ್.ಎಂ.ಕೃಷ್ಣ ತಮ್ಮ ಗಾಬರಿಯನ್ನು ಮರೆತು ಕಾರಿನಲ್ಲೇ ಬಿದ್ದು ಬಿದ್ದು ನಗತೊಡಗಿದರು.ಅವರ ನಗುವಿನ ಸೊಬಗನ್ನು ವಿಶ್ವನಾಥ್ ಹಾಗೇ ನೋಡುತ್ತಾ ಕುಳಿತಿದ್ದರು.
ಕೃಷ್ಣರ ಮಾತು ಜ್ಯೋತಿರ್ಲಿಂಗವಾಗುತ್ತಿತ್ತು…..
ಅದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲ.
ಆ ಸಂದರ್ಭದಲ್ಲಿ ಉಪ ಪ್ರಧಾನಿಯಾಗಿದ್ದ ಬಿಜೆಪಿಯ ರಾಷ್ಟ್ರೀಯ ನಾಯಕ ಲಾಲಕೃಷ್ಣ ಅಡ್ವಾಣಿ ಕೇರಳಕ್ಕೆ ಭೇಟಿ ನೀಡಿದ್ದರು.
ಹೀಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇಶದ ರಾಜಕಾರಣದ ಬಗ್ಗೆ ಮಾತನಾಡುತ್ತಾ ಕರ್ನಾಟಕದಲ್ಲಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಟೀಕಾಪ್ರಹಾರ ನಡೆಸಿದರು.
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ.ಅದರ ಸಾಧನೆ ಶೂನ್ಯ ಎಂದು ಅಬ್ಬರಿಸಿದರು.
ದೇಶದ ಉಪಪ್ರಧಾನಿ ಈ ರೀತಿ ವಾಗ್ಧಾಳಿ ಮಾಡಿದರೆ ಮುಖ್ಯಮಂತ್ರಿಯಾಗಿದ್ದವರು ಸುಮ್ಮನೆ ಕೂರಲು ಸಾಧ್ಯವೇ?ಹಾಗಂತಲೇ ಆಪ್ತರೆನ್ನಿಸಿಕೊಂಡವರು ಕೃಷ್ಣ ಅವರ ಬಳಿ ಹೋದರು.
ಸಾರ್,ಉಪಪ್ರಧಾನಿಗಳು ನಿಮ್ಮ ಮೇಲೆ ಒಂದೇ ಸಮನೆ ವಾಗ್ಧಾಳಿ ನಡೆಸುತ್ತಿದ್ದಾರೆ.ಅವರ ಆರೋಪಕ್ಕೆ ನೀವು ತಕ್ಕ ಉತ್ತರ ನೀಡದಿದ್ದರೆ ದೇಶಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ.ಯಾಕೆಂದರೆ ಇವತ್ತು ದೇಶದಲ್ಲಿ ಕಾಂಗ್ರೆಸ್ ಪಾಲಿಗೆ ಶಕ್ತಿ ಅಂತಿರುವುದೇ ಕರ್ನಾಟಕದಲ್ಲಿ.ಹೀಗಾಗಿ ನೀವು ಅಡ್ವಾಣಿಯವರಿಗೆ ತಕ್ಕ ಉತ್ತರ ನೀಡಬೇಕು ಎಂದರು.
ಸರಿ,ಕೃಷ್ಣ ಅವರೂ ಅಡ್ವಾಣಿ ಅವರಿಗೆ ಉತ್ತರ ನೀಡಲು ತಯಾರಾದರು.ಇದಕ್ಕಾಗಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಮ್ಮ ಸರ್ಕಾರದ ಸಾಧನೆ ಏನು?ಅನ್ನುವುದರ ಇಂಚಿAಚು ವಿವರ ನೀಡಿದರು.ಅಷ್ಟೇ ಅಲ್ಲ,ನನ್ನ ಸರ್ಕಾರದ ಸಾಧನೆ ಶೂನ್ಯವೇ ಅಂತ ನೀವೇ ನಿರ್ಧರಿಸಿ ಎಂದು ಬಿಟ್ಟರು. ಆದರೆ ಇಷ್ಟೆಲ್ಲದರ ನಡುವೆ ಅವರು ತಪ್ಪಿಯೂ ಅಡ್ವಾಣಿ ಅವರ ವಿರುದ್ಧ ಟೀಕೆ ಮಾಡಲಿಲ್ಲ,ಕೇಳಿದರೆ,ಟೀಕೆಗೆ ಪ್ರತಿಟೀಕೆ ಉತ್ತರವಲ್ಲ ಎಂದು ಕೂಲ್ ಆಗಿ ಉತ್ತರಿಸಿದರು. ಕೃಷ್ಣರ ಉತ್ತರದಿಂದ ಕೆಲವರಿಗೆ ನಿರಾಸೆ ಆಯಿತು.ಯಾಕೆಂದರೆ ಅಡ್ವಾಣಿ ಅವರ ವಿರುದ್ಧ ಕೃಷ್ಣ ಟೀಕಾಪ್ರಹಾರ ನಡೆಸಿದ್ದರೆ ಅದು ರಾಷ್ಟ್ರಮಟ್ಟದ ಸುದ್ದಿಯಾಗುತ್ತಿತ್ತು ಎಂಬುದು ಅವರ ಹಳಹಳಿಕೆ. ಅಂದ ಹಾಗೆ ಇದೊಂದು ಘಟನೆ ಅಂತಲ್ಲ,ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅಗತ್ಯ ಮೀರಿ ಯಾವತ್ತೂ ಮಾತನಾಡಲಿಲ್ಲ.ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಯಾವಾಗ ಮಾತನಾಡಬೇಕು?ಯಾವಾಗ ಮೌನ ಧರಿಸಬೇಕು ಎಂಬುದು ಗೊತ್ತಿತ್ತು.ಎಲ್ಲಕ್ಕಿಂತ ಮುಖ್ಯವಾಗಿ ಮಾತು ಜ್ಯೋತಿರ್ಲಿಂಗವಾಗುವುದು ಹೇಗೆ ಅಂತ ಅವರಿಗೆ ಗೊತ್ತಿತ್ತು.
ಹೀಗಾಗಿ ಅವರು ಯಾವ ಸಂದರ್ಭದಲ್ಲೇ ಬಾಯಿ ತೆರೆಯಲಿ,ಅವರೇನು ಹೇಳುತ್ತಾರೆ?ಎಂಬ ಕುತೂಹಲ ಇದ್ದೇ ಇರುತ್ತಿತ್ತು.
-ಆರ್.ಟಿ.ವಿಠ್ಠಲಮೂರ್ತಿ