ಹೊಗಳಿಕೆಗೆ ತಲೆದೂಗದವರನ್ನ ಹುಡಕುವುದು ಸಾವಿಲ್ಲದ ಮನೆಯಲ್ಲಿ ಅಥವಾ ಮೊಬೈಲ್ ಇಲ್ಲದ ಮನೆಯಲ್ಲಿ ಸಾಸಿವೆ ತರುವುದು ಎರಡೂ ಒಂದೇ! ಹೊಗಳಿಕೆ ಎನ್ನುವುದು ಬೇಕು. ನಾವು ಮಾಡಿದ ಕೆಲಸವನ್ನ ನಾಲ್ಕು ಜನ ನೋಡಲಿ , ಮೆಚ್ಚಲಿ ಎನ್ನುವುದು ಎಲ್ಲರಲ್ಲೂ ಇರುವ ಒಂದು ಸಾಮಾನ್ಯ ಗುಣ. ನಾವು ಯಾವುದೋ ಊರಿಗೆ ಹೋದರೆ , ಅಲ್ಲಿ ಬೆಟ್ಟ ಹತ್ತಿದರೆ , ನೀರಿನಲ್ಲಿ ಈಜಿದರೆ ಬೇರೆಯವರಿಗೇನು ? ನಾವು ಫೋಟೋ ಹಾಕುವುದು , ನಾವು ಕಂಡದ್ದು ,ಅನುಭವಿಸಿದ್ದು ವರ್ಣಿಸಿ ಬರೆಯುವುದು ನಾಲ್ಕು ಜನ ಮೆಚ್ಚಲಿ ಎನ್ನುವುದಕ್ಕೆ ಅಲ್ವಾ? ಇದರ ಬಗ್ಗೆ ಇಲ್ಲದ ತಕರಾರು ತೆಗೆದರೆ ಅದು ಶುದ್ಧ ಸುಳ್ಳು. ಇದರರ್ಥ ಇಷ್ಟೇ ಮನುಷ್ಯ ಪ್ರಾಣಿಗೆ ಇತರೆ ಸಹಜೀವಿಗಳಿಂದ ಶಭಾಷ್ಗಿರಿ ಬೇಕು , ಎಂಡಾಸ್ಮೆAðಟ್ ಬೇಕು,ಪ್ರೀತಿ ಬೇಕು . ನಮ್ಮ ಈ ಮೂಲಗುಣವನ್ನ ಬಂಡವಾಳವನ್ನಾಗಿಸಿ ಅದರ ಆಧಾರದ ಮೇಲೆ ಈ ಫೇಸ್ಬುಕ್ ಕಟ್ಟಿದ್ದಾರೆ. ಹೌದು ನಮಗೆಲ್ಲಾ ಪ್ರೀತಿ ಬೇಕು. ಜನ ನಮ್ಮನ್ನ ಮೆಚ್ಚಲಿ ಎಂದು ಬಯಸುವುದು , ಹೊಗಳಿಕೆಯನ್ನ ಬಯಸುವುದು ಯಾವುದೊ ತಪ್ಪಲ್ಲ. ಹೊಗಳಿಕೆ ಹೊನ್ನ ಶೂಲವಾಗಬಾರದು. ಹೊಗಳಿಕೆ ನೆತ್ತಿಗೆ ಎರಬಾರದು. ಹೊಗಳಿಕೆ ಇನ್ನಷ್ಟು ಕೆಲಸ ಮಾಡಲು ಬೇಕಾದ ಔಷಧ , ಟಾನಿಕ್ ಇದ್ದಂತೆ . ಹಿತಮಿತದಲ್ಲಿದ್ದರೆ , ಅದನ್ನ ಸರಿಯಾಗಿ ತೆಗೆದುಕೊಂಡರೆ ಇನ್ನಷ್ಟು ಕೆಲಸ ಮಾಡಲು ಹುರುಪು ಖಂಡಿತ ಬರುತ್ತದೆ.
ಒಮ್ಮೆ ಮುಲ್ಲಾ ನಾಸಿರುದ್ದೀನ್ ನನ್ನ ಆತನ ಪಕ್ಕದ ಊರಿನವರು ಸನ್ಮಾನ ಏರ್ಪಡಿಸಿ ಕರೆದಿದ್ದರಂತೆ , ಸನ್ಮಾನ ಸಮಾರಂಭದ ಸಮಯದಲ್ಲಿ ಮುಲ್ಲಾ ಸಭಿಕರಲ್ಲಿ ಯಾರನ್ನೂ ಹುಡಕುತ್ತಿರುವುದು ನೋಡಿ , ಆಯೋಜಕರು ‘ ಯಾರಿಗಾದರೂ ಕಾಯುತ್ತಿದ್ದೀರಾ ? ‘ ಎಂದು ಪ್ರಶ್ನಿಸಿದರಂತೆ . ಅದಕ್ಕೆ ಮುಲ್ಲಾ , ‘ಇಲ್ಲ , ನಮ್ಮೊರಿನ ಮುಖಗಳು ಯಾವುದಾದರೂ ಇದೆಯಾ ? ‘ ಎಂದು ಹುಡಕುತ್ತಿದ್ದೆ ಎಂದರAತೆ .
ಇದರರ್ಥ ಕೂಡ ಬಹಳ ಸರಳ . ನಮ್ಮ ಸಾಧನೆ ಅಥವಾ ಯಶಸ್ಸು ಅಥವಾ ನಮ್ಮ ಅಭಿವೃದ್ಧಿ ಸಾವಿರಾರು ಜನ ನೋಡಿ ಹೊಗಳಲಿ ಅದು ಒಂದು ತೂಕ , ನಮ್ಮೂರ ಜನ , ನಮ್ಮವರು , ನಮ್ಮ ಪರಿಚಿತರು ಅದನ್ನ ಕಂಡು ಹೊಗಳುತ್ತಾರಲ್ಲ ಅದು ಇನ್ನೊಂದು ತೂಕ. ಅದಕ್ಕೆ ಬೇರೆಯ ಬೆಲೆ. ಹಾಗೆಂದು ಸುಮ್ಮನೆ ಎಲ್ಲರನ್ನೂ ಹೊಗಳುವುದು ಬೇಕಿಲ್ಲ. ಒಂದೊಳ್ಳೆ ಕೆಲಸ ಮಾಡಿದಾಗ ಹೊಗಳುವುದು ಧರ್ಮ .
ಆದರೆ ಇವತ್ತು ಕಾಲ ಬದಲಾಗಿದೆ ಅಥವಾ ಜನ ಬದಲಾಗಿದ್ದಾರೆ. ನಮ್ಮವರು ,ಹತ್ತಿರದವರು ,ಪರಿಚಿತರು ಹೋಗಳುವುದು ದೊಡ್ಡ ಮಾತು ,ತೆಗಳದೆ ,ಕುಹುಕದ ಮಾತನಾಡದಿದ್ದರೆ ಅದೇ ದೊಡ್ಡದು. ಇದರರ್ಥ ಕೂಡ ಸರಳ ನಾವು ನಮ್ಮ ಪಾಡಿಗೆ ಕೆಲಸ ಮಾಡುತ್ತಾ ಹೋದರೆ ಸಾಕು ,ಜಗತ್ತಿನ ಯಾವುದೂ ಮೂಲೆಯಲ್ಲಿ ಕುಳಿತ ಕಂಡು ಕೇಳರಿಯದ ಜೀವಿಯ ಮನಸ್ಸು ತಟ್ಟಿರುತ್ತೇವೆ ಅಷ್ಟು ಸಾಕು!
ಮೊನ್ನೆ ಹೀಗೆ ಆಯ್ತು .ಜಪಾನ್ ಪ್ರವಾಸಕ್ಕೆ ಹೊರಟಾಗ ಸೆಕ್ಯೂರಿಟಿ ಚೆಕ್ಕ್ನಲ್ಲಿ ಕನ್ನಡಿಗ ಆಫೀಸರ್ ಒಬ್ಬರು ನನ್ನ ಗುರುತು ಹಿಡಿದು ಮಾತನಾಡಿಸಿ ನಿಮ್ಮ ಬರಹದ ಫ್ಯಾನ್ ಎಂದರು. ಆತ್ಮೀಯತೆಯಿಂದ ಕೈ ಕುಲುಕಿ ಹೋಗಿ ಬನ್ನಿ ಸಾರ್ ಎಂದವರು, ನೀವು ಸದಾ ಹೇಳುವಂತೆ ಒಳ್ಳೆಯದಾಗಲಿ ಎಂದು ಕಣ್ಣು ಹೊಡೆದರು.
ಹೊಗಳಿಕೆ ಬೇಕು .ಅದು ಇನ್ನಷ್ಟು ದುಡಿಯಲು ಪ್ರೇರಣೆ ನೀಡುವಷ್ಟು ಸಾಕು .ಅತಿಯಾದರೆ ಅಮೃತವೂ ವಿಷ.
ಶುಭವಾಗಲಿ .
ಫೋಟೋದಲ್ಲಿ ನನ್ನ ಓದುಗ ಸಹೋದರರೊಬ್ಬರ ಪುಟಾಣಿ ಕಂದಮ್ಮ ಬದುಕು ಸುಂದರ ಪುಸ್ತಕದ ಜೊತೆಯಲ್ಲಿದ್ದಾಳೆ
-ರಂಗಸ್ವಾಮಿ ಮೂಕನಹಳ್ಳಿ