ಎಪ್ಪತ್ತರ ದಶಕ… ನೀವು ರಾಮಾನುಜಾ ರಸ್ತೆಯಲ್ಲಿ ನಡೆದು ಬಂದು ಪಾತಾಳ ಆಂಜನೇಯನ ಗುಡಿ ದಾಟಿ ತುಸು ದೂರ ಕ್ರಮಿಸಿದರೆ ಬಲಕ್ಕೆ ಸಿಗುವ ಮೂರನೇ ರಾಮಚಂದ್ರ ಅಗ್ರಹಾರದ ರಸ್ತೆಗೆ ಹೊಕ್ಕು ಎಡಬಲಗಳಲ್ಲಿ ವಿರಾಜಾಮಾನರಾಗಿದ್ದ ಬ್ರಾಹ್ಮಣರ ಮನೆಗಳನ್ನು ದಾಟಿಕೊಂಡು ಮೇಲಕ್ಕೆ ಹತ್ತಿದರೆ ರಸ್ತೆ ಫಕ್ಕನೆ ನಿಂತುಹೋಗಿ ಒಂದು ವಿಶಾಲವಾದ ಬಯಲಿನಂಥ ಪ್ರದೇಶದ ಮಧ್ಯಕ್ಕೆ ಬಂದು ನಿಲ್ಲುತ್ತೀರಿ… ನಿಮ್ಮ ಎಡಕ್ಕೆ ಪದ್ಮಾ ಟಾಕೀಸು, ಅದರ ಮೂಲೆಯಾಚೆಗೆ ಆರುಬೆರಳಪ್ಪನ ನೈಟು ಹೋಟೆಲು, ಅದರ ಪಕ್ಕಕ್ಕೆ ಎಸ್ ಈ ಎಲ್ ಡ್ರೈ ಕ್ಲೀನರ್ರು ಆಮೇಲೆ ಬಸವೇಶ್ವರ ರಸ್ತೆ… ಆ ರಸ್ತೆಗೆ ಆಗ ಹೆಣ ಹೋಗೋ ರಸ್ತೆ ಅಂತಲೇ ಫೇಮಸ್ಸು … ಯಾಕೆಂದ್ರೆ ಆ ರಸ್ತೆ ಸೀದಾ ಲಿಂಗಾಯತರ ಸ್ಮಶಾನದೊಳಕ್ಕೆ ಹೋಗಿ ಸೇರ್ತಿತ್ತು… ಅದಾದ ಒಂದೆರಡು ಅಂಗಡಿಗಳು ಕಳೆದ ಮೇಲೆ ಮಧ್ವಾಚಾರ್ ರಸ್ತೆ… ಅದರ ಪಕ್ಕಕ್ಕೆ ಮೂಲೆಯಲ್ಲಿ ಸ್ಥಿತಗೊಂಡಿದ್ದೇ “ಚಪಾತಿ ಗುರುಮಲ್ಲಪ್ಪನ ಹೋಟೆಲು”
ಈಗ ಅಲ್ಲಿ ವೈಭವದಿಂದ ಪೂಜೆಗೊಳ್ಳುತ್ತಿರುವ ನೂರೊಂದು ಗಣಪತಿಯೂ, ಈಶ್ವರನ ಸಕಲ ಸಂಸಾರವೂ ದೇಗುಲವೂ ಯಾವುದೂ ಅಲ್ಲಿರಲಿಲ್ಲ… ಅಲ್ಲಿದ್ದ ಬಯಲು ಸುತ್ತಲೂ ಆವರಿಸಿದ್ದ ಅಂಗಡಿಗಳ ಕಸ ಎಸೆಯುವ ಗುಂಡಿಯಾಗಿತ್ತು… ಪ್ರತಿವರ್ಷ ತಪ್ಪದೆ ಬರುವ ಭಾದ್ರಪದ ಮಾಸದ ಚೌತಿಯಂದು ಅಲ್ಲಿ ಭವ್ಯವಾದ ಗುಡಿಯ ಪ್ರಾಂಗಣವೂ, ಒಂದು ಸ್ಟೇಜೂ ಅಲ್ಲಿ ಸೃಷ್ಠಿಯಾಗುತ್ತಿತ್ತು… ಮತ್ತು ದೀವಳಿಗೆಯ ತನಕ ಅಲ್ಲಿ ಪ್ರತಿ ಸಾಯಂಕಾಲ ಆರ್ಕೆಸ್ಟ್ರಾಗಳೂ, ನಾಟಕಗಳೂ, ಹರಿಕಥೆಗಳೂ ನಡೆಯುತ್ತಿದ್ದವು… ಆದರೆ ಅಪಾರವಾದ ಜನ ಸೇರಿಸುವಂಥ ತಾಕತ್ತಿದ್ದುದು ಅವರೊಬ್ಬರಿಗೆ ಮಾತ್ರ… ಅವರು
ಗುರುರಾಜುಲು ನಾಯ್ಡು ಅಲಿಯಾಸ್ ಅರುಣ್ ಕುಮಾರ್ ಮತ್ತು ಅವರ ಹರಿಕಥೆ…
ಕಂಚಿನ ಕಂಠದ, ಅಸ್ಖಲಿತ ವಾಗ್ಜರಿಯ, ಅಪಾರ ಪಾಂಡಿತ್ಯದ, ನೂರಾರು ಹರಿಕಥೆಗಳನ್ನು ತುದಿನಾಲಿಗೆಯ ಮೇಲಿಟ್ಟುಕೊಂಡಿದ್ದ, ನಿರರ್ಗಳವಾಗಿ ಅರಳು ಹುರಿದಂತೆ ಕಥೆ ಹೇಳುತ್ತಿದ್ದ ವಾಗ್ಮಿ… ಅವರ “ರಾಜಾ ವಿಕ್ರಮ” ಮತ್ತು “ನಲ್ಲತಂಗಾದೇವಿ” ಕಥೆಗಳಂತೂ ಮಧ್ಯರಾತ್ರಿಯ ತನಕ ನಡೆದರೂ ಜನಸಮೂಹ ಒಂದಿಂಚೂ ಕದಲುತ್ತಿರಲಿಲ್ಲ… ಹಾಗಿತ್ತು ಕಥಾ ವೈಖರಿ… ಹರಿಕಥೆಗಳ ಆಡಿಯೋ ಕ್ಯಾಸೆಟ್ಟುಗಳು ಬಿಸಿದೋಸೆಯಂತೆ ಖರ್ಚಾಗುತ್ತಿದ್ದವು…
ಇಂತಿಪ್ಪ ಹರಿಕಥಾದಾಸರ ಬಹುದೊಡ್ಡ ಅಭಿಮಾನಿ ನಮ್ಮ ಚಪಾತಿ ಗುರುಮಲ್ಲಪ್ಪ… ಹೋಟೆಲ್ಲಿನ ಅಗ್ನಿಮೂಲೆಗೆ ಗಲ್ಲಾ ಪೆಟ್ಟಿಗೆ… ಟೇಬಲ್ಲಿನ ಮೇಲೊಂದು ಟೇಪ್ ರೆಕಾರ್ಡರ್ರು… ಒಂದರ ಹಿಂದೊಂದಂತೆ ಹರಿಕಥೆ ಕ್ಯಾಸೆಟ್ಟುಗಳನ್ನು ಏರಿಸಿ ದೊಡ್ಡ ದನಿಯಲ್ಲಿ ಎಲ್ಲರಿಗೂ ಕೇಳಿಸುತ್ತಿದ್ದ… ನೀವ್ ನಂಬುತ್ತೀರೋ ಇಲ್ವೋ ಅವನ ಹೋಟೆಲ್ಲಿನ ಚಪಾತಿಗಳು ಮೊರದಷ್ಟಗಲ ಮತ್ತು ಅದಕ್ಕೊಂದು ಮಾದಕ ರುಚಿ ಇತ್ತು… ಅಲ್ಲಿ ಸಿಗುತ್ತಿದ್ದುದು ಎರಡೇ ಐಟಮ್ಮು ಒಂದು ಚಟ್ನಿ ಚಪಾತಿ ಇನ್ನೊಂದು ಸಾಗು ಚಪಾತಿ ಕ್ರಮವಾಗಿ ಅರವತ್ತು ಮತ್ತು ಎಪ್ಪತ್ತು ಪೈಸೆ… ಹೋಟೆಲಿನ ಒಳಹೊಕ್ಕ ಯಾರೂ ತಮ್ಮಿಷ್ಟದಂತೆ ಎಲ್ಲೆಂದರಲ್ಲಿ ಕುಳಿತುಕೊಳ್ಳುವ ಹಾಗಿರಲಿಲ್ಲ… ಒಳಬಂದು ಅವನ ಗಲ್ಲಾ ಪೆಟ್ಟಿಗೆಯ ಪಕ್ಕದಲ್ಲಿ ನಿಂತು ಎಷ್ಟು ಜನ ಅಂತ ಹೇಳ್ಬೇಕಿತ್ತು… ಆಗ ಅವನು ಎಲ್ಲಿ ತೋರಿಸ್ತಾನೋ ಅಲ್ಲಿ ಕೂರೋದು ಹೋದೋರ ಕರ್ಮ… ಆದ್ರೆ ದಿನಾ ಬರೋರಿಗೆ ಅಂತಾನೆ ಬೇರೆ ಸೀಟು… ಹಳ್ಳಿಗಳಿಂದ ಬರೋರಿಗೆ ಬೇರೆ… ದೊಡ್ಡ ದೊಡ್ಡ ಆಫೀಸರುಗಳಿಗೆ ಮೇಲ್ಮಹಡಿ… ಹೀಗೆ…
ಗಣಪತಿ ಹಬ್ಬದ ಸೀಜನ್ನಿನಲ್ಲಿ ಅರುಣ್ ಕುಮಾರ್ ಹರಿಕಥೆ ಎಷ್ಟು ಫೇಮಸ್ಸೋ ಇಕ್ಬಾಲ್ ಪಾರ್ಟಿ ಆರ್ಕೆಷ್ಟ್ರಾನೂ ಅಷ್ಟೇ ಫೇಮಸ್ಸು… ಅದ್ರಲ್ಲೂ ಅವನು ಹಾಡುತ್ತಿದ್ದ ಭಕ್ತ ಕುಂಬಾರ ಪಿಚ್ಚರಿನ “ರಂಗಾ… ವಿಠ್ಠಲಾ” ಅಂತೂ ಜಗದ್ವಿಖ್ಯಾತ… ಇಂತಿಪ್ಪ ದಿನಗಳಲ್ಲಿ ನಾನು ಪಟ್ಟಾಗಿ ಚಪಾತಿ ಬಾರಿಸಿಬಿಟ್ಟು ಹಾಡುತ್ತಿದ್ದ ಇಕ್ಬಾಲನ ಮುಂದೆ ಕೂತುಬಿಟ್ಟರೆ ಸ್ವರ್ಗಕ್ಕೆ ಮೂರೇ ಗೇಣು… ಆದ್ರೆ ಈ ಕಾರ್ಯಕ್ರಮಗಳು ನಡೀತಿದ್ದಿದ್ದು ಸಂಜೆಗೆ… ಬೆಳಿಗ್ಗೆ ಎಲ್ಲ ಸ್ಕೂಲ್ ಮಕ್ಕಳನ್ನು ಕರೆತಂದು ಸ್ಟೇಜು ಹತ್ತಿಸಿ ಕೈಗೆ ಮೈಕು ಕೊಟ್ಟು ನಿಂಗೆ ಯಾವ್ ಹಾಡು ಬರುತ್ತೋ ಅದನ್ನೇ ಹೇಳು ಅಂತ ಹುರಿದುಂಬಿಸ್ತಾ ಇದ್ರು… ಹೀಗಿರುವಾಗಲೇ ಒಂದಿನ ಅವಳು ನನ್ನ ಕಣ್ಣಿಗೆ ಬಿದ್ದಿದ್ದು…
ಎರಡು ಜಡೆ, ಕೆಂಪು ಟೇಪು, ಸ್ಕೂಲ್ ಯೂನಿಫಾರ್ಮು, ಹೊಳೆಯುತ್ತಿದ್ದ ಬಟ್ಟಲುಗಣ್ಣುಗಳು, ಹುಣ್ಣಿಮೆಯ ಚಂದಿರನಂಥ ಮುಖದಲ್ಲಿ ಮಾಸದ ಮುಗ್ಧ ಮುಗುಳ್ನಗೆ, ಜಿಂಕೆಮರಿಯಂತೆ ನಡೆಯುವಾಗ ಅತ್ತಿತ್ತ ಆಡುತ್ತಿದ್ದ ಲೋಲಕ್ಕು, ನಕ್ಕಾಗ ಮಿಂಚುತ್ತಿದ್ದ ದಾಳಿಂಬೆಯ ಕಣಗಳಂತೆ ಜೋಡಿಸಿದ್ದ ದಂತಪಂಕ್ತಿ, ಅವಳು ಅತ್ಯಂತ ಸನಿಹದಲ್ಲೇ ಸುಳಿದುಹೋದಾಗ ಕಮ್ಮನೆ ನನ್ನೆದೆಯ ತುಂಬೆಲ್ಲ ಹರಡಿಕೊಳ್ಳುತ್ತಿದ್ದ ಪೂಸಿಕೊಂಡಿದ್ದ ಪಾಂಡ್ಸ್ ಪೌಡರಿನ ಘಮಲು, ಯಾರಿವಳು ಅಂದ್ಕೊಳ್ಳೋವಾಗ…ನಿರ್ಭಿಡೆಯಿಂದ ವೇದಿಕೆ ಏರಿ ಪಕ್ಕಾ ಹಾಡುಗಾರ್ತಿಯಂತೆ ಮೈಕು ಹಿಡಿದು…
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ
ತೆರೆಯೋ ಬಾಗಿಲನು…
ಆಹ್… ಕಂಠವೂ ಸುಶ್ರಾವ್ಯವೇ… ಆದ್ರೆ ಬಹುಶ ಅವ್ಳು ನಂಗಿಂತ ಒಂದೈದು ವರ್ಷ ದೊಡ್ಡೋಳಿರಬಹುದೇನೋ ಅನ್ನಿಸ್ತಿತ್ತು… ಏನೇ ಆಗ್ಲಿ , ಅಂದ್ಕೊಂಡು ಹಾಡು ಕೇಳ್ತಾ ಕೇಳ್ತಾ ಅವಳನ್ನೇ ನೋಡ್ತಾ ಹಗಲುಗನಸು ಕಾಣ್ತಾ ಇದ್ದೆ… ಸ್ವಲ್ಪ ಹೊತ್ತು ಕಳೆದಿರಬಹುದೇನೋ… ಯಾಕೋ ಅವಳ ದನಿ ನಡುಗುತ್ತಿದೆ ಅನ್ನಿಸ್ತು… ಯಾಕೆ , ಏನಾಯ್ತು ಅಂತ ಯೋಚಿಸೋಷ್ಟರಲ್ಲಿ “ಫಟ್ ” ಅಂತ ತಲೆಗೆ ಒಂದ್ ಏಟು ಬಿತ್ತು… ಬೆದರಿದ ನಾನು ಇನ್ನೇನ್ ಹಿಂದಿರುಗಿ ನೋಡ್ಬೇಕು…
ಏಯ್… ಕಳ್ಚ್ ಕೊಳೋ… ಏನ್ ನೋಡ್ತಾ ನಿಂತಿದಿಯಾ… ಅವ್ಳು ನಮ್ ಹುಡುಗಿ… ಗೊಗ್ಗರು ದನಿ ಹಿಂದಿನಿಂದ ತೂರಿ ಬಂತು… ಹಾಡು ಹೇಳ್ತಿದ್ದೊಳು ಅರ್ಧಕ್ಕೆ ನಿಲ್ಲಿಸಿ ಥರಥರ ನಡುಗುತ್ತಾ ನಿಂತಿದ್ಲು… ನಾನು ಬೆಚ್ಚಿಬಿದ್ದು ಹಿಂದಕ್ಕೆ ತಿರುಗಿ ನೋಡಿದೆ… ಅಲ್ಲಿ ನಿಂತಿದ್ದ…
ಕೂಳೆ… ಅಲಿಯಾಸ್ ಕೂಳೆ ಬಸವ… ಅಲಿಯಾಸ್ ಬಸವರಾಜ… ನಮ್ ಅಗ್ರಹಾರದ ರೌಡಿ…
ಮಿಕ್ಕಿದ್ದು ನಾಳೆಗೆ….