ದುರ್ಗದ ಪಾಳೇಗಾರ ಪರಾಕ್ರಮ ಭಾಗ – 2

ಸಾಳುವ ನರಸಿಂಗನಾಯಕನ ಪಟ್ಟದ ಕುದುರೆ…

ಮೆಲ್ಲನೆ ಒಳಕ್ಕೆ ನುಗ್ಗಿದ ನಾಯಕರು ಗೂಟಕ್ಕೆ ಕಟ್ಟಿದ ಹಗ್ಗವನ್ನು ಇನ್ನೇನು ಬಿಚ್ಚಲು ಶುರುವಿಡಬೇಕು… ಹೊಸ ಬೆವರಿನ ವಾಸನೆ ಹಿಡಿದ ಕುದುರೆ ಕಾಲುಗಳನ್ನು ಅತ್ತಿತ್ತ ಬಡಿದು ದೊಡ್ಡದಾಗಿ ಕೆನೆಯಹತ್ತಿತು… ತಟ್ಟನೆ ಮಧ್ಯರಾತ್ರಿಯ ಜೊಂಪಿನಲ್ಲಿ ತೂಗುತ್ತಿದ್ದ ಕಾವಲು ಭಟ ಒಳಕ್ಕೆ ನುಗ್ಗಿದ… ಕಣ್ಣೆವೆ ಇಕ್ಕುವಷ್ಟರಲ್ಲೇ ಛಂಗನೆ ಪಕ್ಕಕ್ಕೆ ನೆಗೆದ ನಾಯಕರು ಅಲ್ಲೇ ಇದ್ದ ಒಣಹುಲ್ಲಿನ ಮೆದೆಯೊಳಕ್ಕೆ ಹಾರಿ ತಮ್ಮ ಮೇಲೂ ಒಣಹುಲ್ಲನ್ನು ಪೇರಿಸಿಕೊಂಡು ಅವನಿಗೆ ಕಾಣದಂತೆ ಅವಿತರು… ಇಷ್ಟಾಗುವಷ್ಟರಲ್ಲೇ ಒಂದು ಅಚಾತುರ್ಯ ನಡೆದುಹೋಯಿತು…

ಅವಿತುಕೊಳ್ಳುವ ಭರದಲ್ಲಿ ನಾಯಕರು ತಮ್ಮ ಕೈಯನ್ನು ಕುದುರೆ ಕಟ್ಟುವ ಹಗ್ಗದ ಮೇಲಿಟ್ಟುಬಿಟ್ಟರು… ಹಗ್ಗ ಬಿಚ್ಚಿಕೊಂಡಿದ್ದನ್ನು ನೋಡಿದ ಭಟ ಇವರ ಕೈಯನ್ನೂ ಸೇರಿಸಿ ಗಟ್ಟಿಯಾಗಿ ಕಟ್ಟಿ ಗೂಟವನ್ನು ಬಲವಾಗಿ ನೆಲಕ್ಕೆ ಬಡಿದು ಭದ್ರಮಾಡಿ ಹೋಗಿಬಿಟ್ಟ… ಗೂಟದ ಜೊತೆಯಲ್ಲೇ ನಾಯಕರ ಕೈ ಸಹಾ ನೆಲಕ್ಕೆ ಹೂತುಹೋಯಿತು…

ಉಹೂಂ… ಅರೆಕ್ಷಣವೂ ಯೋಚಿಸಲಿಲ್ಲ ನಾಯಕರು… ತಟ್ಟನೆ ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ಬಾಕುವನ್ನು ತೆರೆದು… ಅವುಡುಗಚ್ಚಿ… ಮನದಲ್ಲೇ ಏಕನಾಥೇಶ್ವರಿಯನ್ನು ನೆನೆದು… ಹೂತುಕೊಂಡಿದ್ದ ಕೈಯನ್ನು ಚರಚರನೆ ಕತ್ತರಿಸಿ ಹಾಕಿಬಿಟ್ಟರು… ಜಲಜಲನೇ ನೀರಿನಂತೆ ಹರಿದುಹೋಯಿತು ರಕ್ತ… ಅವನ್ನೆಲ್ಲ ಚಿಂತಿಸಲು ಸಮಯವಿರಲಿಲ್ಲ… ತಟ್ಟನೆ ಎದ್ದವರೇ ಮೊಂಡಾದ ಕೈಯ್ಯನ್ನು ಬಿಡಿಸಿಕೊಂಡು ಹಗ್ಗವನ್ನು ಬಿಚ್ಚಿ ಕ್ಷಣಾರ್ಧದಲ್ಲಿ ಕುದುರೆಯೇರಿ ಬೆಟ್ಟ ಹತ್ತಿ ದುರ್ಗದೊಳಗೆ ಮಾಯವಾಗಿ ಹೋದರು…

ಹೊತ್ತಿಗೆ ಮುಂಚೆಯೇ ಎದ್ದ ಸಾಳುವ ನರಸಿಂಗನಾಯಕನ ಎದೆ ಸಣ್ಣಗೆ ಕಂಪಿಸುತ್ತಿತ್ತು… ತಲೆ ಅತ್ತಿತ್ತ ಆಡುತ್ತಿತ್ತು… ಅಪಶಕುನ… ಹೌದು… ಡೇರೆಯೊಳಕ್ಕೆ ನುಗ್ಗಿ ಪಟ್ಟದ ಕುದುರೆಯನ್ನೇ ಅಪಹರಿಸಿಕೊಂಡು ಹೋದನೆಂದರೆ ಅದು… ಅಪಶಕುನವಲ್ಲದೇ ಇನ್ನೇನು… ಯಾಕೋ ದುರ್ಗಕ್ಕೆ ಕಾಲಿಟ್ಟ ಘಳಿಗೆ ಸರಿ ಇಲ್ಲವೆನ್ನಿಸಿಬಿಟ್ಟಿತು…

ಬೆಳಕು ಸರಿಯಿತು… ಹಚ್ಚನೆ ಹೆಗಲೇರಿ ಭಾಸ್ಕರ ನೆತ್ತಿಗೆ ಬಂದಿದ್ದ… ಬಿಸಿಲು ಬಡಿಯುತ್ತಿತ್ತು… ದಾಹವಾಗಿದ್ದ ನರಸಿಂಗರಾಯನ ಆನೆಗೆ ನೀರು ಕುಡಿಸಲು ಮಾವುತ ಅಲ್ಲಿಯೇ ಇದ್ದ ಕೆರೆಯತ್ತ ಕರೆದೊಯ್ದ…

ಬೆಟ್ಟದ ಮೇಲೆ ಹುಲಿ ಹೊಂಚು ಹಾಕಿ ಕುಳಿತಿತ್ತು…

ಆನೆ ನೀರು ಕುಡಿಯಲು ದೇಹ ಬಗ್ಗಿಸೋದನ್ನೆ ಬೆಟ್ಟದ ಮೇಲಿನ ದುರ್ಗದ ತುದಿಯಿಂದ ನೋಡುತ್ತಿದ್ದ ಮತ್ತಿ ತಿಮ್ಮಣ್ಣ ನಾಯಕರು ಆಳೆತ್ತರದ ಬಿಲ್ಲನ್ನು ಕಾಲಿನಲ್ಲೇ ನೆಲಕ್ಕೆ ಹೂತು ಮತ್ತೊಂದು ಕೈಯಿಂದ ಮೊನಚಾದ ಬಾಣವನ್ನು ಗುರಿಯಿಟ್ಟು ನೀರು ಕುಡಿಯುತ್ತಿದ್ದ ಆನೆಯ ಭ್ರೂ ಮಧ್ಯಕ್ಕೆ ಸರಿಯಾಗಿ ಗುರಿಯಿಟ್ಟು ಬಿಟ್ಟರು…

ಗುರಿ ತಪ್ಪಲಿಲ್ಲ…

ಆನೆಯ ಹಣೆಯನ್ನು ಸೀಳಿದ ಬಾಣ ಎರಡಡಿ ಒಳಕ್ಕೆ ಸಾಗಿ ನಿಂತಿತು… ರಣಭಯಂಕರವಾಗಿ ಘೀಳಿಡುತ್ತಾ ಆ ದೈತ್ಯ ದೇಹಿ ನೆಲಕ್ಕೊರಗಿತು…

ಸುದ್ದಿ ಕೇಳಿ ಗಡಗಡನೆ ನಡುಗಿಹೋದ ಸಾಳುವ ನರಸಿಂಗರಾಯ ಛಳ್ಳನೆ ತನ್ನ ಚಲ್ಲಣದಲ್ಲೇ ಉಚ್ಛೆ ಹುಯಿದುಕೊಂಡುಬಿಟ್ಟ…

To Be Continued…..

-ಧರ್ಮೇಂದ್ರ ಕುಮಾರ್ ಅರೇನಹಳ್ಳಿ

Leave a Comment

Your email address will not be published. Required fields are marked *

Scroll to Top