ದೆಹಲಿಯಲ್ಲಿ ಕಂಪು ಪಸರಿಸಲಿದೆ ಕನ್ನಡ ಕಾವ್ಯ-ಸಂಗೀತ: ‘ಆಕಾಶ ದೀಪವು ನೀನು’ ಸಾಂಸ್ಕೃತಿಕ ವೈಭವಕ್ಕೆ ದೆಹಲಿ ಕರ್ನಾಟಕ ಸಂಘ ಸಜ್ಜು!
ಆಕಾಶ ದೀಪವು ನೀನು ದೆಹಲಿ ಕರ್ನಾಟಕ ಸಂಘ
ನವದೆಹಲಿ: ಭಾರತದ ರಾಜಧಾನಿಯಲ್ಲಿ ಕನ್ನಡದ ಅಸ್ಮಿತೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಂಪನ್ನು ನಿರಂತರವಾಗಿ ಪಸರಿಸುತ್ತಾ ಬಂದಿರುವ ದೆಹಲಿ ಕರ್ನಾಟಕ ಸಂಘವು (ರಿ.) ಮತ್ತೊಂದು ಅದ್ಧೂರಿ ಸಾಂಸ್ಕೃತಿಕ ಸಂಜೆಗೆ ವೇದಿಕೆ ಸಿದ್ಧಪಡಿಸಿದೆ. ಈ ಹಿಂದೆ ಯಶಸ್ವಿಯಾಗಿ ಜರುಗಿದ್ದ ಜನಪದ ಕಲಾ ಸಂಭ್ರಮದಂತೆ, ಈ ಬಾರಿಯೂ ಪ್ರೇಕ್ಷಕರ ಮನ ತಣಿಸಲು “ಆಕಾಶ ದೀಪವು ನೀನು” ಎಂಬ ವಿಶೇಷ ಪ್ರಣಯಗೀತೆಗಳು ಹಾಗೂ ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ವಿವರಗಳು:
- ದಿನಾಂಕ: 09 ಆಗಸ್ಟ್ 2026, ಭಾನುವಾರ
- ಸಮಯ: ಸಂಜೆ 4:30ಕ್ಕೆ
- ಸ್ಥಳ: ದೆಹಲಿ ಕರ್ನಾಟಕ ಸಂಘದ ಸಭಾಂಗಣ, ರಾವ್ ತುಲಾರಾಮ್ ಮಾರ್ಗ, ಸೆಕ್ಟರ್-12, ಆರ್.ಕೆ. ಪುರಂ, ನವದೆಹಲಿ.
- ವಿಶೇಷ ಆಕರ್ಷಣೆ: ‘ಪ್ರಣಯರಾಜ’ ಶ್ರೀನಾಥ್ ಅವರ ಉಪಸ್ಥಿತಿ.
- ಗಾಯನ: ಶ್ರೀರಾಮಚಂದ್ರ ಹಡಪದ್ ಹಾಗೂ ಹರ್ಷ ರಂಜಿನಿ.
- ಪ್ರಾಯೋಜಕರು: ಕರ್ನಾಟಕ ಬ್ಯಾಂಕ್.
ಅಧ್ಯಕ್ಷ ರೇಣುಕುಮಾರ್ ಆರ್ ಅವರ ನೇತೃತ್ವದಲ್ಲಿ ಕನ್ನಡದ ವಿಭಿನ್ನ ಮೆರಗು
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ರೇಣುಕುಮಾರ್ ಆರ್ ಅವರ ಕಲ್ಪನೆ ಹಾಗೂ ನಾಯಕತ್ವದಲ್ಲಿ ಸಂಘವು ದಿನದಿಂದ ದಿನಕ್ಕೆ ಹೊಸ ಮೆರುಗು ಪಡೆಯುತ್ತಿದೆ. ಹೊರನಾಡಿನಲ್ಲಿ ಕನ್ನಡಿಗರನ್ನು ಒಟ್ಟುಗೂಡಿಸುವುದು ಮಾತ್ರವಲ್ಲದೆ, ಕನ್ನಡದ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರಚುರಪಡಿಸುವಲ್ಲಿ ಅವರ ಕೊಡುಗೆ ಅನನ್ಯವಾಗಿದೆ.
ಅಧ್ಯಕ್ಷ ರೇಣುಕುಮಾರ್ ಅವರ ವಿಭಿನ್ನ ಅಭಿರುಚಿ, ಸಾಂಸ್ಕೃತಿಕ ಕಾಳಜಿ ಮತ್ತು ಸಂಘಟನಾ ಚತುರತೆಯಿಂದಾಗಿ ಈ ಹಿಂದೆ ನಡೆದ ಜಾನಪದ ಕಾರ್ಯಕ್ರಮವು ದೆಹಲಿ ಕನ್ನಡಿಗರ ಮನಗೆದ್ದಿತ್ತು. ಅದೇ ಮಾದರಿಯಲ್ಲಿ, ಪ್ರೇಮಿಗಳ ಹಾಗೂ ಕಾವ್ಯಪ್ರೇಮಿಗಳ ಮನಸ್ಸಿಗೆ ಮುದ ನೀಡುವ ‘ಆಕಾಶ ದೀಪವು ನೀನು’ ಕಾರ್ಯಕ್ರಮವನ್ನು ಅತ್ಯಂತ ವೈಭವಯುತವಾಗಿ ಆಯೋಜಿಸಲಾಗಿದೆ. ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಅವರ ಸಹಕಾರದೊಂದಿಗೆ ಸಂಘವು ಹೊರನಾಡಿನಲ್ಲಿ ಕನ್ನಡದ ಧ್ವಜವನ್ನು ಎತ್ತಿಹಿಡಿಯುತ್ತಿದೆ.
ತಾರಾ ಮೆರುಗು ಮತ್ತು ಹಿರಿಯ ಕಲಾವಿದರ ನಾದಸುಧೆ
ಈ ಕಾರ್ಯಕ್ರಮಕ್ಕೆ ಮುಖ್ಯ ಆಕರ್ಷಣೆಯಾಗಿ ಸ್ಯಾಂಡಲ್‌ವುಡ್‌ನ ಹಿರಿಯ ನಟ, ‘ಪ್ರಣಯರಾಜ’ ಶ್ರೀನಾಥ್ ಅವರು ಆಗಮಿಸಲಿದ್ದು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದಾರೆ. ಜೊತೆಗೆ ಪ್ರಖ್ಯಾತ ಗಾಯಕರಾದ ಶ್ರೀರಾಮಚಂದ್ರ ಹಡಪದ್ ಮತ್ತು ಹರ್ಷ ರಂಜಿನಿ ಅವರ ಮಧುರ ಕಂಠದಲ್ಲಿ ಪ್ರಣಯ ಗೀತೆಗಳು ಹರಿದುಬರಲಿವೆ.
ವಾದ್ಯವೃಂದದಲ್ಲಿ ಕಿಬೋರ್ಡ್‌ನಲ್ಲಿ ಪೃಥ್ವಿ ಉಮೇಶ್, ರಿದಮ್ ಪ್ಯಾಡ್‌ನಲ್ಲಿ ಪೃಥ್ವಿ ಶ್ರೀನಿವಾಸ್, ಕೊಳಲಿನಲ್ಲಿ ನೀತು ನಿನಾದ್, ತಬಲಾದಲ್ಲಿ ಜಲೀಲ್ ಪಾಷಾ ಹಾಗೂ ಢೋಲಕ್‌ನಲ್ಲಿ ಶೇರು ಮುನ್ನಾ ಸಾಥ್ ನೀಡಲಿದ್ದಾರೆ.
ದೆಹಲಿಯಲ್ಲಿ ನೆಲೆಸಿರುವ ಸಮಸ್ತ ಕನ್ನಡಿಗರು ಈ ಸಾಂಸ್ಕೃತಿಕ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆತ್ಮೀಕವಾಗಿ ಕೋರಿದ್ದಾರೆ.
