sakhigeetha.com

Top 1 Women's Magazines & Publications

Latest:
ಸುದ್ದಿ ಜಗತ್ತು

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ₹2.76 ಕೋಟಿ ಬೃಹತ್ ಹಗರಣ: ಮಾಜಿ ಬಿಬಿಎಂಪಿ ನಾಯಕ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು!

  • ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಹಗರಣ (Bengaluru West City Corporation Scam)

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಕೇವಲ ಆರು ತಿಂಗಳ ಅವಧಿಯಲ್ಲಿ “ಇತರೆ ಸಾಮಾನ್ಯ ಅಥವಾ ತುರ್ತು ವೆಚ್ಚಗಳು” ಎಂಬ ಹೆಸರಿನಲ್ಲಿ ಸುಮಾರು ₹2,76,00,000/- (ಎರಡು ಕೋಟಿ ಎಪ್ಪತ್ತಾರು ಲಕ್ಷ ರೂಪಾಯಿ) ಗಳಷ್ಟು ಭಾರಿ ಮೊತ್ತದ ಹಣವನ್ನು ಲೂಟಿ ಮಾಡಿರುವ ಭೀಕರ ಭ್ರಷ್ಟಾಚಾರದ ಹಗರಣ ಬಯಲಾಗಿದೆ!

​ಮಾಜಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ರಮೇಶ್ ಎನ್.ಆರ್. ಅವರು ದಾಖಲೆಗಳ ಸಮೇತ ಈ ಬೃಹತ್ ಹಗರಣವನ್ನು ಜಗಜ್ಜಾಹೀರುಗೊಳಿಸಿದ್ದು, ತಪ್ಪಿತಸ್ಥರ ವಿರುದ್ಧ ಲೋಕಾಯುಕ್ತ ಆಯುಕ್ತರಿಗೆ ಹಾಗೂ ಬಿಬಿಎಂಪಿ/ಜಿಬಿಎ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಅಸ್ತಿತ್ವದಲ್ಲೇ ಇಲ್ಲದ ಕಚೇರಿ ಹೆಸರಲ್ಲಿ ಕೋಟ್ಯಂತರ ಹಣ ಲೂಟಿ!

​ರಾಜ್ಯ ಸರ್ಕಾರವು ದಿನಾಂಕ 02/09/2025 ರಂದು ಹಳೆಯ ಬಿಬಿಎಂಪಿ ರದ್ದುಗೊಳಿಸಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದಡಿಯಲ್ಲಿ 5 ಹೊಸ ಪಾಲಿಕೆಗಳನ್ನು ರಚಿಸಿತ್ತು. ಈ ವೇಳೆ ಹಳೆಯ ಬಿಬಿಎಂಪಿಯ ‘ಕಾರ್ಯಪಾಲಕ ಅಭಿಯಂತರರು (ಯೋಜನೆ) ಪಶ್ಚಿಮ’ ಹುದ್ದೆಯು 01/09/2025 ಕ್ಕೆ ಕೊನೆಗೊಂಡಿತ್ತು.

​ಆದರೆ ಕಳೆದ 11 ತಿಂಗಳಿನಿಂದ ಅಸ್ತಿತ್ವದಲ್ಲೇ ಇಲ್ಲದ ಈ ಹುದ್ದೆಯ ಹೆಸರಿನಲ್ಲಿ, ದಿನಾಂಕ 29/01/2026 ರಿಂದ 29/07/2026 ರವರೆಗಿನ ಕೇವಲ 06 ತಿಂಗಳ ಅವಧಿಯಲ್ಲಿ “ತುರ್ತು ವೆಚ್ಚಗಳು” (Contingency Charges) ಎಂಬ ನಕಲಿ ದಾಖಲೆಗಳನ್ನು ಸೃಷ್ಟಿಸಿ ₹2,61,63,634/- ಹಣವನ್ನು ಲೂಟಿ ಮಾಡಲಾಗಿದೆ!

ವಂಚನೆಯ ಮಾಸ್ಟರ್ ಪ್ಲಾನ್ – ಯಾರೆಲ್ಲ ಭಾಗಿ?

  1. ಮುನಿಯಪ್ಪ (ವಿಶೇಷ ವಿಭಾಗದ ಇಇ): ಹಿಂದಿನ ‘EE – Project (West)’ ಹುದ್ದೆಯನ್ನು ‘ವಿಶೇಷ ವಿಭಾಗದ ಕಾರ್ಯಪಾಲಕ ಅಭಿಯಂತರ’ ಎಂದು ಬದಲಾಯಿಸಿಕೊಂಡಿದ್ದ ಮುನಿಯಪ್ಪ (ದಿನಾಂಕ 31/07/2026 ರಂದು ನಿವೃತ್ತರಾಗಿದ್ದಾರೆ) ಈ ವಂಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
  2. ರವಿಕುಮಾರ್ N. (ಎಫ್‌ಡಿಎ): ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಉಪ ಹಣಕಾಸು ನಿಯಂತ್ರಕರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ (FDA) ಆಗಿರುವ ರವಿಕುಮಾರ್ ಎನ್., ತನ್ನ ಸೋದರ ಸಂಬಂಧಿಯ ಹೆಸರಿನಲ್ಲಿ M/s N.S. Enterprises ಮತ್ತು M/s N.S.R. Enterprises ಎಂಬ ಬೇನಾಮಿ ಸಂಸ್ಥೆಗಳನ್ನು ನಡೆಸಿ ಕೋಟ್ಯಂತರ ರೂಪಾಯಿ ನಕಲಿ ಬಿಲ್ ಜಮೆ ಮಾಡಿಸಿಕೊಂಡಿದ್ದಾನೆ.
  3. ಹೆಚ್ಚುವರಿ ಲೂಟಿ: ಇದೇ N.S.R. Enterprises ಹೆಸರಿನಲ್ಲಿ ಸಹಾಯಕ ಹಣಕಾಸು ನಿಯಂತ್ರಕರ ಕಚೇರಿಯ “ಗಣಕಯಂತ್ರಗಳ ದುರಸ್ತಿ ಮತ್ತು ಸಾಮಾನ್ಯ ವೆಚ್ಚ” ಎಂಬ ನೆಪದಲ್ಲಿ ಮತ್ತೆ ₹17,28,654/- ಲೂಟಿ ಮಾಡಿರುವುದು ಸಾಬೀತಾಗಿದೆ.

ಒಂಬತ್ತು ಕೋಟಿ ವಂಚಿಸಿದ್ದ ಸಂಸ್ಥೆಯಲ್ಲೇ ಮತ್ತೊಂದು ಸ್ಕ್ಯಾಮ್!

​ಇದೇ M/s N.S. Enterprises ಸಂಸ್ಥೆಯು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಭಾಗದಲ್ಲಿ ಗಣಕಯಂತ್ರ ಹಾಗೂ ಪ್ರಿಂಟರ್ ಸರಬರಾಜು ಹೆಸರಿನಲ್ಲಿ ಸುಮಾರು ₹9 ಕೋಟಿ ವಂಚಿಸಿದೆ ಎಂದು ಕಳೆದ ವಾರವಷ್ಟೇ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಈಗ ಅದೇ ಬೇನಾಮಿ ಸಂಸ್ಥೆಯ ಮೂಲಕ ಪಶ್ಚಿಮ ನಗರ ಪಾಲಿಕೆಯಲ್ಲೂ ಕೋಟ್ಯಂತರ ಹಣ ದೋಚಿರುವುದು ಬೆಳಕಿಗೆ ಬಂದಿದೆ.

ಲೋಕಾಯುಕ್ತ ಐಜಿಪಿಗೆ ದೂರು – ಕಠಿಣ ಕ್ರಮಕ್ಕೆ ಆಗ್ರಹ!

​ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ನಕಲಿ ದಾಖಲೆ ಸೃಷ್ಟಿ ಹಾಗೂ ಸಾರ್ವಜನಿಕರ ತೆರಿಗೆ ಹಣ ವಂಚಿಸಿರುವ ನಿವೃತ್ತ ಇಇ ಮುನಿಯಪ್ಪ ಹಾಗೂ ಎಫ್‌ಡಿಎ ರವಿಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಪಾಲಿಕೆಗೆ ವಂಚಿಸಿರುವ ₹2.76 ಕೋಟಿ ಹಣವನ್ನು ಇಬ್ಬರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ವಸೂಲಿ ಮಾಡಬೇಕೆಂದು ಎನ್.ಆರ್. ರಮೇಶ್ ಅವರು ಜಿಬಿಎ ಮುಖ್ಯ ಆಯುಕ್ತರು ಹಾಗೂ ಲೋಕಾಯುಕ್ತ ಐಜಿಪಿ (IGP) ಅವರನ್ನು ತೀವ್ರವಾಗಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *