sakhigeetha.com

Top 1 Women's Magazines & Publications

Latest:
ಸುದ್ದಿ ಜಗತ್ತುPolitics

ಶಿವಾಜಿನಗರದಲ್ಲಿ ಜಿಬಿಎ ಇಂಜಿನಿಯರ್‌ ಮೇಲೆ ದಾಳಿ: ಹಲ್ಲೆಕೋರರ ವಿರುದ್ಧ ಗುಂಡಾ ಕಾಯ್ದೆಗೆ ಕೃಷ್ಣ ಬೈರೇಗೌಡ ಕಟ್ಟುನಿಟ್ಟಿನ ಆದೇಶ! ಶಿವಾಜಿನಗರ ಜಿಬಿಎ ಇಂಜಿನಿಯರ್ ಹಲ್ಲೆ ಗುಂಡಾ ಕಾಯ್ದೆ

ಶಿವಾಜಿನಗರ ಜಿಬಿಎ ಇಂಜಿನಿಯರ್ ಹಲ್ಲೆ ಗುಂಡಾ ಕಾಯ್ದೆ; ರಾಜಧಾನಿ ಬೆಂಗಳೂರಿನ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕಾಲುದಾರಿ (Footpath) ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬಿಬಿಎಂಪಿ ಇಂಜಿನಿಯರ್‌ಗಳ ಮೇಲೆ ದುಷ್ಕರ್ಮಿಗಳ ಗುಂಪೊಂದು ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರಚಿ ಭೀಕರವಾಗಿ ಹಲ್ಲೆ ನಡೆಸಿದೆ.

​ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಮಾಧವರಾವ್, ಇಂಜಿನಿಯರ್ ರುಚಿತಾ ಹಾಗೂ ಜೆಸಿಬಿ ಚಾಲಕರ ಮೇಲೆ ರಕ್ತಬರುವಂತೆ ಹಲ್ಲೆ ನಡೆಸಲಾಗಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

‘ಗುಂಡಾ ಕಾಯ್ದೆ’ ಪ್ರಯೋಗಿಸಲು ಸಚಿವರ ಆದೇಶ:

​ಈ ಸಮಾಜಘಾತುಕ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಕರ್ತವ್ಯ ನಿರತ ಅಧಿಕಾರಿಗಳಿಗೆ ರಕ್ಷಣೆ ನೀಡುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

​”ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದ ಒತ್ತುವರಿಯನ್ನು ಕಾನೂನುಬದ್ಧವಾಗಿ ತೆರವುಗೊಳಿಸಲು ಹೋದ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ಹಾಕಿ, ಅಟ್ಟಾಡಿಸಿ ಹೊಡೆದಿರುವುದು ಕ್ಷಮಾರ್ಹವಲ್ಲ. ಹಲ್ಲೆಯ ಮುಖ್ಯ ಸೂತ್ರಧಾರ ಬಸವರಾಜ್ ಪಡುಕೋಟೆ ಹಾಗೂ ಆತನ ಗ್ಯಾಂಗ್ ವಿರುದ್ಧ ತಕ್ಷಣವೇ ‘ಗುಂಡಾ ಕಾಯ್ದೆ’ (Goonda Act) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು” ಎಂದು ನಗರ ಪೊಲೀಸ್ ಕಮಿಷನರ್‌ಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

​”ಇವರು ಬಡ ಬೀದಿಬದಿ ವ್ಯಾಪಾರಿಗಳಲ್ಲ. ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು ಮಾಸಿಕ ಹಫ್ತಾ ವಸೂಲಿ ಮಾಡುವ ದಂದೆಕೋರರು. ಇಂತಹ ಪುಂಡರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ” ಎಂದು ಅವರು ಎಚ್ಚರಿಸಿದ್ದಾರೆ.

ಪೊಲೀಸ್ ಕ್ರಮ ಮತ್ತು ಪ್ರಸ್ತುತ ಸ್ಥಿತಿ:

​ಘಟನೆಗೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಈಗಾಗಲೇ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಇಂಜಿನಿಯರ್ ಮಾಧವರಾವ್ ಹಾಗೂ ಕಣ್ಣಿಗೆ ಪೆಪ್ಪರ್ ಸ್ಪ್ರೇ ಬಿದ್ದು ಗಾಯಗೊಂಡ ಸಿಬ್ಬಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

​ಇನ್ನು ಮುಂದೆ ನಗರಾದ್ಯಂತ ನಡೆಯುವ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಮತ್ತು ಬಿಬಿಎಂಪಿ ಸಿಬ್ಬಂದಿಗೆ ಬಿಗಿ ಪೊಲೀಸ್ ರಕ್ಷಣೆ ಒದಗಿಸಲು ತೀರ್ಮಾನಿಸಲಾಗಿದೆ.

Leave a Reply

Your email address will not be published. Required fields are marked *