sakhigeetha.com

Top 1 Women's Magazines & Publications

Latest:
ಸಾಹಿತ್ಯ ಸಂಸ್ಕೃತಿ

ರಕ್ತಕ್ಕಿಂತ ಗಾಢವಾದ ಬಾಂಧವ್ಯ (Story) -ಜ್ಯೋತಿ ಜೋಯಿಸ್, ತೀರ್ಥಹಳ್ಳಿ 

ಶಾಂತಳಿಗೆ ಮನೆ ಕೆಲಸ, ಮಕ್ಕಳು, ಹೊರಗಿನ ಕೆಲಸ—ಎಲ್ಲವೂ ಸೇರಿ ಜೀವನ ತುಂಬಾ ಕಷ್ಟವಾಗಿತ್ತು. ಒಂದು ದಿನ ಸೋದರತ್ತೆ ಪಾರ್ವತಮ್ಮನ ಮನೆಯ ಸತ್ಯನಾರಾಯಣ ಪೂಜೆಗೆ ಹೋದಾಗ ತನ್ನ ಕಷ್ಟವನ್ನು ಅವಳಿಗೆ ಹೇಳಿಕೊಂಡಳು.

“ಅತ್ತೆ, ನನಗೆ ಎಲ್ಲವನ್ನೂ ಒಬ್ಬಳೇ ಮಾಡಿಕೊಳ್ಳೋಕೆ ತುಂಬಾ ಕಷ್ಟವಾಗುತ್ತಿದೆ. ಮನೆಯಲ್ಲಿ ಕೆಲಸಕ್ಕೆ ಯಾರಾದರೂ ಇದ್ದರೆ ಹೇಳಿ. ನಮ್ಮವರೇ ಆಗಿದ್ದರೆ ಸಾಕು,” ಎಂದು ಕೇಳಿದಳು.

ಪಾರ್ವತಮ್ಮ ನಿಟ್ಟುಸಿರಿಟ್ಟು, “ಈ ಕಾಲದಲ್ಲಿ ಹಾಗೆ ಯಾರು ಸಿಗ್ತಾರೆ ಮಗುವೆ? ಆದರೂ ನೋಡೋಣ,” ಎಂದಳು.

ಕೆಲವು ತಿಂಗಳುಗಳ ನಂತರ ಪಾರ್ವತಮ್ಮ ಮತ್ತೆ ಫೋನ್ ಮಾಡಿದರು.

“ಶಾಂತ, ನೀನು ಕೆಲಸಕ್ಕೆ ಜನ ಹುಡುಕುತ್ತಿದ್ದೀಯಲ್ಲ… ಒಬ್ಬರು ಇದ್ದಾರೆ.”

“ಯಾರು ಅತ್ತೆ?”

“ನಮ್ಮ ನೆಂಟರೊಬ್ಬರು. ರಾಮಕ್ಕ ಅಂತ. ಮಗ-ಸೊಸೆ ವಿದೇಶಕ್ಕೆ ಹೋಗಿಬಿಟ್ಟಿದ್ದಾರೆ. ದೊಡ್ಡ ಮನೆಯಲ್ಲಿ ಒಬ್ಬರೇ ಇದ್ದಾರೆ. ಆರೋಗ್ಯವೂ ಸರಿಯಿಲ್ಲ. ‘ಯಾರಾದರೂ ನಮ್ಮವರು ಜೊತೆ ಇದ್ದರೆ ಸಾಕು’ ಅಂತ ಹೇಳಿದ್ದಾರೆ.”

ಮೊದಲು ಶಾಂತ ತಡಕಾಡಿದಳು. ಆದರೆ ಕೆಲವು ದಿನಗಳಲ್ಲಿ ಮಗ ಕೀರ್ತಿಗೆ ಜ್ವರ ಬಂದಾಗ ಕಂಗಾಲಾಗಿ ಅತ್ತೆಗೆ ಮತ್ತೆ ಫೋನ್ ಮಾಡಿದ್ದಳು. ಅದೇ ಸಂದರ್ಭದಲ್ಲೇ ರಾಮಕ್ಕ ಶಾಂತಳ ಮನೆಗೆ ಬಂದರು.

ಅಷ್ಟೇ… ವರ್ಷಗಳು ಹೇಗೆ ಕಳೆಯಿತು ಗೊತ್ತಾಗಲಿಲ್ಲ.

ರಾಮಕ್ಕ ನಿಧಾನವಾಗಿ ಮನೆಯವರಂತೆಯೇ ಆಗಿಬಿಟ್ಟರು. ಮಕ್ಕಳಿಗೆ ಕಥೆ ಹೇಳುವುದು, ಅವರ ಹಾಸಿಗೆ ಬಟ್ಟೆಗಳನ್ನು ಜೋಡಿಸುವುದು, ವಾರಕ್ಕೊಮ್ಮೆ ಎಣ್ಣೆ ಸ್ನಾನ ಮಾಡಿಸುವುದು—ಎಲ್ಲವೂ ಅವರ ಕೈಯಲ್ಲೇ ಇತ್ತು.

ಮಕ್ಕಳು ಆಟದಲ್ಲಿ ಗೆದ್ದರೆ ಮೊದಲು ರಾಮಕ್ಕನ ಅಪ್ಪುಗೆಯೇ ಸಿಗುತ್ತಿತ್ತು.

ಶಾಂತಗೆ ಹೊಟ್ಟೆನೋವು ಅಥವಾ ತಲೆನೋವು ಎಂದರೆ ತಕ್ಷಣ ಕಷಾಯ ಮಾಡಿಕೊಡುವವರು ಅವರು.

ಒಮ್ಮೆ ವೇಣು ಶಾಂತ ಮೇಲೆ ಕೋಪಗೊಂಡಾಗ ರಾಮಕ್ಕವೇ ಮಧ್ಯೆ ಮಾತನಾಡಿದ್ದರು.

“ಬೆಳಿಗ್ಗೆಯಿಂದ ಅವಳಿಗೆ ಹೊಟ್ಟೆನೋವು. ನೀನೇ ನೋಡಿಕೊಳ್ಳಬೇಕಲ್ಲ,” ಎಂದಾಗ ಶಾಂತ ಕಣ್ಣೀರಿಟ್ಟಿದ್ದಳು.

ಒಂದು ದಿನ ರಾಮಕ್ಕ ಶಾಂತಳಿಗೆ ಒಂದು ಸರ ಕೊಟ್ಟರು.

“ಇದನ್ನು ನಿನಗೆ ಕೊಡೋಣ ಅಂತ ಬಹಳ ದಿನದಿಂದ ಇಟ್ಟುಕೊಂಡಿದ್ದೆ. ನನ್ನ ಅಮ್ಮ ನನಗೆ ಕೊಡಬೇಕೆಂದು ಹೇಳಿದ್ದ ಸರ ಇದು,” ಎಂದಾಗ ಅವರ ಕಣ್ಣು ತುಂಬಿತ್ತು.

ಅಷ್ಟರಲ್ಲಿ ಮತ್ತೊಂದು ಸುದ್ದಿ ಬಂದಿತು. ಅಮೆರಿಕಾದಲ್ಲಿದ್ದ ರಾಮಕ್ಕನ ಮಗ-ಸೊಸೆ ಹಿಂದಿರುಗುತ್ತಿದ್ದಾರೆ.

“ನೀನು ಇನ್ನು ಇತರರ ಮನೆ ಕೆಲಸ ಮಾಡಬೇಡ. ನಮ್ಮ ಜೊತೆ ಊರಿಗೆ ಬಾ,” ಎಂದು ಮಗ ಹೇಳಿದ್ದ.

ಆ ರಾತ್ರಿ ವೇಣು ರಾಮಕ್ಕನ ಕೋಣೆಗೆ ಬಂದ.

“ರಾಮತ್ತೆ, ನೀವು ಊರಿಗೆ ಹೋಗ್ತೀರಂತೆ ಕೇಳಿ ತುಂಬಾ ಬೇಜಾರಾಯಿತು. ಶಾಂತ ನಿಮ್ಮನ್ನು ತನ್ನ ತಾಯಿಯಂತೆ ನೋಡುತ್ತಾಳೆ. ನಾವು ಯಾವತ್ತೂ ನಿಮ್ಮನ್ನು ಹೊರಗಿನವರು ಎಂದು ಭಾವಿಸಿಲ್ಲ. ಸಾಧ್ಯವಾದರೆ ನಮ್ಮ ಜೊತೆಯೇ ಇರಿ,” ಎಂದು ವಿನಂತಿಸಿದ.

ರಾತ್ರಿ ಹೊತ್ತು ರಾಮಕ್ಕ ಶಾಂತಳ ಕೋಣೆಗೆ ಹೋದರು.

ಶಾಂತ ಅವರು ಕೊಟ್ಟ ಸರವನ್ನು ಹಿಡಿದು ಯೋಚಿಸುತ್ತಿದ್ದಳು.

“ಯಾಕಮ್ಮ?” ಎಂದು ತಲೆ ಸವರಿದಷ್ಟೇ ಶಾಂತ ಒದ್ದೆಯಾದ ಧ್ವನಿಯಲ್ಲಿ ಹೇಳಿದಳು.

“ನನ್ನ ಮನಸ್ಸು, ಬುದ್ಧಿ, ಆತ್ಮ ಎಲ್ಲದರಲ್ಲೂ ನೀವು ತುಂಬಿಬಿಟ್ಟಿದ್ದೀರಿ. ಮತ್ತೊಮ್ಮೆ ತಾಯಿಯನ್ನು ಕಳೆದುಕೊಳ್ಳುವ ದುಃಖ ಕೊಡಬೇಡಿ…”

ಎಂದು ಅವಳು ರಾಮಕ್ಕನನ್ನು ತಬ್ಬಿಕೊಂಡು ಅತ್ತಳು.

ರಾಮಕ್ಕ ಮೃದುವಾಗಿ ನಕ್ಕರು.

“ನನಗೂ ಹೋಗಲು ಮನಸ್ಸಾಗುತ್ತಿಲ್ಲ ಶಾಂತಾ. ನೀನು, ಮಕ್ಕಳು ನನ್ನ ಮನಸ್ಸಿನಲ್ಲಿ ತುಂಬಿ ಹೋಗಿದ್ದೀರಿ. ಈಗಂತೂ ನಿಮ್ಮನ್ನು ಬಿಟ್ಟು ಹೋಗಲು ಧೈರ್ಯವಾಗುತ್ತಿಲ್ಲ.”

“ಅಂದರೆ ನೀವು ಹೋಗಲ್ಲವಾ?” ಎಂದು ಶಾಂತ ಕಣ್ಣೀರು ತುಂಬಿದ ಕಣ್ಣುಗಳಿಂದ ಕೇಳಿದಳು.

“ಹೋಗಲ್ಲ… ಹುಚ್ಚು ಹುಡುಗಿ,” ಎಂದು ರಾಮಕ್ಕ ನಕ್ಕರು.

ದೂರದಲ್ಲಿ ನಿಂತು ನೋಡುತ್ತಿದ್ದ ವೇಣುವಿನ ಕಣ್ಣುಗಳೂ ನೀರಿನಿಂದ ತುಂಬಿದವು.

Jyothi joise

-ಜ್ಯೋತಿ ಜೋಯಿಸ್ , ತೀರ್ಥಹಳ್ಳಿ 

Leave a Reply

Your email address will not be published. Required fields are marked *