sakhigeetha.com

Top 1 Women's Magazines & Publications

Latest:
ಸುದ್ದಿ ಜಗತ್ತುPolitics

Kengeri ARO Office Khata Scam; ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಖಾತಾ ಹಗರಣ ಬಯಲು: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ₹1.5 ಕೋಟಿಗೂ ಹೆಚ್ಚು ವಂಚನೆ! ARO ಸೇರಿ ಮೂವರ ವಿರುದ್ಧ ಲೋಕಾಯುಕ್ತಕ್ಕೆ ದೂರು.

ಬೆಂಗಳೂರು: Kengeri ARO Office Khata Scam; ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ನೆರವಿನೊಂದಿಗೆ ನಡೆದಿರುವ ಮತ್ತೊಂದು ಕೋಟ್ಯಾಂತರ ರೂಪಾಯಿಗಳ ನಕಲಿ ಖಾತಾ ಹಗರಣ ತಡರಾತ್ರಿ ದಾಖಲೆಗಳ ಸಹಿತ ಬಯಲಾಗಿದೆ. ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ (ARO) ಕಚೇರಿಯಲ್ಲಿ ಕಾನೂನಿನ ಯಾವುದೇ ಅಂಜಿಕೆಯಿಲ್ಲದೆ ರಾಜಾರೋಷವಾಗಿ ಅಕ್ರಮ ಎಸಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಅಂದಾಜು ಒಂದೂವರೆ ಕೋಟಿ ರೂಪಾಯಿಗಳಿಗೂ ಹೆಚ್ಚು ಆರ್ಥಿಕ ನಷ್ಟ ಉಂಟುಮಾಡಿರುವ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.

ಈ ಕುರಿತು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ಎನ್. ಆರ್. ರಮೇಶ್ ಅವರು ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಸಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ತಕ್ಷಣವೇ ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.

ಒಂದೂವರೆ ಕೋಟಿ ರೂಪಾಯಿ ಭ್ರಷ್ಟಾಚಾರದ ‘ಕಿಂಗ್‌ಪಿನ್’ಗಳು ಯಾರು?:

ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಎನ್. ಆರ್. ರಮೇಶ್ ಅವರು ಮೂವರು ಪ್ರಮುಖ ಭ್ರಷ್ಟ ಅಧಿಕಾರಿಗಳ ತಂಡವನ್ನು ಹೆಸರಿಸಿದ್ದಾರೆ:

  1. ರಂಗಸ್ವಾಮಿ – ಸಹಾಯಕ ಕಂದಾಯ ಅಧಿಕಾರಿ (ARO), ಕೆಂಗೇರಿ ಉಪ ವಿಭಾಗ.
  2. ತೇಜಸ್ – ಕಚೇರಿ ಗುಮಾಸ್ತ (Case Worker).
  3. ಲಕ್ಷ್ಮಿ – ಗುತ್ತಿಗೆ ಆಧಾರಿತ ದತ್ತಾಂಶ ನಮೂದು ಆಪರೇಟರ್ (Data Entry Operator).

ಈ ಮೂವರ ಮಹಾ ಭ್ರಷ್ಟರ ಕೂಟವು ಹತ್ತಾರು ಲಕ್ಷ ರೂಪಾಯಿಗಳ ಲಂಚದ ಆಮಿಷಕ್ಕೆ ಒಳಗಾಗಿ, ಯಾವುದೇ ಅಧಿಕೃತ ಕ್ರಯ ಪತ್ರಗಳಿಲ್ಲದ ರೆವೆನ್ಯೂ ಬಡಾವಣೆಯ 15 ಕ್ಕೂ ಹೆಚ್ಚು ಸ್ವತ್ತುಗಳಿಗೆ ನಿಯಮ ಬಾಹಿರವಾಗಿ ‘B’ ವಹಿಯಿಂದ ನೇರವಾಗಿ ‘A’ ಖಾತಾಗಳನ್ನು ಸೃಷ್ಟಿಸಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಹಗರಣದ ಕಂಪ್ಲೀಟ್ ಮೋಡಸ್ ಆಪರೇಂಡಿ (Modus Operandi) ಇಲ್ಲಿದೆ:

ದೂರಿನ ಪ್ರಕಾರ, ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಗ್ರಾಮದ 1ನೇ ಅಡ್ಡರಸ್ತೆಯ ನಂ. 67 ರಲ್ಲಿ ವಾಸಿಸುತ್ತಿರುವ ದಿವಂಗತ ದೊಡ್ಡ ನಾಗಹನುಮಯ್ಯ ನವರ ಮಗ ಚಿಕ್ಕ ಗಾಳಪ್ಪ ಎಂಬುವವರ ಹೆಸರಿಗೆ ತಲಾ 1,500 ರಿಂದ 1,600 ಚದರ ಅಡಿಯ ಒಟ್ಟು 16 ಸ್ವತ್ತುಗಳಿಗೆ ನಕಲಿ e-PID ಗಳನ್ನು ಸೃಷ್ಟಿಸಲಾಗಿದೆ.

  • ನಯಾಪೈಸೆ ತೆರಿಗೆ ಕಟ್ಟಿಲ್ಲ: ಈ ಸ್ವತ್ತುಗಳಿಗೆ 2007 ಕ್ಕೂ ಮೊದಲಿನ ಪಟ್ಟಣಗೆರೆ ಪುರಸಭೆಯ ಅವಧಿಯಿಂದ ಹಿಡಿದು ಇಂದಿನವರೆಗೂ ಒಂದೇ ಒಂದು ನಯಾಪೈಸೆ ಕಂದಾಯ ಅಥವಾ “ಉಂಡೆ ತೆರಿಗೆ”ಯನ್ನು ಪಾವತಿಸಿರುವುದಿಲ್ಲ.
  • ನಿಯಮಗಳ ಸಂಪೂರ್ಣ ಉಲ್ಲಂಘನೆ: ಜಿಲ್ಲಾಧಿಕಾರಿಗಳ ಕಚೇರಿಯಿಂದ ಭೂ ಪರಿವರ್ತನೆ (Land Conversion) ಆಗದ ಈ ಸ್ವತ್ತುಗಳಿಗೆ ಸೂಚ್ಯಾಂಕ ದರದ (Guidance Value) ಶೇ. 5% ರಷ್ಟು ಮೊತ್ತ ಮತ್ತು ಸುಧಾರಣಾ ಶುಲ್ಕಗಳನ್ನು ಪಡೆದು, ಹಿರಿಯ ಅಧಿಕಾರಿಗಳ ಅನುಮೋದನೆ ದೊರೆತ ನಂತರವಷ್ಟೇ ಖಾತಾ ಮಾಡಬೇಕಿತ್ತು. ಆದರೆ ಭ್ರಷ್ಟ ಅಧಿಕಾರಿಗಳು ಲಂಚ ಪಡೆದು ಕೇವಲ ವೈಯಕ್ತಿಕ ಲಾಗ್-ಇನ್ (Log-in) ಗಳ ಮೂಲಕವೇ ನೇರವಾಗಿ ‘A’ ಖಾತಾ ಮಂಜೂರು ಮಾಡಿದ್ದಾರೆ.

ವರ್ಗಾವಣೆಗೊಂಡ ಅಧಿಕಾರಿಗಳ ಲಾಗ್-ಇನ್ ದುರುಪಯೋಗ!:

ಕೆಂಗೇರಿ ಉಪ ವಿಭಾಗದ ಕಚೇರಿಯಲ್ಲಿ ಕೇವಲ ನಾಲ್ಕು ಮಂದಿ ಗುಮಾಸ್ತರಿದ್ದರೂ ಅಲ್ಲಿ ಸದ್ಯ 12 ರಿಂದ 15 ಆಕ್ಟಿವ್ ಲಾಗ್-ಇನ್ ಐಡಿಗಳು ಪತ್ತೆಯಾಗಿವೆ! ಹಲವಾರು ತಿಂಗಳುಗಳ ಹಿಂದೆಯೇ ವರ್ಗಾವಣೆಗೊಂಡಿರುವ ಅಧಿಕಾರಿಗಳಾದ ಲಕ್ಷ್ಮೀನಾರಾಯಣ್, ಯೋಗೇಶ್, ಆರ್‌ಐ ವೇಣುಗೋಪಾಲ್, ಆರ್‌ಐ ಗೀತಾ ಮತ್ತು ಉಪ ಆಯುಕ್ತ ಅಬ್ದುಲ್ ರಬ್ ಅವರ ಅಧಿಕೃತ ಲಾಗ್-ಇನ್ ಐಡಿ ಹಾಗೂ ಪಾಸ್‌ವರ್ಡ್‌ಗಳನ್ನು ತೇಜಸ್ ಮತ್ತು ಲಕ್ಷ್ಮಿ ಜೋಡಿಯು ಇಂದಿಗೂ ಕಾನೂನುಬಾಹಿರವಾಗಿ ಹಗರಣಗಳಿಗೆ ಬಳಸಿಕೊಳ್ಳುತ್ತಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಅಕ್ರಮಕ್ಕೆ ‘ಸೊನ್ನೇನಹಳ್ಳಿ ಕುಮಾರ’ ಮತ್ತು ‘ಮೈಲಸಂದ್ರ ಲೋಕೇಶ್’ ಎಂಬ ಮಧ್ಯವರ್ತಿಗಳು ಸಾಥ್ ನೀಡುತ್ತಿದ್ದಾರೆ ಎಂದು ರಮೇಶ್ ದೂರಿದ್ದಾರೆ.

ಕಠಿಣ ಕ್ರಮಕ್ಕೆ ಎನ್. ಆರ್. ರಮೇಶ್ ಆಗ್ರಹ:

“ಸಾರ್ವಜನಿಕರ ಹಣವನ್ನು ಲೂಟಿ ಹೊಡೆಯುತ್ತಿರುವ ARO ರಂಗಸ್ವಾಮಿ ಮತ್ತು ತೇಜಸ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಹಾಗೂ ಗುತ್ತಿಗೆ ನೌಕರಳಾದ ಲಕ್ಷ್ಮಿ ಅವರನ್ನು ಸೇವೆಯಿಂದ ವಜಾಗೊಳಿಸಿ ಕ್ರಿಮಿನಲ್ ಕೇಸ್ ದಾಖಲಿಸಬೇಕು. ನಿಯಮ ಬಾಹಿರವಾಗಿ ನೀಡಲಾಗಿರುವ ಎಲ್ಲಾ 16 ‘A’ ಖಾತಾಗಳನ್ನು ತಕ್ಷಣವೇ ರದ್ದುಪಡಿಸಬೇಕು” ಎಂದು ಜಿಬಿಎ (GBA) ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು (ಕಂದಾಯ) ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದು ಎನ್. ಆರ್. ರಮೇಶ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *