sakhigeetha.com

Top 1 Women's Magazines & Publications

Latest:
ಸುದ್ದಿ ಜಗತ್ತು

ನಕಲಿ ಪತ್ರಕರ್ತರ ಮೇಲೆ ಕ್ರಮ; ನಕಲಿ ಪತ್ರಕರ್ತರು ಹಾಗೂ ಆರ್‌ಟಿಐ ಬ್ಲಾಕ್‌ಮೇಲರ್‌ಗಳಿಗೆ ಕಡಿವಾಣ ಹಾಕಿ: ಡಿಜಿಪಿ ಡಾ. ಎಂ.ಎ. ಸಲೀಂ ಅವರಿಗೆ ಕೆಯುಡಬ್ಲೂಜೆ ನಿಯೋಗದ ಮಹತ್ವದ ಮನವಿ!

ಬೆಂಗಳೂರು: ನಕಲಿ ಪತ್ರಕರ್ತರ ಮೇಲೆ ಕ್ರಮ ; ಮಾಧ್ಯಮ ರಂಗದ ಹೆಸರಿಗೆ ಮಸಿ ಬಳಿಯುತ್ತಿರುವ ಹಾಗೂ ನೈಜ ಪತ್ರಕರ್ತರ ಮೇಲೆ ವಿನಾಕಾರಣ ತೇಜೋವಧೆ ಮಾಡುತ್ತಿರುವ ನಕಲಿ ಪತ್ರಕರ್ತರು ಮತ್ತು ಆರ್‌ಟಿಐ (RTI) ಬ್ಲಾಕ್‌ಮೇಲರ್‌ಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಪೊಲೀಸ್ ಇಲಾಖೆಯನ್ನು ಕಠಿಣವಾಗಿ ಒತ್ತಾಯಿಸಿದೆ.

​ಬೆಂಗಳೂರಿನಲ್ಲಿ ಪೊಲೀಸ್ ಮಹಾನಿರ್ದೇಶಕರಾದ (DGP) ಡಾ. ಎಂ.ಎ. ಸಲೀಂ ಅವರನ್ನು ಭೇಟಿ ಮಾಡಿದ ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ಪದಾಧಿಕಾರಿಗಳ ನಿಯೋಗವು ಈ ಕುರಿತು ವಿಸ್ತೃತವಾದ ಮನವಿ ಪತ್ರವನ್ನು ಸಲ್ಲಿಸಿತು.

​ವಿಸಿಟಿಂಗ್ ಕಾರ್ಡ್ ಪತ್ರಕರ್ತರ ವಸೂಲಿ ದಂಧೆಗೆ ಬ್ರೇಕ್ ಹಾಕಿ:

​ನಿಯೋಗವು ಡಿಜಿಪಿ ಅವರ ಗಮನ ಸೆಳೆಯುತ್ತಾ, “ಪತ್ರಿಕೆಗಳನ್ನೇ ತರದವರು, ಸುದ್ದಿಯನ್ನು ಬರೆಯಲು ಬಾರದವರು ಮತ್ತು ಸುದ್ದಿಮನೆಗೆ (Newsroom) ಯಾವುದೇ ರೀತಿಯ ಸಂಬಂಧವೂ ಇಲ್ಲದವರು ತಾವೇ ಪತ್ರಕರ್ತರು ಎಂದು ಬಿಂಬಿಸಿಕೊಳ್ಳುವ ವಿಸಿಟಿಂಗ್ ಕಾರ್ಡ್ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಇನ್ನು ಕೆಲವರು ನೆಪ ಮಾತ್ರಕ್ಕೆ ಸಂಘಟನೆಗಳನ್ನು ಮಾಡಿಕೊಂಡು, ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡುವ ಆರ್‌ಟಿಐ ಪತ್ರಕರ್ತರಾಗಿ ವಸೂಲಿ ದಂಧೆಗೆ ಇಳಿದಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಇಂತಹ ಬೆಳವಣಿಗೆಗೆ ಪೊಲೀಸ್ ಇಲಾಖೆ ತಕ್ಷಣ ಕಡಿವಾಣ ಹಾಕಬೇಕು” ಎಂದು ವಿನಂತಿಸಿದರು.

​ಠಾಣೆಗಳಲ್ಲಿ ಇಂತಹವರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಿ:

​ಪತ್ರಿಕಾ ಸಂಘಟನೆಯ ಹೆಸರು ಹೇಳಿಕೊಳ್ಳುವ ಕೆಲವು ನಕಲಿ ಪತ್ರಕರ್ತರು ಆಗಿಂದಾಗ್ಗೆ ಪೊಲೀಸ್ ಠಾಣೆಗಳಿಗೆ ಹೋಗಿ ಸುಳ್ಳು ದೂರು ಕೊಡುವುದು ಮತ್ತು ಅಧಿಕಾರಿಗಳನ್ನು ಹೆದರಿಸಲು ಆರ್‌ಟಿಐ (RTI) ಹಾಕುವುನ್ನೇ ತಮ್ಮ ಮುಖ್ಯ ಕಾಯಕವಾಗಿಸಿಕೊಂಡಿದ್ದಾರೆ. ಇಂತಹ ನಕಲಿ ವ್ಯಕ್ತಿಗಳನ್ನು ಪೊಲೀಸ್ ಠಾಣೆಗಳಲ್ಲೇ ಗುರುತಿಸಿ ‘ಬ್ಲಾಕ್‌ಲಿಸ್ಟ್’ (Blacklist) ಗೆ ಸೇರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ನಿಯೋಗವು ಮನದಟ್ಟು ಮಾಡಿಕೊಟ್ಟಿತು.

​ಕೆಯುಡಬ್ಲೂಜೆ ನಿಯೋಗದ ಈ ಮನವಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಡಿಜಿಪಿ ಡಾ. ಎಂ.ಎ. ಸಲೀಂ ಅವರು, ನಕಲಿ ಪತ್ರಕರ್ತರ ದಂಧೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿದ್ದ ಪ್ರಮುಖರು:

ಈ ಸಂದರ್ಭದಲ್ಲಿ ಕೆಯುಡಬ್ಲೂಜೆ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾರ್ಯದರ್ಶಿಗಳಾದ ಸೋಮಶೇಖರ ಕೆರಗೋಡು, ನಿಂಗಪ್ಪ ಚಾವಡಿ ಹಾಗೂ ಖಜಾಂಚಿ ವಾಸುದೇ ಹೊಳ್ಳ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *