sakhigeetha.com

Top 1 Women's Magazines & Publications

Latest:
ಸುದ್ದಿ ಜಗತ್ತು

ಮೈಸೂರು ದಸರಾ ಕಂಬಳ ವಿವಾದ; ಮೈಸೂರು ದಸರಾದಲ್ಲಿ ಕಂಬಳ ಬೇಡ್ವೇ ಬೇಡ: ರಾಜಮನೆತನ, ಪರಿಸರವಾದಿಗಳಿಂದ ತೀವ್ರ ವಿರೋಧ; ಕರಾವಳಿ ಕ್ರೀಡೆಗೆ ದಸರಾ ಕಮರ್ಷಿಯಲ್ ಬ್ರೇಕ್?

ಮೈಸೂರು: ಮೈಸೂರು ದಸರಾ ಕಂಬಳ ವಿವಾದ; ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕರಾವಳಿಯ ಜಾನಪದ ಕ್ರೀಡೆಯಾದ ‘ಕಂಬಳ’ವನ್ನು ಆಯೋಜಿಸಲು ಸರ್ಕಾರ ಮುಂದಾಗಿರುವುದು ಈಗ ಭಾರಿ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದೆ. ದಸರಾ ಹಬ್ಬದ ಸಾಂಸ್ಕೃತಿಕ ಚೌಕಟ್ಟಿಗೆ ಧಕ್ಕೆ ತರಬೇಡಿ, ದಸರಾದಲ್ಲಿ ಕಂಬಳ ಬೇಡ ಎಂಬ ತೀವ್ರ ಆಕ್ರೋಶ ಮೈಸೂರು ಭಾಗದ ಜನಪ್ರತಿನಿಧಿಗಳು, ರಾಜಮನೆತನ ಹಾಗೂ ಪರಿಸರ ಪ್ರೇಮಿಗಳಿಂದ ಕೇಳಿಬರುತ್ತಿದೆ.

ರಾಜಮನೆತನ ಮತ್ತು ಸಂಸದ ಯದುವೀರ್ ಒಡೆಯರ್ ತೀವ್ರ ವಿರೋಧ:

ದಸರಾ ಉನ್ನತ ಮಟ್ಟದ ಸಭೆಯಲ್ಲಿ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡಯರ್ ಅವರು ಈ ಪ್ರಸ್ತಾವನೆಗೆ ಕಟ್ಟುನಿಟ್ಟಿನ ವಿರೋಧ ವ್ಯಕ್ತಪಡಿಸಿದ್ದಾರೆ. “ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳದ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ ಮೈಸೂರು ದಸರಾ ಎಂಬುದು ತನ್ನದೇ ಆದ ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿದೆ. ದಸರಾವನ್ನು ವಾಣಿಜ್ಯೀಕರಣ (Commercial) ಮಾಡುವುದು ಬೇಡ ಮತ್ತು ಬೇರೆ ಭಾಗದ ಸಂಸ್ಕೃತಿಯನ್ನು ಇಲ್ಲಿ ಹೇರುವುದು ಬೇಡ. ಕಂಬಳವನ್ನು ಕರಾವಳಿಯಲ್ಲೇ ಆಯೋಜಿಸಲಿ” ಎಂದು ಯದುವೀರ್ ಖಡಕ್ ಆಗಿ ಹೇಳಿದ್ದಾರೆ. ಇದಕ್ಕೆ ಶಾಸಕ ಶ್ರೀವತ್ಸ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಕೂಡ ಧ್ವನಿಗೂಡಿಸಿದ್ದಾರೆ.

ಕೆರೆ ಮುಚ್ಚುವಿಕೆ, ಮರಗಳ ಮಾರಣಹೋಮಕ್ಕೆ ಪರಿಸರವಾದಿಗಳ ಆಕ್ರೋಶ:

ಕೇವಲ ಸಾಂಸ್ಕೃತಿಕ ವಿರೋಧ ಮಾತ್ರವಲ್ಲದೆ, ಕಂಬಳದ ಟ್ರ್ಯಾಕ್ (ಕರೆ) ನಿರ್ಮಾಣಕ್ಕಾಗಿ ಮೈಸೂರಿನಲ್ಲಿ ಬರೋಬ್ಬರಿ 150 ಕ್ಕೂ ಹೆಚ್ಚು ಜೀವಂತ ಮರಗಳನ್ನು ಕಡಿಯಲು ಮತ್ತು 6 ಎಕರೆ ವಿಸ್ತೀರ್ಣದ ಕೆರೆಯನ್ನು ಮಣ್ಣು ಹಾಕಿ ಮುಚ್ಚಲು ಸಿದ್ಧತೆ ನಡೆಸಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೇವಲ ಎರಡು ದಿನಗಳ ಕ್ರೀಡೆಗಾಗಿ ಪ್ರಕೃತಿಯನ್ನು ನಾಶ ಮಾಡುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ಈ ಹಠಮಾರಿ ಧೋರಣೆ ವಿರುದ್ಧ ಮೈಸೂರು ಜನತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅಭಿಯಾನ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *