ಸ್ವಪ್ನಸೃಷ್ಟಿ – ೨

ಮತ್ತೆ ಭೇಟಿಯಾಗುವ ವಚನದೊಂದಿಗೆ ಬೀಳ್ಕೊಂಡಿದ್ದ ಮನೋಜ. ಅವನ ತಂದೆಯದು ದೇಶದ ರಾಜಧಾನಿಯಲ್ಲಿ ದೊಡ್ಡ ಬಿಜಿನೆಸ್ ಇತ್ತು. ಪದವಿ ಮುಗಿದೊಡನೆ ತಂದೆಯ ವಾಣಿಜ್ಯಸಾಮ್ರಾಜ್ಯದ ಅಧಿಪತಿಯಾಗಲು ಹೊರಟಿದ್ದ ಮನೋಜ.

ಚಲನಚಿತ್ರದಂತೆ ಮನದ ಭಿತ್ತಿಯ ಮೇಲೆ ಅವನ ಬದುಕಿನ ಇಂದಿನವರೆಗಿನ ಚಿತ್ರಗಳನ್ನು ನೋಡುತ್ತಾ ತನ್ನ ಮುಂದೆ ಇದ್ದ ಮಹಾಭಾರತಕ್ಕೂ ಇಂದಿನ ರಾಜಕೀಯಕ್ಕೂ ಇರುವ ಸ್ವಾಮ್ಯದ ಬಗ್ಗೆ ಸ್ವಾಮಿ ಶ್ರೀರಂಗಪ್ರೇಮಿಯವರು ಬರೆದಿದ್ದ ಪುಸ್ತಕದ ಹಾಳೆಗಳನ್ನು ದೃಷ್ಟಿಸುತ್ತಿದ್ದನೇ ಹೊರತು ಓದುತ್ತಿರಲಿಲ್ಲ ವಿವಿಕ್ತ.

“ಪುಸ್ತಕ ನೀವು ಓದದಿದ್ದರೆ ನಾನು ಓದಬಹುದೇ?” ಎನ್ನುವ ಪ್ರಶ್ನೆಯೂ, ಅವನ ಹೆಗಲ ಮೇಲೆ ಒಂದು ಸ್ಪರ್ಶವೂ ಒಟ್ಟಿಗೇ ಆದಾಗ ಪ್ರಸ್ತುತಕ್ಕೆ ಹಿಂದಿರುಗಿದ್ದ ವಿವಿಕ್ತ.

ಪಕ್ಕಕ್ಕೆ ತಿರುಗಿ ನೋಡಿದಾಗ ಬಹಳವೇ ಎತ್ತರವಾಗಿದ್ದ ಯುವಕನೊಬ್ಬ ನಿಂತಿದ್ದ. ಅವನು ನಿಂತಿದ್ದರಿಂದಲೂ, ತಾನು ಕುಳಿತಿದ್ದರಿಂದಲೂ ಅವನು ಬಹಳ ಎತ್ತರವಾಗಿ ಕಾಣಿಸುತ್ತಿದ್ದಾನೆ, ಇಲ್ಲದಿದ್ದರೆ ತಾನು ಕೂಡಾ ಇವನಷ್ಟೇ ಎತ್ತರವಿರುವೆ ಎಂದು ವಿವಿಕ್ತನ ಒಳಮನಸ್ಸು ಹೇಳುತ್ತಿದ್ದಂತೆ, “ಸಾರಿ, ನಾನು ಓದಬೇಕು. ಆದರೂ ಈಗ ನೀವು ತೆಗೆದುಕೊಳ್ಳಿ” ಎಂದ ವಿವಿಕ್ತ.

“ಪರವಾಗಿಲ್ಲ. ಈ ಪುಸ್ತಕ ಓದೋಂಥ ಜನ ಈ ಕಾಲದಲ್ಲೂ ಇದ್ದಾರೇಂತ ನನಗೆ ಆಶ್ಚರ್ಯ ಆಯಿತು ಅಷ್ಟೇ” ಎಂದ ಆ ಯುವಕ ತನ್ನ ಕೈ ಮುಂದೆ ಚಾಚಿ, “ನಾನು ಸೀನ” ಎಂದ.

ವಿವಿಕ್ತ ಎದ್ದು ನಿಂತು “ವಿವಿಕ್ತ” ಎಂದು ಅವನ ಹಸ್ತದೊಂದಿಗೆ ತನ್ನ ಹಸ್ತವನ್ನು ಸೇರಿಸಿ ಬಲವಾಗಿ ಅದುಮಿದ. ಇಬ್ಬರೂ ತಂತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು!

“ಸೀನ ಎಂದರೆ ಅಡ್ಡಹೆಸರು?” ಎಂದು ವಿವಿಕ್ತ ಕೇಳುವುದಕ್ಕೆ ಸರಿಯಾಗಿ “ವಿವಿಕ್ತ ಅಪರೂಪದ ಹೆಸರು!” ಎಂದು ಸೀನ ಉದ್ಗರಿಸಿದ್ದ.

ಇಬ್ಬರೂ ಒಬ್ಬರನ್ನೊಬ್ಬರು ಅಳೆದಿದ್ದರು. ಸೀನ ಆರಡಿ ಇದ್ದಿದ್ದಷ್ಟೇ ಅಲ್ಲ, ಕಸರತ್ತು ಮಾಡಿದ ಮೈ ಎಂದು ತಿಳಿಯುತ್ತಿತ್ತು. ನೋಡಲು ಸುಂದರ ಎನ್ನಿಸದಿದ್ದರೂ ಅವನ ಕಣ್ಣುಗಳಲ್ಲಿ ಏನೋ ಒಂದು ರೀತಿಯ ಆಕರ್ಷಣೆ ಕಾಣಿಸುತ್ತಿತ್ತು. ಒಂದು ರೀತಿಯ ಅಯಸ್ಕಾಂತ ಸೆಳೆತವಿತ್ತು.

ವಿವಿಕ್ತ ಸುಂದರನೆಂದೂ, ನೋಡಲು ತೆಳುವಾಗಿದ್ದರೂ ಒಳ್ಳೆಯ ಸುದೃಢ ಮೈಕಟ್ಟು ಹೊಂದಿರುವನೆಂದೂ ಸೀನ ಅರಿತ.

ಇಬ್ಬರೂ ಎದುರುಬದುರಿಗೆ ಕುಳಿತರು. ಮಾತಾಡಲು ಬಾಯ್ತೆರೆದವರು ಅಲ್ಲಿದ್ದ ಫಲಕವನ್ನು ಥಟ್ಟನೆ ಒಂದೇ ಕ್ಷಣದಲ್ಲಿ ನಿರುಕಿಸಿ ನೋಡಿದರು. ಮರ್ಫಿ ರೇಡಿಯೋದ ಜಾಹೀರಾತಿನ ಮಗುವು ತುಟಿಗಳ ಮೇಲೆ ಬೆರಳಿಟ್ಟುಕೊಂಡಿದ್ದ ಚಿತ್ರವದು. ಸೈಲೆನ್ಸ್ ಪ್ಲೀಸ್! ಎಂದು ಬರೆದಿತ್ತು ಆ ಮಗುವಿನ ತಲೆಯ ಮೇಲೆ.

ಇಬ್ಬರೂ ನಸುನಗುತ್ತಾ ಹೊರಗೆ ಬಂದು ಅಲ್ಲಿದ್ದ ಹುಲ್ಲುಹಾಸಿನ ಮೇಲೆ ನೆಡಲ್ಪಟ್ಟಿದ್ದ ಬೆಂಚಿನ ಮೇಲೆ ಕುಳಿತರು. ಗಜಗಂಭೀರ ನಡೆಯ ಸೀನನನ್ನು ಕಂಡು ವಿವಿಕ್ತ ಮೆಚ್ಚಿಕೊಳ್ಳದಿರದಾದ. ತನಗಿಂತಲೂ ನಾಲ್ಕೈದು ವರ್ಷ ಹಿರಿಯನಿರಬಹುದು. ಆದರೆ ಮುಖದಲ್ಲಿ ವಯಸ್ಸು ತಿಳಿಯುತ್ತಿರಲಿಲ್ಲ.

ವಿವಿಕ್ತನನ್ನು ಬಹಳ ಚುರುಕುವ್ಯಕ್ತಿಯೆಂದು ಸೀನ ಗುರುತಿಸುವುದಿರಲಿ, ಮೊದಲೇ ಅರಿತಿದ್ದ. ಅವನ ಅನೇಕ ಸಂಗತಿಗಳು ಸೀನನಿಗೆ ತಿಳಿದಿದೆಯೆಂದು ವಿವಿಕ್ತನಿಗೆ ತಿಳಿದಿರಲಿಲ್ಲ.

“ಶ್ರೀರಂಗಪ್ರೇಮಿ ಸ್ವಾಮಿಯವರ ಪುಸ್ತಕ ನಿಮಗೆ ಹೇಗೆ ಇಷ್ಟವಾಯಿತು?” ಎಂದು ಸೀನ ಕೇಳಿದ ವಿವಿಕ್ತನನ್ನೇ ದಿಟ್ಟಿಸುತ್ತಾ. ಒಬ್ಬರ ಮುಖವನ್ನು ನೋಡುತ್ತಾ, ಅವರ ಕಣ್ಗಳ ದೃಷ್ಟಿಗೆ ತಮ್ಮ ದೃಷ್ಟಿ ಬೆರೆಸಿ ನೋಡುವುದು ಒಳ್ಳೆಯದೆಂಬ ಪಾಠ ಸೀನನಿಗೆ ಆಗಿತ್ತು.

“ನಾನು ಅವರಿವರದು ಎಂದಲ್ಲ. ಎಲ್ಲರದ್ದೂ ಓದಿದ್ದೇನೆ. ಓದುತ್ತಿದ್ದೇನೆ. ಶ್ರೀರಂಗಪ್ರೇಮಿ ಸ್ವಾಮಿಗಳ ಅನೇಕ ಪುಸ್ತಕಗಳನ್ನು ಓದಿದ್ದೇನೆ. ಅವರ ಭಗವದ್ಗೀತೆಯ ವ್ಯಾಖ್ಯಾನ, ಉಪನಿಷತ್ತುಗಳ ಬಗ್ಗೆಗಿನ ಭಾಷ್ಯ ಬಹಳವೇ ಆಲೋಚಿಸುವಂತೆ ಮಾಡುತ್ತವೆ. ವಿಶೇಷವಾಗಿ ಇಂದಿನ ರಾಜಕೀಯಕ್ಕೂ, ಮಹಾಭಾರತದ ರಾಜಕೀಯಕ್ಕೂ ಅವರು ತಂದಿರುವ ಸ್ವಾಮ್ಯ ಬಹಳ ಚೆನ್ನಾಗಿದೆ!” ಎಂದ.

“ರಾಮಾಯಣ ಓದಿದ್ದೀರಲ್ಲಾ?” ಕೇಳಿದ ಸೀನ.

“ಹೂಂ…” ಎಂದ ವಿವಿಕ್ತ ಸೀನ ಏನು ಹೇಳಲಿರುವನೋ ಎಂದು ಅವನ ಮುಖ ನೋಡಿದ.

“ಅಯೋಧ್ಯಾಕಾಂಡದಲ್ಲಿ ಶ್ರೀರಾಮ ಕಾಡಿಗೆ ಹೋದ ಮೇಲೆ ಅವನನ್ನು ಮರಳಿ ಕರೆದೊಯ್ಯಲು ಭರತ ಕಾಡಿಗೆ ಬರುತ್ತಾನೆ. ರಾಮನಿಗೆ ಭರತ ರಾಜ್ಯವನ್ನು ಒಪ್ಪಿಕೊಂಡಿರುವುದಿಲ್ಲ ಎಂದು ತಿಳಿದಿರುವುದಿಲ್ಲ. ಭರತನಿಗೆ ಅಯೋಧ್ಯೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಹಾಕುತ್ತಾನೆ. ಅವುಗಳಲ್ಲಿ ಒಂದು ರಾಜ್ಯವು ಹೇಗಿರಬೇಕು, ಜನರನ್ನು ಹೇಗೆ ನೋಡಿಕೊಳ್ಳಬೇಕು ಇತ್ಯಾದಿಗಳು ನಮಗೆ ರಾಮರಾಜ್ಯದ ಕಲ್ಪನೆ ನೀಡುತ್ತದೆ” ಎಂದ ಸೀನ.

ವಿವಿಕ್ತ ಅವನ ಮುಖವನ್ನೇ ದಿಟ್ಟಿಸಿದ.

“ರಾಮಾಯಣ ಎಂದರೆ ನೀತಿಪಾಠದ ಆಗರ ಎನ್ನುವ ಮಾತು ನಿಜ. ಆದರೆ ವಾಲ್ಮೀಕಿ ಮಹರ್ಷಿ ರಾಜಕೀಯವನ್ನೂ ಇಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ” ಎಂದ ಸೀನ.

ಆ ನಿಟ್ಟಿನಲ್ಲಿ ನಾನು ರಾಮಾಯಣವನ್ನು ಮತ್ತೊಮ್ಮೆ ಅಭ್ಯಾಸ ಮಾಡಬೇಕು ಎಂದು ವಿವಿಕ್ತ ಮನಸ್ಸಿನಲ್ಲಿಯೇ ನಿರ್ಧರಿಸಿಕೊಂಡ.

“ಇದು ನನಗೆ ತಿಳಿದಿರಲಿಲ್ಲ. ಧನ್ಯವಾದ” ಎಂದ ಮನಸಾರೆ.

ಇವನಿಗೆ ತನಗೆ ತಿಳಿಯದ್ದನ್ನು ತಿಳಿಯದು ಎಂದು ಹೇಳುವಷ್ಟು ಧಾರಾಳತನ, ದೊಡ್ಡಬುದ್ಧಿಗಳಿವೆ ಎಂದುಕೊಂಡ ಸೀನ. ವಿವಿಕ್ತ ತನಗೇ ತಿಳಿಯದೇ ಎದುರಿಸುತ್ತಿದ್ದ ಪರೀಕ್ಷೆಯಲ್ಲಿ ಮತ್ತೊಂದು ಅಂಕವನ್ನು ಗಳಿಸಿದ್ದ!

ಒಂದು ರೀತಿಯ ಆತ್ಮೀಯತೆ ಬೆಳೆದಿತ್ತು ಇಬ್ಬರ ನಡುವೆ. ವಿವಿಕ್ತ ಲೈಬ್ರರಿಯ ಮೇಲಿದ್ದ ಗಡಿಯಾರ ನೋಡಿದ. ಎದ್ದುನಿಂತ.

ಅವನು ನಿಂತಿದ್ದನ್ನು ಕಂಡು ಸೀನ ಶೀಘ್ರಗತಿಯಲ್ಲಿ ಆಲೋಚಿಸಿದ. ಇವನೊಂದಿಗೆ ತಾನು ಇನ್ನೂ ಸ್ವಲ್ಪ ಸಮಯ ಕಳೆಯಲೇಬೇಕು. ತಾನೂ ಎದ್ದುನಿಂತ.

ಹೇಗೆ ಇವನಿಗೆ ತಾನೂ ನಿನ್ನೊಂದಿಗೆ ಬರುತ್ತೇನೆಂದು ಹೇಳಬೇಕಂದುಕೊಳ್ಳುವಷ್ಟರಲ್ಲಿ, “ನನ್ನ ಕೆಲವು ದೈನಂದಿನ ಕಾರ್ಯಕ್ರಮಗಳಿವೆ. ನಿಮಗೆ ಯಾವುದೇ ತುರ್ತಿನ ಕೆಲಸವಿಲ್ಲದಿದ್ದರೆ ನನ್ನೊಂದಿಗೆ ಕಳೆಯಲು ಸಾಧ್ಯವೇ?” ಎಂದು ವಿವಿಕ್ತ ಕೇಳಿದ್ದ.

ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತೆಂಬಂತೆ ಒಂದರೆ ಘಳಿಗೆ ಬೇಗನೆ ತಲೆದೂಗಿದ ಸೀನ. ಇದು ವಿವಿಕ್ತನಲ್ಲಿ ಸಣ್ಣ ಅನುಮಾನವೊಂದನ್ನು ಹುಟ್ಟಿಸಿದ್ದು ಸೀನನಿಗೆ ತಿಳಿಯಲಿಲ್ಲ. ಏಕೆಂದರೆ ವಿವಿಕ್ತ ಒಳ್ಳೆಯ ನಟ. ಮುಖದ ಮೇಲೆ ಯಾವುದೇ ಭಾವನೆಯನ್ನೂ ಸುಲಭವಾಗಿ ತೋರಗೊಡುತ್ತಿರಲಿಲ್ಲ.

ಇಬ್ಬರೂ ಅಲ್ಲಿಂದ ಹೊರಬಂದು ಸೀನನ ಬೈಕ್ ಹತ್ತಿದರು. ಮಧ್ಯಾಹ್ನ ಒಂದೂವರೆ. ಹತ್ತಿರದ ಚಿಕ್ಕ ಹೊಟೇಲ್‍ಗೆ ಹೋದರು ಇಬ್ಬರೂ. ಅಲ್ಲಿ ಮಿತವಾದ ಆಹಾರ ತಿಂದ ವಿವಿಕ್ತ. ನಂತರ ಅಲ್ಲಿದ್ದ ಕೆಲವು ಜನರನ್ನು ಹೊರಗೆ ಒಯ್ದು ಅಲ್ಲಿದ್ದ ಮರದ ಕೆಳಗೆ ಕುಳಿತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೇಳಿದ. ಸೀನ ಕುತೂಹಲದಿಂದ ಅವನ ಕೆಲಸವನ್ನೇ ಗಮನಿಸುತ್ತಿದ್ದ. ಅವರೆಲ್ಲಾ ಆರ್ಥಿಕವಾಗಿ ಹೆಚ್ಚು ಸಂಪಾದಿಸದವರು. ಅವರುಗಳು ದಿನಗೂಲಿ ಮಾಡುತ್ತಿರುವವರೆಂದು ಅರಿವಾಗಿತ್ತು ಸೀನನಿಗೆ. ಅವರುಗಳ ಮೊಗದ ಮೇಲಿನ ಹರ್ಷವನ್ನು ಸೀನ ಗುರುತಿಸಿದ. ಇವರು ವಿವಿಕ್ತನನ್ನು ಮನಸಾರೆ ಮೆಚ್ಚಿಕೊಳ್ಳುತ್ತಾರೆ ಎಂದೆನಿಸಿತು. ಅವರ ಪ್ರಶ್ನೆಗಳಿಗೆ ಉತ್ತರಿಸಿ ಅವರಿಂದ ಬೀಳ್ಕೊಂಡು ವಿವಿಕ್ತ ಸೀನನನ್ನು ತನ್ನ ಮನೆಗೆ ಕರೆತಂದ.

ಮನೆ ಎಂದರೆ ದೊಡ್ಡ ಮನೆಯೊಂದರ ಔಟ್‍ಹೌಸ್. ಒಂದು ಹಾಲ್, ಒಂದು ಅಡುಗೆಕೋಣೆ ಮತ್ತು ಒಂದು ಬಚ್ಚಲುಕೋಣೆ ಇತ್ತು. ಹೊರಗಡೆ ಶೌಚಗೃಹ ಇತ್ತು.

“ನಿಮ್ಮ ವಿಷಯ ತಿಳಿಯಲಿಲ್ಲ… ಯಾವ ಊರು?” ಎಂದು ವಿವಿಕ್ತ ಕೇಳಿದ.

(ಸಶೇಷ)

-ಯತಿರಾಜ್ ವೀರಾಂಬುಧಿ

Leave a Comment

Your email address will not be published. Required fields are marked *

Scroll to Top