ಸ್ವಪ್ನಸೃಷ್ಟಿ – ೧

ವಿವಿಕ್ತನಿಗೆ ಇದು ಹೊಸದೇನಲ್ಲ. ಎಲ್ಲಿ ಅನ್ಯಾಯ ಕಂಡರೂ ಅವನು ಪ್ರತಿಭಟಿಸುತ್ತಲೇ ಇದ್ದ. ಆದರೆ ಇಂದು ಆದ ಅನ್ಯಾಯ ಅವನ ರಕ್ತವನ್ನು ಕುದಿಯುವಂತೆ ಮಾಡಿತ್ತು. ಬೈಕ್ ಓಡಿಸುತ್ತಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆ ತಪ್ಪು ಪಕ್ಕದಿಂದ ಬಂದು ಸರಿರಸ್ತೆಯಲ್ಲಿ ನಿಧಾನವಾಗಿ ಹೋಗುತ್ತಿದ್ದ ಫಿಯೆಟ್ ಕಾರಿಗೆ ಢಿಕ್ಕಿ ಹೊಡೆದು ಬಿದ್ದ. ಅವನು ಅದೆಷ್ಟು ವೇಗವಾಗಿ ಬಂದಿದ್ದನೆಂದರೆ ಆ ವಿಪರೀತ ಗತಿಯಿಂದಾಗಿ ಅವನ ಬೈಕ್, ಫಿಯೆಟ್ ಕಾರಿನ ಒಂದು ಪಕ್ಕಕ್ಕೆ ಢಮ್ಮನೆ ಗುದ್ದಿತ್ತು. ಪಾಪ! ಆ ಫಿಯೆಟ್ ಕಾರಿನಲ್ಲಿದ್ದ ಮುದುಕ ಚಾಲಕ ಗದಗದನೆ ನಡುಗಿಹೋದ. ಸುತ್ತಲೂ ಜನ ಸೇರಿದರು. ಬೈಕ್ ಸವಾರ ಸಾಕಷ್ಟು ಏಟು ತಿಂದಿದ್ದ. ಹೆಲ್ಮೆಟ್ ಇದ್ದಿದ್ದರಿಂದ ತಲೆ ಉಳಿದುಕೊಂಡಿತ್ತು. ಅದರಿಂದ ಪ್ರಾಣ ಕೂಡಾ..

ಜನರು ಮುದುಕನನ್ನು ಬೈಯಲ್ಲಿ ಶುರುಮಾಡಿದರು. “ಏಯ್ ಮುದುಕಾ, ಈ ವಯಸ್ಸಿನಲ್ಲಿ ಈ ಕಾರು ಓಡಿಸೋ ಚಟ ಯಾಕೆ? ಹಾಯಾಗಿ ಬಸ್ಸಲ್ಲೋ, ಆಟೋದಲ್ಲೋ ಓಡಾಡಬೇಕು” “ಹೊರಗೆ ಬರದೇ ಮನೆಯಲ್ಲಿ ಕುಳಿತಿರಬೇಕು” ಇತ್ಯಾದಿ ವಾಗ್ಬಾಣಗಳು ಬೀಳತೊಡಗಿದವು.

“ಸ್ವಲ್ಪ ನಿಲ್ಲಿಸ್ತೀರಾ?” ಎಂದು ಹೆಚ್ಚುಕಡಿಮೆ ಕಿರುಚಿದ್ದ ವಿವಿಕ್ತ. ಎಲ್ಲರೂ ಬೆಪ್ಪಾಗಿ ಅವನತ್ತ ನೋಡಿದರು. “ಯಾವಾಗಲೂ ದೊಡ್ಡ ಗಾಡಿಯವನದೇ ತಪ್ಪಿರುವುದಿಲ್ಲ. ಈ ಬೈಕ್ ಸವಾರ ರಾಂಗ್‍ಸೈಡ್‍ನಿಂದ ಬಂದು ಗುದ್ದಿದ್ದಾನೆ. ಪಾಪ! ನೋಡಿ ಆ ವಯಸ್ಸಾದವರು ಹೇಗೆ ನಡುಗುತ್ತಿದ್ದಾರೆ!” ಎಂದು ಗಟ್ಟಿಯಾಗಿ ಹೇಳಿದ. ಎಲ್ಲರೂ ಸುಮ್ಮನೆ ಅವರವರ ದಾರಿ ಹಿಡಿದು ಹೊರಟುಹೋದರು. ಬೈಕ್ ಸವಾರನನ್ನು ಅಲ್ಲಿಗೆ ಬಂದಿದ್ದ ಆಟೋ ಒಂದರಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದ ವಿವಿಕ್ತ. ಆ ಮುದುಕ ಇವನತ್ತ ಒಂದು ಕೃತಜ್ಞತಾ ನೋಟ ಬೀರಿ ಕಾರು ಹತ್ತಿ ಹೊರಟುಹೋಗಿದ್ದ. ಪೊಲೀಸ್ ಬರುವ ಹೊತ್ತಿಗೆ ಅಲ್ಲಿ ಅಪಘಾತವಾದ ಯಾವ ಕುರುಹೂ ಇರಲಿಲ್ಲ.

ಬೈಕ್ ಸವಾರ ಪ್ರಥಮ ಚಿಕಿತ್ಸೆಯ ನಂತರ ಚೇತರಿಸಿಕೊಂಡ. “ಥ್ಯಾಂಕ್ಸ್ ಬಾಸ್! ನೀವು ಬೈದಿದ್ದು ನೋಡಿ ಗಲಾಟೆ ಆಗುತ್ತೆ ಅಂದುಕೊಂಡೆ. ನೀವೇ ಕರಕೊಂಡು ಬಂದು ನನಗೆ ಫಸ್ಟ್ ಎಯ್ಡ್ ಕೊಡಿಸಿದಿರಿ” ಎಂದು ಅವನ ಕೈ ಕುಲುಕಿದ.

ವಿವಿಕ್ತ ಮುಗುಳ್ನಗೆಯೊಂದನ್ನು ಅವನತ್ತ ಎಸೆದು ಅಲ್ಲಿಂದ ಹೊರಟುಬಿಟ್ಟ.

ಇಂದು ಈ ಅಪಘಾತದಿಂದಾಗಿ ಅವನ ದೈನಂದಿನ ಚಟುವಟಿಕೆಯೊಂದು ಏಟು ತಿಂದಿತ್ತು. ಪ್ರತಿದಿನ ಬೆಳಿಗ್ಗೆ ಅವನು ‘ಮಮತೆ’ ಅನಾಥಾಶ್ರಮದಲ್ಲಿ ಮಕ್ಕಳಿಗೆ ಶ್ಲೋಕಗಳನ್ನು ಒಂದು ಗಂಟೆಯ ಕಾಲ ಹೇಳಿಕೊಡುತ್ತಿದ್ದ. ಬರೀ ಶ್ಲೋಕ ಕಲಿಸುವುದು ಮಾತ್ರವಲ್ಲ, ಅದರ ಅರ್ಥ ವಿವರಿಸಿ, ಮಕ್ಕಳಿಗೆ ಇನ್ನಷ್ಟು ವಿಶದವಾಗುವಂತೆ ಅದಕ್ಕೆ ಸಂಬಂಧಿಸಿದಂತೆ ಒಂದು ಕಥೆ ಹೇಳುತ್ತಿದ್ದ. ಇಂದು ಆಸ್ಪತ್ರೆಗೆ ಹೋದೊಡನೆ ‘ಮಮತೆ’ಯ ವಾರ್ಡನ್‍ಗೆ ಫೋನ್ ಮಾಡಿ ಬರಲಾಗದಿರುವಕ್ಕೆ ವಿಷಾದ ವ್ಯಕ್ತಪಡಿಸಿದ್ದ.

ಎರಡನೆಯ ರೊಟೀನ್ ಹತ್ತಿರದ ಗ್ರಂಥಾಲಯದಲ್ಲಿ ಕುಳಿತು ಪುಸ್ತಕಗಳನ್ನು ಓದುವುದು. ಉಪನಿಷತ್ತುಗಳು, ವೇದಗಳು, ಗೀತೆ, ಪತ್ತೇದಾರಿ ಕಾದಂಬರಿಗಳು, ಸಾಮಾಜಿಕ ಕಥೆಗಳು ಎಲ್ಲವೂ ಅವನಿಗೆ ಇಷ್ಟ. ಅವನು ಇಲ್ಲಿಗೆ ಕೆಲಸ ಹುಡುಕಿಕೊಂಡು ದೂರದ ಪುಟ್ಟ ಊರಿನಿಂದ ಬಂದಿದ್ದ.

ಅವನ ತಂದೆ ಆ ಪುಟ್ಟ ಊರಿನ ನಾರಾಯಣ ದೇವಾಲಯದ ಪೂಜಾರಿ. ದಿನವೂ ಶ್ರೀವಿಷ್ಣುಸಹಸ್ರನಾಮ ಪಠಿಸುತ್ತಾ ಪೂಜೆ ಮಾಡುತ್ತಿದ್ದ ಅವನ ತಂದೆ ಅವನಿಗೆ ವಿವಿಕ್ತ ಎನ್ನುವ ವಿಶಿಷ್ಟ ಹೆಸರನ್ನಿತ್ತಿದ್ದರು. “ವಿವಿಕ್ತ ಅಂದರೆ?” ಎಂದು ತಂದೆಯನ್ನು ಕೇಳಿದ್ದ ಬುದ್ಧಿ ತಿಳಿದು ತನ್ನ ಹೆಸರು ಸ್ವಲ್ಪ ವಿಶೇಷವಾಗಿದೆ ಎನ್ನಿಸಿದಾಗ.

“ಮಗೂ, ಈ ಹೆಸರನ್ನು ಹೇಳುವ ಮೊದಲು ನಾನು ದಿನವೂ ಪಠಿಸುವ ಸ್ತೋತ್ರ ಯಾವುದೆಂದು ಗೊತ್ತಿದೆಯಾ?” ಎಂದು ಕೇಳಿದರು ಹರಿನಾರಾಯಣಾಚಾರ್ಯರು.

ತಂದೆಯ ಮಾತಿಗೆ ವಿವಿಕ್ತ ತಕ್ಷಣವೇ “ನನಗೆ ಗೊತ್ತಪ್ಪಾ. ಓಂ ವಿಶ್ವಂ ವಿಷ್ಣುರ್ವಷಟ್ಕಾರೋ….” ಎಂದ.

“ಅದು ಶ್ರೀಮನ್ನಾರಾಯಣನ ಸಹಸ್ರನಾಮಗಳು. ಅಂದರೆ ಭಗವಂತನ ಒಂದು ಸಾವಿರ ಗುಣಗಳು. ಅದರಲ್ಲಿ ನಿನ್ನ ಹೆಸರೂ ಬರುತ್ತದೆಂದು ನಿನಗೆ ತಿಳಿದಿದೆಯೇ?” ಎಂದರು ಮುಗುಳ್ನಗುತ್ತಾ.

“ಓ ಗೊತ್ತು… ವರ್ಧನೋ ವರ್ಧಮಾನಶ್ಚ ವಿವಿಕ್ತ ಶ್ರುತಿಸಾಗರಃ” ಎಂದ ಎಂ ಎಸ್ ಸುಬ್ಬುಲಕ್ಷ್ಮಿಯವರು ಉಚ್ಚರಿಸಿರುವ ವೈಖರಿಯಲ್ಲಿ.

“ಸರಿಯಾಗಿ ಹೇಳಿದೆ. ನಿನ್ನ ನೆನಪಿನ ಶಕ್ತಿ ಅಗಾಧವಾದದ್ದು. ಸಾಧಾರಣ ಮನುಷ್ಯರಿಗಿಂತ ಹೆಚ್ಚಿನ ಶಕ್ತಿ ನಿನಗಿದೆ. ಅದು ಆ ನಾರಾಯಣನ ವರಪ್ರಸಾದ ನಿನಗೆ” ಎಂದರು ಮಗನ ಬಗ್ಗೆ ಹೆಮ್ಮೆ ಪಡುತ್ತಾ, ಆ ಜಗನ್ನಿಯಾಮಕನ ಕೃಪೆ ತನ್ನ ಮಗನ ಮೇಲಿರುವುದಕ್ಕೆ ಭಕ್ತಿಯಿಂದ.

“ವಿವಿಕ್ತ ಅಂದರೆ?” ಮತ್ತೆ ವಿಷಯಕ್ಕೆ ತಂದೆಯನ್ನೆಳೆದ ವಿವಿಕ್ತ.

“ವಿವಿಕ್ತ ಅಂದರೆ ಅತ್ಯಂತ ಪವಿತ್ರವಾದ ಮತ್ತು ವಿಲಕ್ಷಣವಾದ ಎಂದು ಅರ್ಥ. ಭಗವಂತನ ವ್ಯಕ್ತಿತ್ವ ತೀರಾ ಭಿನ್ನ. ಜಗತ್ ಸೃಷ್ಟಿ ಮಾಡುವ ಭಗವಂತ ಯಾವುದೇ ಲೇಪವಿಲ್ಲದೇ ನಿರ್ವಿಕಾರವಾಗಿ ಸಂಹಾರವನ್ನೂ ಮಾಡುತ್ತಾನೆ. ಹೀಗೆ ಪವಿತ್ರನೂ, ವಿಲಕ್ಷಣನೂ ಆಗಿರುವ ವಿಶಿಷ್ಟ ವ್ಯಕ್ತಿತ್ವವುಳ್ಳ ದೇವದೇವನ ಒಂದು ನಾಮ ವಿವಿಕ್ತ” ಎಂದರು. ಅವರು ಯಾವುದೋ ಪ್ರವಚನ ಮಾಡುವಂತೆ ತೋರಿತ್ತು ವಿವಿಕ್ತನಿಗೆ.

ಹೌದು, ಅವರು ದೇವಸ್ಥಾನದ ಮುಂದಿದ್ದ ವಿಶಿಷ್ಟ ವೃಕ್ಷಜೋಡಿಯ ಕಟ್ಟೆಯ ಮೇಲೆ ಕುಳಿತು ಸಂಜೆಯ ಹೊತ್ತು ಪ್ರವಚನ ಮಾಡುತ್ತಿದ್ದರು. ಆ ವೃಕ್ಷಜೋಡಿ ಅಶ್ವತ್ಥ ಮರ ಮತ್ತು ಬೇವಿನ ಮರ.

ಜನರಿಗೆ ಸುಲಭವಾಗಿ ಅರ್ಥವಾಗುವಂತೆ ದೃಷ್ಟಾಂತಗಳ ಮೂಲಕ ವಿಷಯಗಳನ್ನು ವಿವರಿಸುತ್ತಿದ್ದರು. ಅದರಿಂದ ವಿಷಯವು ಜನರ ಮೆದುಳಿನಲ್ಲಿ ಬೇರೂರುತ್ತಿತ್ತು.

ವಿವಿಕ್ತನೂ ಮಾತಾಡುವುದನ್ನು ಕಲಿತಿದ್ದ. ಏಳನೆಯ ತರಗತಿಯ ನಂತರ ಹತ್ತಿರದ ನಗರದಲ್ಲಿ ಪ್ರೌಢಶಾಲೆ ಮುಗಿಸಿದ. ಆರುಮೈಲುಗಳ ದೂರವಿದ್ದ ಶಾಲೆಗೆ ನಡೆದೇ ಹೋಗುತ್ತಿದ್ದ. ಬರುವಾಗ ಓಡಿ ಕಾಲುಗಳನ್ನು ದೃಢ ಮಾಡಿಕೊಂಡಿದ್ದ. ಮನೆಯ ಮುಂದಿನ ನೆಲಕ್ಕೆ ಸಮಾನಾಂತರವಾಗಿದ್ದ ಆರಡಿ ಎತ್ತರದ ಮರದ ಟೊಂಗೆಯಲ್ಲಿ ಜೋತಾಡಿ ತನ್ನ ದೇಹವನ್ನು ಚುರುಕುಗೊಳಿಸಿಕೊಂಡ. ತನ್ನೂರಿನ ವಿರಿಜಾ ನದಿಯಲ್ಲಿ ಮೀನಿನಂತೆ ಈಜುತ್ತಿದ್ದ. ಹತ್ತನೆಯ ತರಗತಿ ಮುಗಿಸುವ ವೇಳೆಗೆ ಅವನ ವಿಶಾಲವಾದ ವಕ್ಷಸ್ಥಳ ನೋಡುವವರ ಕಣ್ಣು ಕಿಸುರಾಗುವಂತಿತ್ತು. ಅವನ ತಾಯಿ ಇದ್ದಿದ್ದರೆ ದೃಷ್ಟಿ ತಗಲುವುದೇನೋ ಎಂದು ಆತಂಕ ಪಡುತ್ತಿದ್ದರೋ ಏನೋ. ಇವನು ನಾಲ್ಕುವರ್ಷದವನಾಗಿದ್ದಾಗ ವಿಷಮಶೀತಜ್ವರದಿಂದ ತಾಯಿ ತೀರಿಕೊಂಡಿದ್ದರು.

ಪಿಯೂಸಿ ಮತ್ತು ಬಿಎಸ್‍ಸಿ ಪದವಿಯನ್ನು ರಾಜ್ಯದ ರಾಜಧಾನಿಯಲ್ಲಿ ಮುಗಿಸಿದ. ಹಾಸ್ಟೆಲ್‍ನಲ್ಲಿ ಇರಿಸಿ ಓದಿಸಲು ತಂದೆಗೆ ಆರ್ಥಿಕ ಶಕ್ತಿ ಇಲ್ಲವಾಗಿದ್ದರಿಂದ ಹತ್ತನೆಯ ತರಗತಿಯಲ್ಲಿ ತನ್ನ ಸಹಪಾಠಿಯಾಗಿದ್ದ ಮನೋಜನ ರೂಮ್‍ಮೇಟ್ ಆಗಿ ಓದಿದ್ದ. ಮನೋಜನಿಗೆ ಅಡುಗೆ ಮಾಡಲು ಬರದಿದ್ದುದರಿಂದ ವಿವಿಕ್ತ ತಾನೇ ಅಡುಗೆ ಚೆನ್ನಾಗಿ ಕಲಿತು ಅದರಲ್ಲಿ ನೈಪುಣ್ಯ ಸಂಪಾದಿಸಿದ.

ಅವರು ಪದವಿ ಪಡೆದು ವಿದಾಯ ಹೇಳುವ ದಿನ ಮನೋಜ ಅವನನ್ನು ರೇಗಿಸಿ, “ಅಂತೂ ನಿನ್ನನ್ನು ಸಕಲಕಲಾವಲ್ಲಭ ಅಂತ ಕರೆಯಬಹುದು ವಿವಿ” ಎಂದಿದ್ದ.  ವಿವಿ ಅವನ ಛೋಟಾ ಹೆಸರು.

“ಸಕಲಕಲಾ ಆಂದರೆ…? ನನಗೆ ಎಲ್ಲ ವಿದ್ಯೆಗಳೂ ತಿಳಿದಿಲ್ಲ. ನೀನು ಸುಮ್ಮನೆ ಹೇಳ್ತಿದ್ದೀ” ಎಂದಿದ್ದ ಮುಜುಗರದಿಂದ ವಿವಿಕ್ತ.

“ಹೌದು… ಹೌದು.. ಅರವತ್ಮೂರು ವಿದ್ಯೆ ಗೊತ್ತು. ಅರವತ್ತನಾಲ್ಕನೆಯದು ಗೊತ್ತಿಲ್ಲ” ಎಂದಿದ್ದ ಕಣ್ಣು ಮೀಟಿ. ವಿವಿಕ್ತ ಎಲ್ಲ ವಿಷಯಗಳಲ್ಲಿ ಭಾಗವಹಿಸುತ್ತಿದ್ದರೂ ಹುಡುಗಿಯರ ಸಂಗತಿಯಲ್ಲಿ ಸ್ವಲ್ಪ ಹಿಂಜರಿಯುತ್ತಿದ್ದ.

“ಅದೂ ಥಿಯರಿ ಗೊತ್ತು….” ಎಂದು ಮಾರ್ಮಿಕವಾಗಿ ಹೇಳಿ ನಕ್ಕಿದ್ದ ವಿವಿಕ್ತ.

(ಸಶೇಷ)

-ಯತಿರಾಜ್ ವೀರಾಂಬುಧಿ

Leave a Comment

Your email address will not be published. Required fields are marked *

Scroll to Top