ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ: BPL ಕಾರ್ಡ್ ತಿದ್ದುಪಡಿ, ಹೆಸರು ಸೇರ್ಪಡೆಗೆ ಆನ್‌ಲೈನ್ ಪೋರ್ಟಲ್ ಓಪನ್!
BPL ರೇಷನ್ ಕಾರ್ಡ್ ತಿದ್ದುಪಡಿ 2026; ರಾಜ್ಯದ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿರುವ ಸಾರ್ವಜನಿಕರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಸಿಹಿ ಸುದ್ದಿಯೊಂದನ್ನು ನೀಡಿದೆ. ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ ಹಾಗೂ ಇತರ ತಿದ್ದುಪಡಿಗಳನ್ನು ಮಾಡಲು ಆನ್‌ಲೈನ್ ಪೋರ್ಟಲ್ ಓಪನ್ (Online Portal Open) ಮಾಡಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ತಾಂತ್ರಿಕ ಕಾರಣಗಳಿಂದಾಗಿ ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಆದರೆ ಇದೀಗ ಸಾರ್ವಜನಿಕರ ಅನುಕೂಲಕ್ಕಾಗಿ ಇಲಾಖೆಯು ಪೋರ್ಟಲ್ ತೆರೆದಿದ್ದು, ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಏನೆಲ್ಲಾ ತಿದ್ದುಪಡಿಗಳಿಗೆ ಅವಕಾಶವಿದೆ?
- ಹೊಸ ಸದಸ್ಯರ ಹೆಸರು ಸೇರ್ಪಡೆ: ನವಜಾತ ಶಿಶುಗಳು ಅಥವಾ ಹೊಸದಾಗಿ ಮದುವೆಯಾಗಿ ಬಂದ ಸೊಸೆಯ ಹೆಸರನ್ನು ಸೇರಿಸಲು ಅವಕಾಶ.
- ಹೆಸರು ತೆಗೆದುಹಾಕುವುದು: ಕುಟುಂಬದ ಸದಸ್ಯರು ನಿಧನರಾಗಿದ್ದರೆ ಅಥವಾ ಮದುವೆಯಾಗಿ ಬೇರೆಡೆಗೆ ತೆರಳಿದ್ದರೆ ಅವರ ಹೆಸರು ವಜಾಗೊಳಿಸುವುದು.
- ವಿಳಾಸ ಮತ್ತು ನ್ಯಾಯಬೆಲೆ ಅಂಗಡಿ ಬದಲಾವಣೆ: ಹೊಸ ಸ್ಥಳಕ್ಕೆ ವಾಸಸ್ಥಳ ಬದಲಾಯಿಸಿದ್ದರೆ ರೇಷನ್ ಅಂಗಡಿ ಅಥವಾ ವಿಳಾಸ ಬದಲಾವಣೆ.
- ಯಜಮಾನಿಯ ಹೆಸರು ಬದಲಾವಣೆ: ಗೃಹಲಕ್ಷ್ಮಿ ಯೋಜನೆಗಾಗಿ ಕುಟುಂಬದ ಮುಖ್ಯಸ್ಥೆಯ/ಯಜಮಾನಿಯ ಹೆಸರು ತಿದ್ದುಪಡಿ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
- ಆಧಾರ್ ಕಾರ್ಡ್ (Aadhaar Card): ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳು (ಮೊಬೈಲ್ ಸಂಖ್ಯೆ ಲಿಂಕ್ ಇರಬೇಕು).
- ಜನನ ಪ್ರಮಾಣ ಪತ್ರ (Birth Certificate): 6 ವರ್ಷದೊಳಗಿನ ಮಗುವಿನ ಹೆಸರು ಸೇರಿಸುವುದಾದರೆ ಮಗುವಿನ ಜನನ ಪ್ರಮಾಣ ಪತ್ರ ಕಡ್ಡಾಯ.
- ಹಾಲಿ ಇರುವ ರೇಷನ್ ಕಾರ್ಡ್ ಪ್ರತಿ.
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ (Income Certificate).
ಅರ್ಜಿ ಸಲ್ಲಿಸುವುದು ಹೇಗೆ?
ಸಾರ್ವಜನಿಕರು ತಮ್ಮ ಹತ್ತಿರದ ಗ್ರಾಮ ಒನ್ (Grama One), ಕರ್ನಾಟಕ ಒನ್ (Karnataka One), ಬೆಂಗಳೂರು ಒನ್ ಅಥವಾ ಸೇವಾ ಸಿಂಧು (Seva Sindhu) ಫ್ರಾಂಚೈಸಿ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಸೀಮಿತ ದಿನಗಳ ಕಾಲ ಮಾತ್ರ ಈ ಪೋರ್ಟಲ್ ಓಪನ್ ಇರಲಿದ್ದು, ಅಗತ್ಯವಿರುವ ಸಾರ್ವಜನಿಕರು ತಕ್ಷಣವೇ ತಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಆಹಾರ ಇಲಾಖೆ ಕೋರಿದೆ.
