ಚೆನ್ನಮ್ಮನವರು… ಬರಿ ಪ್ರಧಾನಿಯವರ ಪತ್ನಿಯಷ್ಟೇ ಅಲ್ಲ, ಅದು ಒಂದು ಅಪ್ರತಿಮ ಬದುಕಿನ ತಪಸ್ಸು! ಚೆನ್ನಮ್ಮನವರು ದೇವೇಗೌಡರ ಅನುರೂಪ ದಾಂಪತ್ಯ
ಚೆನ್ನಮ್ಮನವರು ದೇವೇಗೌಡರ ಅನುರೂಪ ದಾಂಪತ್ಯ; ಚೆನ್ನಮ್ಮನವರು… ಅವರು ಕೇವಲ ಭಾರತದ ಮಾಜಿ ಪ್ರಧಾನಿಗಳ ಪತ್ನಿ ಅಷ್ಟೇನಾ? ಮಾಜಿ ಮುಖ್ಯಮಂತ್ರಿಯ ತಾಯಿ ಅಷ್ಟೇನಾ? ಅಷ್ಟೇ ಅಲ್ಲ… ಅವರು ಬದುಕಿನ ಕಠಿಣ ಸಂಘರ್ಷದಲ್ಲಿ ಪ್ರಚಾರದ ಹಂಬಲವಿಲ್ಲದೆ ಅತ್ಯಂತ ಎತ್ತರಕ್ಕೆ ಏರಿದ ಅಪರೂಪದ ಮಹಾಗೃಹಿಣಿ.
ಇಂದಿನ ಗದ್ದಲದ ಜಗತ್ತಿನಲ್ಲಿ ಕಾರ್ಪೊರೇಟ್ ಅಂಗಳದಲ್ಲಿ ನಿಂತು ಗಂಟಲೊಡ್ಡಿ ಭಾಷಣ ಮಾಡಿದವರಲ್ಲ ಅವರು. ಅವರೆಂದೂ ಯಾವುದೇ ಅಧಿಕಾರದ ಹುದ್ದೆಯನ್ನು ಬಯಸಿದವರಲ್ಲ, ಆಸ್ತಿ-ಪಾಸ್ತಿಗಳನ್ನು ಕೂಡಿಟ್ಟವರಲ್ಲ. ಪತಿ, ಮಕ್ಕಳು ಮತ್ತು ಇಡೀ ಕುಟುಂಬವೇ ರಾಜಕೀಯದ ಉತ್ತುಂಗದಲ್ಲಿದ್ದರೂ ಅಧಿಕಾರದ ಅಹಂನ್ನು ತಲೆಗೇರಿಸಿಕೊಂಡವರಲ್ಲ. ಆದರೂ ಇಂದು ಪ್ರತಿಯೊಬ್ಬರೂ ಅವರ ನಿಧನಕ್ಕೆ ಕಣ್ಣೀರಿಡುತ್ತಿದ್ದಾರೆ ಎಂದರೆ, ಅದಕ್ಕೆ ಕಾರಣ ಅವರಲ್ಲಿದ್ದ ಅಪಾರವಾದ ‘ಕೈಗುಣ’, ಸೌಜನ್ಯ ಹಾಗೂ ಮನೆಗೆ ಬಂದವರನ್ನು ತಾಯಿಯಂತೆ ಕಂಡು ಉಣಬಡಿಸುತ್ತಿದ್ದ ಆ ವಿಶಾಲ ಮನಸ್ಸು!
ಸಂಸಾರದ ನೊಗ ಹೊತ್ತ ಗಟ್ಟಿಗಿತ್ತಿ:
ದೇವೇಗೌಡರು ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುವ ಮುಂಚೆ, ಚೆನ್ನಮ್ಮನವರು ಸಂಸಾರದ ನೊಗವನ್ನು ಎಳೆಯಲು ಅದೆಷ್ಟು ಶ್ರಮ ಪಟ್ಟಿರಬಹುದು ಎನ್ನುವುದನ್ನು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ತುಂಬು ಸಂಸಾರ, ನಾಲ್ಕು ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು… ಆದರೆ ಕುಟುಂಬದ ಆದಾಯ ಮಾತ್ರ ತೀರ ಕಡಿಮೆ. ಡಿಪ್ಲೊಮಾ ಓದಿದ್ದ ದೇವೇಗೌಡರಿಗೆ ಆರಂಭದಲ್ಲಿ ರಾಜಕೀಯದ ಹುಚ್ಚಿತ್ತೇ ವಿನಃ ದೊಡ್ಡ ಮಟ್ಟದ ಆದಾಯವಿರಲಿಲ್ಲ. ದೇವೇಗೌಡರು ಸಣ್ಣ ಮಟ್ಟದ ಕಂಟ್ರಾಕ್ಟರ್ ಆಗಿದ್ದಾಗ, ಅವರ ಶ್ರಮಕ್ಕೆ ಆಸರೆಯಾಗಲು ತಮ್ಮ ಒಡವೆಗಳನ್ನೇ ಕೊಟ್ಟು ನಿಂತವರು ಚೆನ್ನಮ್ಮನವರು.
ಆದಾಯ ಕಡಿಮೆಯಿದ್ದರೂ, ಪತಿಗೆ ರಾಜಕೀಯದ ತೀವ್ರ ಆಸಕ್ತಿಯಿದ್ದರೂ ಸಂಸಾರ ಎಂಬ ನೌಕೆ ಹಳಿ ತಪ್ಪದಂತೆ ಅತ್ಯಂತ ಎಚ್ಚರಿಕೆಯಿಂದ ನೋಡಿಕೊಂಡವರು ಅವರು. ನಾಲ್ಕು ಜನ ಗಂಡುಮಕ್ಕಳಲ್ಲಿ ಯಾರೊಬ್ಬರ ಮೇಲೂ ಭೇದಭಾವ ತೋರದೆ, ಯಾವ ಸೊಸೆಯಂದಿರೊಂದಿಗೂ ಸಣ್ಣ ಬಿರುಕೂ ಬರದಂತೆ ಇಡೀ ಕುಟುಂಬವನ್ನು ಪ್ರೀತಿಯಿಂದ ಬೆಸೆದು ಕಾಯ್ದುಕೊಂಡರು.
‘ಅನ್ನದಾಸೋಹ’ ಮತ್ತು ಮನೆಗೆ ಬಂದವರ ಸತ್ಕಾರ:
ಚೆನ್ನಮ್ಮನವರಿಗೆ ಪತಿ ಹಾಗೂ ಮಕ್ಕಳ ಸೇವೆಯೇ ಅಂತಿಮ ಗುರಿಯಾಗಿತ್ತು. ಅವರೆಂದೂ ಬಂಗಾರದ ಒಡವೆ ಮಾಡಿಸಿಕೊಡಿ, ಸೈಟ್ ಕೊಡಿ, ಬಂಗಲೆ ಕಟ್ಟಿಸಿಕೊಡಿ ಎಂದು ದೇವೇಗೌಡರ ಬಳಿ ರಚ್ಚೆ ಹಿಡಿದವರಲ್ಲ. ಪತಿಯ ಬಳಿ ಹೋಗಿ ಅವನಿಗೆ ಆ ಹುದ್ದೆ ಕೊಡಿಸಿ, ಇವನಿಗೆ ಈ ಅಧಿಕಾರ ಕೊಡಿಸಿ ಎಂದು ದಾರಿ ತಪ್ಪಿಸುವ ಯಾವುದೇ ಬೇಡಿಕೆಗಳನ್ನು ಇಟ್ಟವರೇ ಅಲ್ಲ. ಅವರಿಗೆ ಸದಾ ಒಂದೇ ಚಿಂತೆ—ತಮ್ಮ ಮನೆಯ ಸದಸ್ಯರು ಮತ್ತು ಮನೆಗೆ ಬಂದವರು ಹೊತ್ತಿಗೆ ಸರಿಯಾಗಿ ಊಟ ಮಾಡಿದರೋ ಇಲ್ಲವೋ ಎನ್ನುವುದು ಮಾತ್ರ!
ಪತಿ ಶಾಸಕನಾಗಲಿ, ಸಚಿವನಾಗಲಿ, ಮುಖ್ಯಮಂತ್ರಿಯಾಗಲಿ ಅಥವಾ ಪ್ರಧಾನಿಯೇ ಆಗಲಿ… ಮನೆಗೆ ಬರುವ ಕಾರ್ಯಕರ್ತರು, ಹಳ್ಳಿಯ ಜನರು ಅಥವಾ ಗಣ್ಯರನ್ನು ಪ್ರೀತಿಯಿಂದ ಉಪಚರಿಸಿ, ಸೊಪ್ಪು ಸಾರು-ರಾಗಿಮುದ್ದೆ ಮಾಡಿ ಬಡಿಸಿ, ದೈವಪ್ರಸಾದ ನೀಡಿ ಕಳುಹಿಸುವುದೇ ಅವರ ನಿತ್ಯದ ಕಾಯಕವಾಗಿತ್ತು. ದೇವೇಗೌಡರು ವಯೋಸಹಜವಾಗಿ ಬೊಗಸೆ ತುಂಬಾ ಮಾತ್ರೆಗಳನ್ನು ಹಿಡಿದು ನುಂಗುವಾಗ, ಯಾವ ಮಾತ್ರೆ ಯಾವಾಗ ನೀಡಬೇಕು ಎನ್ನುವುದನ್ನು ಬೆರಳ ತುದಿಯಲ್ಲಿ ನೆನಪಿಟ್ಟುಕೊಂಡು ಪ್ರೀತಿಯಿಂದ ನೀರು ತಂದುಕೊಡುತ್ತಿದ್ದವರು ಇದೇ ಚೆನ್ನಮ್ಮನವರು.
ದಾಂಪತ್ಯ ಹಾಗೂ ನಾಯಕತ್ವಕ್ಕೆ ದೊಡ್ಡ ಮಾದರಿ:
ಬಹುತೇಕ ಸಾಂಪ್ರದಾಯಿಕ ಒಕ್ಕಲಿಗ ಹೆಣ್ಣುಮಕ್ಕಳಲ್ಲಿ ಹುಟ್ಟಿನಿಂದಲೇ ಬರುವ ಒಂದು ಅದ್ಭುತ ಗುಣವಿದೆ. “ಸದಾ ಪತಿಯೇ ಮುಂದೆ, ತಾನು ಅವರ ಹಿಂದೆ. ಪತಿ ಮತ್ತು ಮಕ್ಕಳು ತಿಂದು ಉಂಡು ಉಳಿದಿದ್ದನ್ನು ತಾನು ತಿಂದರೆ ಸಾಕು, ಅವರ ಹೊಟ್ಟೆ ತುಂಬಿದರೆ ತನ್ನ ಹೊಟ್ಟೆ ತುಂಬಿದಂತೆ” ಎನ್ನುವ ಶ್ರೇಷ್ಠ ಭಾವನೆ ಅವರಲ್ಲಿರುತ್ತದೆ. ಈಗಿನ ಕಾಲದಂತೆ ಗಂಡನಿಗಿಂತ ತಾನೇ ಮುಂದಿರಬೇಕು, ತನ್ನಲ್ಲಿದ್ದುದನ್ನು ಬೇರೆಯವರಿಗೆ ತೋರಿಸಿಕೊಳ್ಳಬೇಕು ಎನ್ನುವ ಹಂಬಲ ಚೆನ್ನಮ್ಮನವರಲ್ಲಿ ಎಳ್ಳಷ್ಟೂ ಇರಲಿಲ್ಲ.
ಅದಕ್ಕೇ ಇರಬೇಕು… ಪತ್ನಿಯಿಂದ ಜೀರೋ ಟೆನ್ಶನ್ ಇದ್ದುದರಿಂದಲೇ ದೇವೇಗೌಡರಿಗೆ ದಿನದ 24 ಗಂಟೆಯೂ ನಿರಾಳವಾಗಿ ರಾಜಕೀಯ ಮಾಡಲು ಸಾಧ್ಯವಾಯಿತು. ಏಳು ದಶಕಗಳ (70 ವರ್ಷಗಳ) ಕಾಲ ಸುದೀರ್ಘ ಹಾಗೂ ಅನ್ಯೋನ್ಯ ದಾಂಪತ್ಯ ನಡೆಸಲು ಸಾಧ್ಯವಾಯಿತು.
ಎಲ್ಲಿ ಮನೆಗೆ ಬಂದವರನ್ನು ಪ್ರೀತಿಯಿಂದ ಉಪಚರಿಸಿ ಊಟ ಹಾಕುತ್ತಾರೋ, ಎಲ್ಲಿ ಗೃಹಿಣಿ ಮನೆಗೆ ಬಂದವರನ್ನು ಗೌರವದಿಂದ ಕಾಣುತ್ತಾಳೋ… ಅಲ್ಲಿ ನಾಯಕತ್ವವೂ ಬೆಳೆಯುತ್ತದೆ, ನಾಯಕನೂ ಬೆಳೆಯುತ್ತಾನೆ, ಇಡೀ ಸಂಸಾರವೂ ತಲೆಯೆತ್ತಿ ನಿಲ್ಲುತ್ತದೆ! ದೇವೇಗೌಡರಂತಹ ದೇಶ ಮೆಚ್ಚುವ ರಾಜಕೀಯ ಧುರಂಧರ ಹಾಗೂ ಕುಮಾರಸ್ವಾಮಿಯಂತಹ ಜನನಾಯಕ ಸೃಷ್ಟಿಯಾಗಲು ಚೆನ್ನಮ್ಮನವರ ಈ ನಿಶ್ಶಬ್ದ ತ್ಯಾಗವೇ ಪ್ರಮುಖ ಕಾರಣ.
ಬದುಕಿನಲ್ಲಿ ಅರಿತು ನಡೆಯುವ, ಕಷ್ಟ-ಸುಖದಲ್ಲಿ ಜೊತೆಯಾಗುವ ಇಂತಹ ಸಂಗಾತಿ ಸಿಕ್ಕರೆ ಮಾತ್ರ ಯಾವುದೇ ರಂಗದಲ್ಲಾದರೂ ಯಶಸ್ಸು ಸಾಧ್ಯ ಎನ್ನುವುದಕ್ಕೆ ಚೆನ್ನಮ್ಮನವರು ಮತ್ತು ದೇವೇಗೌಡರ ದಾಂಪತ್ಯವೇ ಸಾಕ್ಷಿ. ತಮ್ಮ ‘ಕೈಗುಣ’ ಹಾಗೂ ತಾಯ್ತನದಿಂದ ಪ್ರತಿಯೊಬ್ಬರ ಮನಸ್ಸಿನಲ್ಲಿ ನೆಲೆಸಿರುವ ದಿವಂಗತ ಚೆನ್ನಮ್ಮನವರ ಆತ್ಮಕ್ಕೆ ಸದ್ಗತಿ ಸಿಗಲಿ.
– ಹರಿಣಿ ವೆಂಕಟೇಗೌಡ. (ಸಂಪಾದಕರು, ಸಖೀಗೀತ)
