ಶಿವಾಜಿನಗರ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ; ದಾಳಿಕೋರರ ವಿರುದ್ಧ ಗುಂಡಾ ಕಾಯ್ದೆಗೆ ಕೃಷ್ಣ ಬೈರೇಗೌಡ ಆದೇಶ!
ಶಿವಾಜಿನಗರ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ; ರಾಜಧಾನಿ ಬೆಂಗಳೂರಿನ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶದಂತೆ ಫುಟ್‌ಪಾತ್ (ಕಾಲುದಾರಿ) ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬಿಬಿಎಂಪಿ ಇಂಜಿನಿಯರ್‌ಗಳ ಮೇಲೆ ಪುಂಡರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿದೆ.
ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಮಾಧವರಾವ್, ಇಂಜಿನಿಯರ್ ರುಚಿತಾ, ಜೆಸಿಬಿ ಹಾಗೂ ಟ್ರ್ಯಾಕ್ಟರ್ ಚಾಲಕರ ಮೇಲೆ ಪೆಪ್ಪರ್ ಸ್ಪ್ರೇ (Pepper Spray) ಎರಚಿ, ಹೆಲ್ಮೆಟ್ ಮತ್ತು ಪ್ಲಾಸ್ಟಿಕ್ ಕುರ್ಚಿಗಳಿಂದ ರಕ್ತಬರುವಂತೆ ಅಟ್ಟಾಡಿಸಿ ಹೊಡೆಯಲಾಗಿದೆ.
‘ಗುಂಡಾ ಕಾಯ್ದೆ’ ಅಡಿ ಕೇಸ್ ದಾಖಲಿಸಲು ಆದೇಶ!
ಈ ಭೀಕರ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹಲ್ಲೆಕೋರರ ವಿರುದ್ಧ ಕಿಡಿಕಾರಿದ್ದಾರೆ.
“ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕಾನೂನುಬದ್ಧವಾಗಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಮಾಜಘಾತುಕ ಕೃತ್ಯ. ದಾಳಿಯ ಸೂತ್ರಧಾರ ಎನ್ನಲಾದ ಬಸವರಾಜ್ ಪಡುಕೋಟೆ ಹಾಗೂ ಆತನ ಗ್ಯಾಂಗ್ ವಿರುದ್ಧ ತಕ್ಷಣವೇ ‘ಗುಂಡಾ ಕಾಯ್ದೆ’ (Goonda Act) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು” ಎಂದು ನಗರ ಪೊಲೀಸ್ ಕಮಿಷನರ್‌ಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
“ಇವರು ಬಡ ಬೀದಿಬದಿ ವ್ಯಾಪಾರಿಗಳಲ್ಲ. ಫುಟ್‌ಪಾತ್ ಒತ್ತುವರಿ ಮಾಡಿಸಿ ಹಫ್ತಾ ವಸೂಲಿ ಮಾಡುವ ಸಮಾಜಘಾತುಕ ಶಕ್ತಿಗಳು. ಯಾವುದೇ ಕಾರಣಕ್ಕೂ ಇಂತಹ ಪುಂಡರನ್ನು ಬಿಡುವ ಪ್ರಶ್ನೆಯೇ ಇಲ್ಲ” ಎಂದು ಸಚಿವರು ಗುಡುಗಿದ್ದಾರೆ.
ಏಳು ಜನರ ಬಂಧನ:
ಘಟನೆ ನಡೆದ ತಕ್ಷಣ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕಾರ್ಯಾಚರಣೆಗೆ ಇಳಿದ ಪೊಲೀಸರು ಈಗಾಗಲೇ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಇಂಜಿನಿಯರ್ ಮಾಧವರಾವ್ ಹಾಗೂ ಕಣ್ಣಿಗೆ ಪೆಪ್ಪರ್ ಸ್ಪ್ರೇ ಬಿದ್ದು ಗಾಯಗೊಂಡ ಸಿಬ್ಬಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಅಮಟೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, “ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ದಾಕ್ಷಿಣ್ಯವಿಲ್ಲದೆ ಶಿಸ್ತುಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಮುಂದೆ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಸಿಬ್ಬಂದಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಲು ತೀರ್ಮಾನಿಸಲಾಗಿದೆ.
