ನಯಾ ಪೈಸೆಯಷ್ಟೂ ಕೆಲಸ ಮಾಡದೇ 47 ಕಾಮಗಾರಿಗಳಿಗೆ ಎರಡೆರಡು ಸಲ ಹಣ ಬಿಡುಗಡೆ ಮಾಡಿಸಿಕೊಂಡಿರುವ ಬೃಹತ್ ವಂಚನೆ- ಎನ್ ಆರ್ ರಮೇಶ್ ಆರೋಪ

ನಯಾ ಪೈಸೆಯಷ್ಟೂ ಕೆಲಸ ಮಾಡದೇ 47 ಕಾಮಗಾರಿಗಳಿಗೆ ಎರಡೆರಡು ಸಲ ಹಣ ಬಿಡುಗಡೆ ಮಾಡಿಸಿಕೊಂಡಿರುವ ಬೃಹತ್ ವಂಚನೆ- ಎನ್ ಆರ್ ರಮೇಶ್ ಆರೋಪ

“ಸಚಿವ ಜಮೀರ್ ಅಹಮದ್ ಅವರ ಚಾಮರಾಜಪೇಟೆ ಕ್ಷೇತ್ರದಲ್ಲಿ ನಡೆದಿರುವ ₹ 55.32 ಕೋಟಿ ಮೊತ್ತದ ಹಗರಣ”

ರಾಜ್ಯದ ವಸತಿ ಮತ್ತು ವಕ್ಫ್ ಖಾತೆಗಳ ಸಚಿವ ಜಮೀರ್ ಅಹಮದ್ ಅವರು ಪ್ರತಿನಿಧಿಸುತ್ತಿರುವ “ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ”ದಲ್ಲಿ 47 ಕಾಮಗಾರಿಗಳನ್ನು ನಯಾಪೈಸೆಯಷ್ಟೂ ಸಹ ನಿರ್ವಹಿಸದೆಯೇ ಎರಡೆರಡು ಸಲ ಹಣ ಬಿಡುಗಡೆ ಮಾಡಿಸಿಕೊಂಡಿರುವ ಬೃಹತ್ ಹಗರಣ ಬೆಳಕಿಗೆ ಬಂದಿದೆ.

2020 – 2022 ರ ಅವಧಿಯಲ್ಲಿ ಈ ಪತ್ರದೊಂದಿಗೆ ಲಗತ್ತಿಸಿರುವ ಪಟ್ಟಿಯಲ್ಲಿರುವಂತಹ 47 ಕಾಮಗಾರಿಗಳಿಗೆ ಟೆಂಡರ್ ಗಳನ್ನು ಕರೆದು, ಪೂರ್ವ ನಿಗದಿತ 19 ಮಂದಿ ಗುತ್ತಿಗೆದಾರರಿಗೆ “ಕಾರ್ಯಾದೇಶ ಪತ್ರ”ಗಳನ್ನು ನೀಡಲಾಗಿತ್ತು. ಈ ರೀತಿ “ಕಾರ್ಯಾದೇಶ ಪತ್ರ”ಗಳನ್ನು ಪಡೆದ 19 ಮಂದಿ ಗುತ್ತಿಗೆದಾರರು ಒಂದು ಬಿಡಿಗಾಸಿನಷ್ಟೂ ಸಹ ಕಾಮಗಾರಿಗಳನ್ನು ಮಾಡದೆಯೇ ₹ 27,66,00,000/- (ಇಪ್ಪತ್ತೇಳು ಕೋಟಿ ಅರವತ್ತಾರು ಲಕ್ಷ) ಗಳಷ್ಟು ಬೃಹತ್ ಮೊತ್ತವನ್ನು ತಮ್ಮ ರಾಜಕೀಯ ಪ್ರಭಾವದಿಂದ ಬಿಡುಗಡೆ ಮಾಡಿಸಿಕೊಂಡಿದ್ದರು !!!

ಇದೀಗ, ಎರಡೂವರೆ ವರ್ಷಗಳ ನಂತರ – 2024-25 ರಲ್ಲಿ ಮತ್ತೊಮ್ಮೆ ಅದೇ 47 ಕಾಮಗಾರಿಗಳಿಗೆ, ಅದೇ 19 ಮಂದಿ ವಂಚಕ ಗುತ್ತಿಗೆದಾರರಿಗೆ ₹ 27,66,00,000/- (ಇಪ್ಪತ್ತೇಳು ಕೋಟಿ ಅರವತ್ತಾರು ಲಕ್ಷ) ರೂಪಾಯಿಗಳನ್ನು ಎರಡನೇ ಸಲ ಬಿಡುಗಡೆ ಮಾಡಲಾಗಿದೆ !!!

ಅಂದರೇ, 47 ಕಾಮಗಾರಿಗಳನ್ನು ನಿರ್ವಹಿಸದೆಯೇ 19 ಮಂದಿ ವಂಚಕ ಗುತ್ತಿಗೆದಾರರಿಗೆ ಎರಡೆರಡು ಸಲ ಒಟ್ಟು ₹ 55,32,00,000/- (ಐವತ್ತೈದು ಕೋಟಿ ಮೂವತ್ತೆರಡು ಲಕ್ಷ) ಗಳನ್ನು ಬಿಡುಗಡೆ ಮಾಡಲಾಗಿದೆ !!!

ಕಿರಿಯ ಅಭಿಯಂತರ (Junior Engineer) ನಾಗಿ ಪಾಲಿಕೆಯಲ್ಲಿ ಕೆಲಸಕ್ಕೆ ಸೇರಿ, ನಂತರ ಸಹಾಯಕ ಅಭಿಯಂತರ (AE), ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಮತ್ತು ಪ್ರಭಾರ ಕಾರ್ಯಪಾಲಕ ಅಭಿಯಂತರ (Incharge Executive Engineer) ಹುದ್ದೆಗಳಲ್ಲಿ ಇದೇ ಚಾಮರಾಜಪೇಟೆ ಕ್ಷೇತ್ರದಲ್ಲಿಯೇ ಕಾರ್ಯ ನಿರ್ವಹಿಸಿರುವ ಮಹಾ ಭ್ರಷ್ಟ M. S. ಉಮೇಶ್ ಸೇರಿದಂತೆ – (1) ರಾಧಾಕೃಷ್ಣ, ತಿಮ್ಮರಸು, ಭಾಸ್ಕರ್ ರೆಡ್ಡಿ ಎಂಬ ಕಾರ್ಯಪಾಲಕ ಅಭಿಯಂತರರುಗಳು, (2) ಸಂಗೀತ R. ಎಂಬ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ (3) ಸತೀಶ್ ಕುಮಾರ್ ಎ., ಸೈಯದ್ ಸಮರ್, ಗಿರಿಧರ ಹೆಚ್. ಆರ್., ಅರುಣ್ ಕುಮಾರ್ ಎಂ., ಸೌಮ್ಯ ಸಿ. ಆರ್., ರಘು ಜಿ., ಶ್ರೀನಿವಾಸ ರಾಜು ಟಿ. ಎಂಬ ಸಹಾಯಕ ಅಭಿಯಂತರರುಗಳು – ಒಟ್ಟು 12 ಮಂದಿ AE, AEE, EE ಗಳು 19 ಮಂದಿ ವಂಚಕ ಗುತ್ತಿಗೆದಾರರೊಂದಿಗೆ ಷಾಮೀಲಾಗಿ – ನಿರ್ವಹಿಸದೇ ಇರುವ 47 ಕಾಮಗಾರಿಗಳಿಗೆ ಎರಡೆರಡು ಸಲ ಹಣ ಬಿಡುಗಡೆ ಮಾಡುವ ಸಂಬಂಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒಟ್ಟು ₹ 55,32,00,000/- (ಐವತ್ತೈದು ಕೋಟಿ ಮೂವತ್ತೆರಡು ಲಕ್ಷ) ರೂಪಾಯಿಗಳಷ್ಟು ಬೃಹತ್ ಮೊತ್ತದ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ !!!

ವಾಸ್ತವವಾಗಿ, ಯಾವುದೇ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಗುತ್ತಿಗೆದಾರನಿಗೆ “ಕಾರ್ಯಾದೇಶ ಪತ್ರ”ನೀಡಿದ ನಂತರ – ಆಯಾ ಕಾಮಗಾರಿಯನ್ನು ಅನುಷ್ಠಾನಗೊಳಿಸಬೇಕಾದ ಅಧಿಕಾರಿಯು – ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ (Before Start the work), ಕಾಮಗಾರಿ ಚಾಲ್ತಿಯಲ್ಲಿರುವ (Ongoing work) ಮತ್ತು ಕಾಮಗಾರಿ ಪೂರ್ಣಗೊಂಡ ನಂತರದ (After Completion of the work) ಛಾಯಾಚಿತ್ರಗಳನ್ನು ಸಂಬಂಧಪಟ್ಟ ಕಡತದಲ್ಲಿ ಲಗತ್ತಿಸುವುದರ ಜೊತೆಗೆ, ಆಯಾ ಕಾಮಗಾರಿಯ “ಪ್ರಗತಿಯ ವರದಿ” (Progress Report) ಗಳನ್ನು ಟಿಪ್ಪಣಿ ಹಾಳೆಗಳಲ್ಲಿ ನಮೂದಿಸಬೇಕಿರುವುದು ಕಡ್ಡಾಯವಾಗಿರುತ್ತದೆ.

ಆದರೆ, ಚಾಮರಾಜಪೇಟೆ ಕ್ಷೇತ್ರದ ಈ 47 ಕಾಮಗಾರಿಗಳಿಗೆ ಸಂಬಂಧಿಸಿದಂತೆ – ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ನಕಲಿಯಾಗಿ ತಯಾರಿಸಲಾಗಿದೆ. ಬೇರೆಡೆ ಮಾಡಿರುವ ಕಾಮಗಾರಿಗಳ ಛಾಯಾಚಿತ್ರಗಳನ್ನು ತೆಗೆದು ಈ 47 ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳಲ್ಲಿ ಲಗತ್ತಿಸಲಾಗಿದೆ !!!

ಈ ಬೃಹತ್ ಹಗರಣದ ಬಗ್ಗೆ ಸ್ವತಃ ಕಾಂಗ್ರೆಸ್(ಐ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಮತ್ತು ಚಾಮರಾಜಪೇಟೆ ಕ್ಷೇತ್ರದ ನಿವಾಸಿಯೇ ಆಗಿರುವ ಬಿಬಿಎಂಪಿಯ ಮಾಜಿ ಸದಸ್ಯರಾದ B. T. ಶ್ರೀನಿವಾಸ ಮೂರ್ತಿಯವರು ಅವರದೇ ಪಕ್ಷದ ರಾಜ್ಯಾಧ್ಯಕ್ಷರಿಗೆ ಮತ್ತು ಚಾಮರಾಜಪೇಟೆ ಕ್ಷೇತ್ರದ ಕಾರ್ಯಪಾಲಕ ಅಭಿಯಂತರರಿಗೆ ಅಧಿಕೃತ ಪತ್ರಗಳನ್ನು ಬರೆದು “ತನಿಖೆ”ಗೆ ಈ ಹಿಂದೆಯೇ ಆಗ್ರಹಿಸಿದ್ದರು !!!

ಈ ಹಿಂದೆ 2015-16 ರಲ್ಲಿ ಇದೇ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿಗಳನ್ನು ನಿರ್ವಹಿಸದೆಯೇ ₹ 9,60,00,000/- (ಒಂಬತ್ತು ಕೋಟಿ ಅರವತ್ತು ಲಕ್ಷ) ಗಳಷ್ಟು ಬೃಹತ್ ಮೊತ್ತ ಬಿಡುಗಡೆ ಮಾಡಲಾಗಿದ್ದ “ಬೃಹತ್ ಹಗರಣ”ಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸಹಿತ ನಾನು ನೀಡಿದ್ದ ದೂರಿನ ತನಿಖೆ ನಡೆಸಿದ್ದ BMTF ಮತ್ತು ACB ಪೋಲೀಸರು ಆಗಿನ ಕಾರ್ಯಪಾಲಕ ಅಭಿಯಂತರ ತನ್ವೀರ್ ಅಹಮದ್, M. S. ಉಮೇಶ್ ಮತ್ತಿತರರನ್ನು ಬಂಧಿಸಿದ್ದರು. ಈ ಹಗರಣದ ಪ್ರಮುಖ ಪಾತ್ರಧಾರಿ ಗುತ್ತಿಗೆದಾರ R. ಚಂದ್ರಪ್ಪ ಅಲಿಯಾಸ್ ಪೆಟ್ಟಿಕೋಟ್ ಚಂದ್ರಪ್ಪ ಪೋಲೀಸರ ಕೈಗೆ ಸಿಗದೆ ಪರಾರಿಯಾಗಿ, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ.

2015-16 ರಲ್ಲಿ ತಮ್ಮ ಕ್ಷೇತ್ರದಲ್ಲಿ ನಡೆದ ಈ ಹಗರಣ ಬೆಳಕಿಗೆ ಬಂದ ನಂತರವಾದರೂ ಸಚಿವ ಜಮೀರ್ ಅಹಮದ್ ಅವರು ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಇದೀಗ ಅವರ ಬೇಜವಾಬ್ದಾರಿಯಿಂದ ಮತ್ತೊಮ್ಮೆ ಅವರ ಕ್ಷೇತ್ರದಲ್ಲಿ ₹ 55,32,00,000/- ಮೊತ್ತದ ಈ ಬೃಹತ್ ಹಗರಣ ನಡೆದಿದೆ.

ಮಾಡದೇ ಇರುವ ₹ 27,66,00,000/- ಮೊತ್ತದ 47 ಕಾಮಗಾರಿಗಳಿಗೆ ಎರಡೆರಡು ಸಲ ಹಣ ಬಿಡುಗಡೆಯಾಗಿರುವ ಒಟ್ಟು ₹ 55,32,00,000/- ಮೊತ್ತದ ಈ ಬೃಹತ್ ಹಗರಣದಲ್ಲಿ ಸಚಿವ ಜಮೀರ್ ಅಹಮದ್ ಅವರ ಆಪ್ತ ಸಹಾಯಕ ಅಯೂಬ್ ಖಾನ್ ಎಂಬಾತ ನೇರವಾಗಿ ಭಾಗಿಯಾಗಿದ್ದಾನೆ !!!

ಕಾರಣವೇನೆಂದರೆ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿ ಇಲಾಖೆ, ಯೋಜನೆ ಇಲಾಖೆ, ನಗರ ಯೋಜನೆ ಇಲಾಖೆ, ಕಂದಾಯ ಇಲಾಖೆ, ಕಲ್ಯಾಣ ಇಲಾಖೆ ಮತ್ತು ಘನತ್ಯಾಜ್ಯ ನಿರ್ವಹಣೆ ಇಲಾಖೆ ಸೇರಿದಂತೆ – ಯಾವುದೇ ಇಲಾಖೆಯಲ್ಲಿನ ಪ್ರತಿಯೊಂದು ಕಾರ್ಯವೂ ಸಹ ಈ ಅಯೂಬ್ ಖಾನ್ ಗಮನಕ್ಕೆ ಬಾರದೇ ನಡೆಯಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇರುತ್ತದೆ.

ಕಾಮಗಾರಿಗಳನ್ನು ನಿರ್ವಹಿಸದೆಯೇ ₹ 27,66,00,000/- ಮೊತ್ತದ 47 ಕಾಮಗಾರಿಗಳಿಗೆ ಎರಡೆರಡು ಸಲ 19 ಮಂದಿ ಪೂರ್ವ ನಿಗದಿತ ಗುತ್ತಿಗೆದಾರರಿಗೆ ಒಟ್ಟು ₹ 55,32,00,000/- ಹಣ ಬಿಡುಗಡೆ ಮಾಡಿರುವ ಮತ್ತು ಸಂಪೂರ್ಣ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ 12 ಮಂದಿ ಭ್ರಷ್ಟ ಅಧಿಕಾರಿಗಳು ಹಾಗೂ 19 ಮಂದಿ ವಂಚಕ ಗುತ್ತಿಗೆದಾರರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಈ ಪ್ರಕರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆಯುವಂತೆ ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರು ಹಾಗೂ ಮಾನ್ಯ ಆಡಳಿತಾಧಿಕಾರಿಗಳನ್ನು ಆಗ್ರಹಿಸಲಾಗಿದೆ.

ಹಾಗೆಯೇ, ವಂಚಕ ಗುತ್ತಿಗೆದಾರರೊಂದಿಗೆ ಷಾಮೀಲಾಗಿ ಪಾಲಿಕೆಗೆ ₹ 55,32,00,000/- ಗಳಷ್ಟು ಬೃಹತ್ ಪ್ರಮಾಣದ ಹಣ ವಂಚಿಸಿರುವ ಚಾಮರಾಜಪೇಟೆ ವಿಭಾಗದ ಎಲ್ಲಾ 12 ಮಂದಿ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆಯೂ ಸಹ ಆಗ್ರಹಿಸಲಾಗಿದೆ.

“ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ”ದಲ್ಲಿ ನಯಾಪೈಸೆಯಷ್ಟೂ ಕೆಲಸ ಮಾಡದೇ 47 ಕಾಮಗಾರಿಗಳಿಗೆ ಎರಡೆರಡು ಸಲ ಹಣ ಬಿಡುಗಡೆ ಮಾಡಿಸಿಕೊಂಡಿರುವ ಈ ಬೃಹತ್ ವಂಚನೆಯ ಹಗರಣಕ್ಕೆ ಸಂಬಂಧಿಸಿದಂತೆ, ಚಾಮರಾಜಪೇಟೆ ವಿಭಾಗದ ಎಲ್ಲಾ 12 ಮಂದಿ ಭ್ರಷ್ಟ ಅಧಿಕಾರಿಗಳು ಹಾಗೂ 19 ಮಂದಿ ವಂಚಕ ಗುತ್ತಿಗೆದಾರರ ವಿರುದ್ಧ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂಪೂರ್ಣ ದಾಖಲೆಗಳ ಸಹಿತ ಮಾನ್ಯ ಲೋಕಾಯುಕ್ತರಿಗೆ ಮತ್ತು “ಲೋಕಾಯುಕ್ತ”ದ ಅಪರ ಪೋಲೀಸ್ ಮಹಾ ನಿರ್ದೇಶಕರು (ADGP) ಹಾಗೂ ಆರಕ್ಷಕ ಮಹಾ ನಿರೀಕ್ಷಕ (IGP) ರಿಗೆ ದೂರು ಸಲ್ಲಿಸಲಾಗಿದೆ.

Comments

No comments yet. Why don’t you start the discussion?

Leave a Reply

Your email address will not be published. Required fields are marked *