ಸದ್ದಿಲ್ಲದೆ ಆಫ್ರಿಕಾದಲ್ಲಿ ಗಣಿಗಾರಿಕೆ ಕಂಪನಿ ತೆರೆದ ಸಾಹುಕಾರ್: ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿಯ ಅಸಲಿ ರಹಸ್ಯ ಬಯಲು!
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಪುತ್ರಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿರುವ ಭರ್ಜರಿ ದಾಳಿಯ ಹಿಂದಿನ ಮಹತ್ವದ ರಹಸ್ಯ ಈಗ ಹೊರಬಿದ್ದಿದೆ. ಸದ್ದಿಲ್ಲದೆ ವಿದೇಶದಲ್ಲಿ ಬೃಹತ್ ಉದ್ಯಮ ಆರಂಭಿಸಿ, ಅಕ್ರಮ ಮಾರ್ಗಗಳ ಮೂಲಕ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುವ ಬಲವಾದ ಸಂಶಯದ ಮೇಲೆ ಇಡಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ನಿಯಮಗಳನ್ನು ಗಾಳಿಗೆ ತೂರಿ ವಿದೇಶಗಳಲ್ಲಿ ಅಕ್ರಮ ಹಣ ಹೂಡಿಕೆ ಮಾಡಲಾಗಿದ್ದು, ಸತೀಶ್ ಜಾರಕಿಹೊಳಿ ಕುಟುಂಬ ತೊಡಗಿಸಿರುವುದು ಕಪ್ಪು ಹಣವೇ ಎಂಬ ಆಯಾಮದಲ್ಲಿ ಕೇಂದ್ರ ತನಿಖಾ ಸಂಸ್ಥೆ ತೀವ್ರ ಜಾಲಾಟ ನಡೆಸುತ್ತಿದೆ.
ಇಡಿ ದಾಳಿಯ ಬೆನ್ನತ್ತಿದ ರಹಸ್ಯ ಅಂಶಗಳು:
- ಆಫ್ರಿಕಾದಲ್ಲಿ ಗಣಿಗಾರಿಕೆ ಕಂಪನಿ ಸ್ಥಾಪನೆ: ಸಚಿವ ಸತೀಶ್ ಜಾರಕಿಹೊಳಿ ಅವರು ಯಾವುದೇ ಸದ್ದುಗದ್ದಲವಿಲ್ಲದೆ ಆಫ್ರಿಕಾ ಖಂಡದ ದೇಶವೊಂದರಲ್ಲಿ ಗಣಿಗಾರಿಕೆ (Mining) ಕಂಪನಿಯನ್ನು ಆರಂಭಿಸಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
- ಕುಟುಂಬಸ್ಥರ ಹೆಸರಿನಲ್ಲಿ ವಿದೇಶಿ ಕಂಪನಿಗಳು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಾಗೂ ಫೆಮಾ (FEMA) ನಿಯಮಾವಳಿಗಳನ್ನು ಉಲ್ಲಂಘಿಸಿ, ಕುಟುಂಬದ ಸದಸ್ಯರ ಹೆಸರಿನಲ್ಲಿ ವಿದೇಶಿ ಶೆಲ್ ಕಂಪನಿಗಳನ್ನು ತೆರೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.
- ಅಕ್ರಮ ಮಾರ್ಗಗಳ ಮೂಲಕ ಹಣ ವರ್ಗಾವಣೆ: ಭಾರತದಿಂದ ಹವಾಲಾ ಹಾಗೂ ಅಕ್ರಮ ಮಾರ್ಗಗಳನ್ನು ಬಳಸಿ ವಿದೇಶಕ್ಕೆ ಅಪಾರ ಪ್ರಮಾಣದ ಹಣ ವರ್ಗಾವಣೆ ಮಾಡಲಾಗಿದ್ದು, ಆ ಹಣವನ್ನು ಗಣಿಗಾರಿಕೆ ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಇಡಿ ಕಲೆಹಾಕಿದೆ.
- ದಾಖಲೆಗಳ ಸೀಜ್: ಬೆಂಗಳೂರಿನ ಡಾಲರ್ಸ್ ಕಾಲನಿ ಹಾಗೂ ಬೆಳಗಾವಿಯ ಕಚೇರಿಗಳಲ್ಲಿ ಸಿಕ್ಕ ವಿದೇಶಿ ಹೂಡಿಕೆ ಪತ್ರಗಳು, ಬ್ಯಾಂಕ್ ಪಾಸ್‌ಬುಕ್‌ಗಳು ಹಾಗೂ ಪಾಸ್‌ಪೋರ್ಟ್ ವಿವರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಹುಕಾರ್‌ಗೆ ಮುಳುವಾಯಿತೇ ವಿದೇಶಿ ಹೂಡಿಕೆ?:
ರಾಜ್ಯ ರಾಜಕೀಯದಲ್ಲಿ ಪ್ರಭಾವಿ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಅವರು ದೇಶಿಯವಾಗಿ ಸಕ್ಕರೆ ಕಾರ್ಖಾನೆ, ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಆದರೆ ವಿದೇಶಿ ಕಂಪನಿಗಳಲ್ಲಿ ನಡೆಸಿರುವ ಹೂಡಿಕೆಯ ಮೂಲ ಯಾವುದು ಮತ್ತು ಅದಕ್ಕೆ ತಕ್ಕ ಆದಾಯ ತೆರಿಗೆ ಹಾಗೂ ಸರ್ಕಾರಿ ಅನುಮತಿ ಪಡೆಯಲಾಗಿದೆಯೇ ಎಂಬುದೇ ಈಗ ಇಡಿ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.
ಈ ಹೂಡಿಕೆಗಳ ಹಿಂದೆ ಭಾರಿ ಪ್ರಮಾಣದ ಕಪ್ಪು ಹಣದ ಕೈವಾಡವಿದೆಯೇ ಎಂಬುದನ್ನು ಸಾಬೀತುಪಡಿಸಲು ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ.
