sakhigeetha.com

Top 1 Women's Magazines & Publications

Latest:
ಸಿನೆಮಾ ಸುದ್ದಿ

ಗಾನಕೋಗಿಲೆ ಎಸ್. ಜಾನಕಿ (88) ಇನ್ನಿಲ್ಲ: ಮೈಸೂರಿನ ಅಭಿಮಾನಿಯ ತೋಟದಲ್ಲೇ ಅಂತ್ಯಕ್ರಿಯೆ; ಮುಗಿದ ಅಪರೂಪದ ಋಣಾನುಬಂಧ

ಮೈಸೂರು: “ಯಾವ ಮೋಹನ ಮುರಳಿ ಕರೆಯಿತೋ, ದೂರ ತೀರಕ್ಕೆ ನಿನ್ನನು…” ಎಂಬ ಕವಿ ಡಾ. ಗೋಪಾಲಕೃಷ್ಣ ಅಡಿಗರ ಅಮರ ಕಾವ್ಯದ ಸಾಲುಗಳಂತೆ, ಭಾರತದ ಗಾನ ಕೋಗಿಲೆ ಎಸ್. ಜಾನಕಮ್ಮ (88) ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶನಿವಾರ ಕೊನೆಯುಸಿರೆಳೆದಿದ್ದಾರೆ. ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ತೀವ್ರ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಪ್ರಯೋಜನವಾಗದೆ ನಿಧನರಾಗಿದ್ದಾರೆ.

ದೂರದ ಚೆನ್ನೈನಿಂದ ಮೈಸೂರಿಗೆ ಬರುತ್ತಿದ್ದ ಜಾನಕಮ್ಮನವರು, ಕಳೆದ ಎರಡು ದಶಕಗಳಿಂದ ಮಗನ ಮನೆಗೇ ಬಂದಂತೆ ಮೈಸೂರಿನ ಎನ್.ಆರ್. ಮೊಹಲ್ಲಾದ ನವೀನ್ ಎಂಬ ಪರಮ ಅಭಿಮಾನಿಯ ಮನೆಗೆ ಬರುತ್ತಿದ್ದರು.

​ಅಭಿಮಾನಿ ಮನೆಯಲ್ಲೇ ನೆಂಟರಂತೆ ಇದ್ದ ಜಾನಕಮ್ಮ:

​ಭಾರತದ ಗಾನ ಕೋಗಿಲೆ ಜಾನಕಮ್ಮನವರು ಅದೆಷ್ಟು ಆ ಅಭಿಮಾನಿ ನವೀನ್ ಅವರ ಕುಟುಂಬದೊಂದಿಗೆ ಹೊಂದಿಕೊಂಡಿದ್ದರೆಂದರೆ, ತಿಂಗಳುಗಟ್ಟಲೆ ಅವರ ಮನೆಯಲ್ಲೇ ನೆಂಟರಂತೆ ಇರುತ್ತಿದ್ದರು. ಆ ಅಭಿಮಾನಿ ನವೀನ್ ಮೈಸೂರಿನ ಬೋಗಾದಿ ರಸ್ತೆಯಲ್ಲಿ ಜಾನಕಮ್ಮನವರ ಹೆಸರಿನಲ್ಲೇ ಫರ್ನಿಚರ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದಾರೆ. ಅಲ್ಲೇ ಸಮೀಪ ನವೀನ್ ಅವರ ತೋಟವೂ ಇದೆ. ಇದೆಲ್ಲಾ ಯಾವ ಋಣಾನುಬಂಧವೋ ಯಾರೂ ಬಲ್ಲರು.

ಶಾರೀರದ ಮೂಲಕ ಎಂದಿಗೂ ಜೀವಂತ:

ಕನ್ನಡ ಸೇರಿದಂತೆ 20 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿರುವ, 6 ದಶಕಗಳ ಕಾಲ ತಮ್ಮ ಕಂಠಸಿರಿಯ ಮೂಲಕ ಸಂಗೀತ ಸೇವೆಗೈದ ಸಂಗೀತಶಾರದೆಯ ವರಪುತ್ರಿ ಜಾನಕಿ ಅಮ್ಮನವರ ಭೌತಿಕ ಶರೀರ ಅಳಿಯಬಹುದು. ಆದರೆ ಅವರು ದನಿ ನೀಡಿರುವ ಹಾಡುಗಳಲ್ಲಿ ಅವರ ಶಾರೀರ ಮಾತ್ರ ಯಾವತ್ತೂ ಜೀವಂತವಾಗಿರುತ್ತದೆ. ಹೋಗಿ ಬನ್ನಿ ಅಮ್ಮ, ನಿಮ್ಮ ದಿವ್ಯ ಆತ್ಮಕ್ಕೆ ಶಾಂತಿ ಸಿಗಲಿ.

Leave a Reply

Your email address will not be published. Required fields are marked *