ಬೆಂಗಳೂರಲ್ಲಿ ಭಾರಿ ಭೂ ಹಗರಣ: ₹100 ಕೋಟಿ ಮೌಲ್ಯದ ಸರ್ಕಾರಿ ಗೋಮಾಳ ಖಾಸಗಿ ಪಾಲು! ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು! ಬೆಂಗಳೂರು ಸರ್ಕಾರಿ ಜಮೀನು ಅಕ್ರಮ
ಬೆಂಗಳೂರು: ಬೆಂಗಳೂರು ಸರ್ಕಾರಿ ಜಮೀನು ಅಕ್ರಮ: ಸಿಲಿಕಾನ್ ಸಿಟಿಯ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅತ್ಯಮೂಲ್ಯ ಸರ್ಕಾರಿ ಸ್ವತ್ತನ್ನು ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ದುರಸ್ತ್ ಹಾಗೂ ಪೋಡಿ ಮಾಡಿಕೊಟ್ಟಿರುವ ಭಾರಿ ಹಗರಣವೊಂದು ಬೆಳಕಿಗೆ ಬಂದಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಕೆಯಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಆಡಳಿತ ಪಕ್ಷದ ಮಾಜಿ ನಾಯಕರು ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷರಾದ ರಮೇಶ್ ಎನ್. ಆರ್. ಅವರು ಈ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ.
ಏನಿದು ₹100 ಕೋಟಿ ಭೂ ಹಗರಣ?:
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಗೆ ಒಳಪಡುವ ಕುರುಬರ ಹಳ್ಳಿ ಗ್ರಾಮದ ಸರ್ವೆ ನಂ: 158 ರಲ್ಲಿ ಒಟ್ಟು 130.29 ಎಕರೆ ವಿಸ್ತೀರ್ಣದ ಸ್ವತ್ತು ಸಂಪೂರ್ಣವಾಗಿ “ಸರ್ಕಾರಿ ಗೋಮಾಳ” ಪ್ರದೇಶವಾಗಿರುತ್ತದೆ. ಪ್ರಸ್ತುತ ಇಲ್ಲಿನ ಮಾರುಕಟ್ಟೆ ದರದಂತೆ ಇಡೀ ಜಮೀನಿನ ಬೆಲೆ ₹800 ಕೋಟಿಗೂ ಅಧಿಕವಾಗಿದೆ. ಇಂತಹ ಜಮೀನಿನಲ್ಲಿ ಸುಮಾರು 10 ಎಕರೆ 20 ಗುಂಟೆ (10:20 ಎಕರೆ) ವಿಸ್ತೀರ್ಣದ, ಕನಿಷ್ಠ ₹100 ಕೋಟಿಗೂ ಅಧಿಕ ಮೌಲ್ಯದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಿಯಮಗಳ ಉಲ್ಲಂಘನೆ ಮತ್ತು ಅಧಿಕಾರಿಗಳ ಶಾಮೀಲು:
“ದಿ ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್, 1964” ನಿಯಮಗಳ ಪ್ರಕಾರ, ಮಂಜೂರಾದ ಜಮೀನನ್ನು ಕನಿಷ್ಠ 15 ವರ್ಷ ಮಾರಾಟ ಮಾಡುವಂತಿಲ್ಲ ಮತ್ತು ಬಿಬಿಎಂಪಿ ಗಡಿಯಿಂದ 18 ಕಿ.ಮೀ ಒಳಗಿರುವ ಸರ್ಕಾರಿ ಸ್ವತ್ತನ್ನು ಗ್ರಾಂಟ್ ಮಾಡುವಂತಿಲ್ಲ. ಆದರೂ ಈ ನಿಯಮಗಳನ್ನು ಗಾಳಿಗೆ ತೂರಿ, ಪ್ರಭಾವಿ ವ್ಯಕ್ತಿ ರಾಧಾ ಬಾಲಕೃಷ್ಣ ಹಾಗೂ ಇತರರ ಹೆಸರಿಗೆ ಅಕ್ರಮವಾಗಿ ಪಹಣಿಗಳನ್ನು ಕೂರಿಸಲಾಗಿದೆ.
ಈ ಅಕ್ರಮದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಶೇಷ ತಹಸೀಲ್ದಾರ್ ಆಗಿದ್ದ ಕೃಷ್ಣಮೂರ್ತಿ, ರಾಜಸ್ವ ನಿರೀಕ್ಷಕ ಮೊನಿಷ್, ಗ್ರಾಮ ಲೆಕ್ಕಿಗ ನಂಜೇಗೌಡ, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ (D.D.L.R.) ಸುಜಯ್ ಹಾಗೂ ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ್ ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಎ. ಟಿ. ರಾಮಸ್ವಾಮಿ ಆಯೋಗದ ವರದಿಯ ನಿಯಮಗಳನ್ನೂ ಇಲ್ಲಿ ಮೀರಿರುವುದು ಕಂಡುಬಂದಿದೆ.
