ಬೆಂಗಳೂರಿಗರೇ ಗಮನಿಸಿ: ಕಾವೇರಿ ನೀರು ಸರಬರಾಜು ಹಂತ-1ರ ಮರಾಮತ್ತು ಕಾಮಗಾರಿ; ದಕ್ಷಿಣ ಹಾಗೂ ಕೇಂದ್ರ ಬೆಂಗಳೂರಿನಲ್ಲಿ ಇಂದು ನೀರು ಪೂರೈಕೆ ವ್ಯತ್ಯಯ!
- ಬೆಂಗಳೂರು ಕಾವೇರಿ ನೀರು ಪೂರೈಕೆ ವ್ಯತ್ಯಯ ಸೆಪ್ಟೆಂಬರ್ 22 (Bengaluru Cauvery Water Supply Disruption September 22 Kannada)
ಬೆಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ 1ನೇ ಹಂತದ ಜಲರೇಚಕ ಯಂತ್ರಾಗಾರದಲ್ಲಿ ತುರ್ತು ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಇಂದು ನಗರದ ಹಲವೆಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ (BWSSB) ತಿಳಿಸಿದೆ.
ಪಂಪ್ ಸಂಖ್ಯೆ-4ರ ಐಸೊಲೇಷನ್ ಸ್ಲೂಯಿಸ್ ವಾಲ್ವ್ ಬೈಪಾಸ್ (Isolation Sluice Valve Bypass) ಹಾಗೂ ಎಕ್ಸ್‌ಪಾನ್ಷನ್ ಬೆಲ್ಲೋ (Expansion Bellow) ತುರ್ತು ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಜಲರೇಚಕ ಯಂತ್ರಾಗಾರಗಳನ್ನು ಇಂದು ಬೆಳಿಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಒಟ್ಟು 6 ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು:
- ದಕ್ಷಿಣ ಬೆಂಗಳೂರು ವಲಯ: ಕದಿರೇನಹಳ್ಳಿ, ಮಿನಾಜ್ ನಗರ, ಗಂಗಾಧರ್ ನಗರ, ಪ್ರಗತಿಪುರ, ಪದ್ಮನಾಭನಗರ, ಆರ್.ಕೆ. ಲೇಔಟ್, ಚಿಕ್ಕಲ್ಲಸಂದ್ರ, ಕುಮಾರಸ್ವಾಮಿ ಲೇಔಟ್ (1 ಮತ್ತು 2ನೇ ಹಂತ), ಇಸ್ರೋ ಲೇಔಟ್, ಟೀಚರ್ಸ್ ಕಾಲೋನಿ, ಯೆಚೇನಹಳ್ಳಿ, ಕನಕಪುರ ಮುಖ್ಯ ರಸ್ತೆ, ಪೂರ್ಣಪ್ರಜ್ಞಾ ಲೇಔಟ್, ಉತ್ತರಾಹಳ್ಳಿ ಹಾಗೂ ಬನಶಂಕರಿ 5ನೇ ಹಂತ.
- ಮಧ್ಯ ಹಾಗೂ ಇತರೆ ಪ್ರದೇಶಗಳು: ಚಾಮರಾಜಪೇಟೆ, ಬಸವನಗುಡಿ, ಹನುಮಂತನಗರ, ಗಿರಿನಗರ, ಶ್ರೀನಗರ, ಜಯನಗರ (4ನೇ ಮತ್ತು 4T ಬ್ಲಾಕ್), ತಿಲಕ್ ನಗರ, ಮದ್ವನ ಪಾರ್ಕ್, ಹೊಂಬೇಗೌಡನಗರ, ಲಕ್ಕಸಂದ್ರ, ಆಡುಗೋಡಿ, ಮಡಿವಾಳ, ಕೋರಮಂಗಲ (2, 4, 5, 6, 7 ಮತ್ತು 8ನೇ ಬ್ಲಾಕ್), ಶಾಂತಿನಗರ, ಲಾಂಗ್‌ಫೋರ್ಡ್ ಟೌನ್, ಎಂ.ಜಿ. ರಸ್ತೆ, ರಿಚ್ಮಂಡ್ ಟೌನ್, ನೀಲಸಂದ್ರ, ಆಸ್ಟಿನ್ ಟೌನ್, ವಿವೇಕ್ ನಗರ, ದೊಮ್ಮಲೂರು, ಉಲ್ಸೂರು, ಜೋಗುಪಾಳ್ಯ ಹಾಗೂ ಕೇಂಬ್ರಿಡ್ಜ್ ಲೇಔಟ್.
ಸಾರ್ವಜನಿಕರಿಗೆ ಮನವಿ:
ಸಂಬಂಧಿತ ಪ್ರದೇಶಗಳ ನಾಗರಿಕರು ಮುಂಜಾಗ್ರತಾ ಕ್ರಮವಾಗಿ ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿದೆ. ಮರಾಮತ್ತು ಕಾರ್ಯ ಮುಗಿದ ತಕ್ಷಣ ಎಂದಿನಂತೆ ನೀರು ಸರಬರಾಜು ಮರುಸ್ಥಾಪಿಸಲಾಗುವುದು.
