ಬೀದಿಯಲ್ಲಿ ಮಕ್ಕಳೊಂದಿಗೆ ನಡುಗುತ್ತಾ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಕಣ್ಣೀರು ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲವೇ? – ಟಿ.ಎ. ಶರವಣ ಬೇಸರ
ಟಿ ಎ ಶರವಣ ಆಶಾ ಕಾರ್ಯಕರ್ತೆಯರ ಧರಣಿ ಅನಿಸಿಕೆ (TA Sharavana Asha Workers Protest Anisike Kannada)
“ನಮ್ಮ ಸಮಾಜದ ಜೀವಾಳವಾಗಿ, ಗ್ರಾಮೀಣ ಬದುಕಿನ ಆಶಾಕಿರಣವಾಗಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು ಇಂದು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಸಿಲು-ಚಳಿಯೆನ್ನದೆ ಧರಣಿ ನಡೆಸುವ ಸ್ಥಿತಿ ಬಂದಿರುವುದು ನಿಜಕ್ಕೂ ಕಣ್ಣೀರ ತರಿಸುವ ಸಂಗತಿ. ಅದರಲ್ಲಿಯೂ ಗಡಗಡ ನಡುಗುವ ಈ ಚಳಿಯಲ್ಲಿ ತಾಯಂದಿರು ತಮ್ಮ ಪುಟ್ಟ ಮಕ್ಕಳನ್ನು, ಹಸುಗೂಸುಗಳನ್ನು ಜೊತೆಯಲ್ಲಿಟ್ಟುಕೊಂಡು ಬೀದಿಯಲ್ಲಿ ಕುಳಿತಿರುವುದನ್ನು ನೋಡಿದರೆ, ಈ ಸರ್ಕಾರದ ಕರುಳು ಕರಗುವುದಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ” ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ತೀವ್ರ ಆಕ್ರೋಶ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.
ಹಳ್ಳಿಗಾಡಿನ ಜನರಲ್ಲಿ ಆರೋಗ್ಯದ ಅರಿವು ಮೂಡಿಸುವುದರಿಂದ ಹಿಡಿದು ಪ್ರತಿಯೊಬ್ಬರ ಆರೋಗ್ಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಈ ಮಹಿಳೆಯರ ಬದುಕು ಇಷ್ಟು ಅಯೋಮಯವಾಗಿರುವುದು ದುರದೃಷ್ಟಕರ. ತಮ್ಮ ವೈಯಕ್ತಿಕ ಬದುಕನ್ನೇ ತ್ಯಾಗ ಮಾಡಿ ದುಡಿಯುವ ಇವರ ಬೇಡಿಕೆಗಳನ್ನು ಈಡೇರಿಸುವ ಬದಲು, ಸರ್ಕಾರ ಮೌನ ವಹಿಸಿರುವುದು ಯಾವ ನ್ಯಾಯ? ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರದ ಮೌನ ಅಮಾನವೀಯ:
“ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಈ ಅಬಲೆಯರ ಬಳಿಗೆ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಹೋಗಿ ಅವರ ನೋವು-ನುಡಿಗಳನ್ನು ಆಲಿಸಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆ ಹಾಗೂ ಸಂವೇದನಾಶೂನ್ಯ ಆಡಳಿತವು ಇದರ ಅಸಡ್ಡೆಗೆ ಹಿಡಿದ ಕನ್ನಡಿಯಾಗಿದೆ. ಏನಾದರೂ ಮಾಡಿಕೊಳ್ಳಲಿ ಎಂಬ ಧೋರಣೆ ತಾಳುವುದು ಒಳಿತಲ್ಲ” ಎಂದು ಶರವಣ ಅವರು ತೀವ್ರವಾಗಿ ಟೀಕಿಸಿದ್ದಾರೆ.
ಚಳಿಯಲ್ಲಿ ಮಕ್ಕಳೊಂದಿಗೆ ಕಷ್ಟ ಅನುμಟಿಸುತ್ತಿರುವ ಆಶಾ ಕಾರ್ಯಕರ್ತೆಯರ ಧ್ವನಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು. ಇನ್ನಷ್ಟು ವಿಳಂಬ ಮಾಡದೆ, ಸರ್ಕಾರದ ಪ್ರತಿನಿಧಿಗಳನ್ನು ಪ್ರತಿಭಟನಾ ಸ್ಥಳಕ್ಕೆ ಕಳುಹಿಸಿ ಅವರೊಂದಿಗೆ ಮಾತುಕತೆ ನಡೆಸಿ, ನ್ಯಾಯಯುತ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಅವರು ಬಲವಾಗಿ ಆಗ್ರಹಿಸಿದ್ದಾರೆ.
