“ಧೃತಿ” ಹಾಗೂ “ಸಖೀಗೀತ” ವೇದಿಕೆಗೆ ಮಹಿಳಾ ಬರಹಗಾರರ ಆಹ್ವಾನ: ನಿಮ್ಮೂರಿನ ಸೊಗಡನ್ನು ಹಂಚಿಕೊಳ್ಳಿ, ಆಕರ್ಷಕ ಗಿಫ್ಟ್ ಹ್ಯಾಂಪರ್ ಗೆಲ್ಲಿ!
ಹೇಗಿದ್ದೀರಾ ಎಲ್ರೂ…
ನಾವು ಮಹಿಳೆಯರು ಸದಾ ಹೊಸತನಕ್ಕಾಗಿ ತುಡಿತಾ ಇರ್ತೀವಿ. ಅದು ಈಗ ಸೋಶಿಯಲ್ ಮೀಡಿಯಾದಲ್ಲೂ ಅನುಭವಕ್ಕೆ ಬರ್ತಿದೆ. ಸ್ಕ್ರೀನ್ ಟೈಂ ಕೂಡ ಈಗ ಬೋರ್ ಹೊಡೆಸಲು ಶುರುವಾಗಿದೆ. ಅದದೇ ಚರ್ಚೆ ವಿಷಯಗಳನ್ನ ಎಷ್ಟು ಅಂತ ನೋಡೋದು ಅಂತ ನಿಮಗೂ ಅನ್ನಿಸಿರಬೇಕು ಅಲ್ವಾ?
ಈಗ ಯಾವುದಾದರೂ ಮಾಹಿತಿ ಬೇಕಿದ್ದರೆ ಯಾರನ್ನೂ ಕೇಳುವ ಅವಶ್ಯಕತೆಯೇ ಇಲ್ಲ, ಎಲ್ಲಾ ಬೆರಳ ತುದಿಯಲ್ಲೇ ಸಿಗುತ್ತದೆ ಅನ್ನುವುದು ನಿಜವಾದರೂ ಅದರಲ್ಲಿ ಏನೋ ಕೊರತೆ ಇದೆ ಅನ್ನಿಸೋದಿಲ್ಲವೇ? ನಮ್ಮದು, ನಮ್ಮತನ, ನಮ್ಮ ಸಂಸ್ಕೃತಿಯ, ಆಚಾರ ವಿಚಾರಗಳ ಸೊಗಡು ಇನ್ನು ಎಐ (AI) ತಂತ್ರಜ್ಞಾನದಿಂದ ದೂರವೇ ಇದೆ.
ವಿಶೇಷವಾಗಿ ಪ್ರವಾಸ, ಪ್ರಯಾಣದ ವಿಷಯಕ್ಕೆ ಬಂದರೆ ಈ ಕೊರತೆ ಎದ್ದು ಕಾಣುತ್ತದೆ. ಭಾರತೀಯ ಹೆಣ್ಣು ಸ್ವतಂತ್ರವಾಗಿ ಪ್ರವಾಸ ಮಾಡಲು ಆಧುನಿಕ ಜಗತ್ತು ಬೆರಳ ತುದಿಯಲ್ಲೇ ಎಲ್ಲವನ್ನೂ ಕೊಟ್ಟಿದ್ದರೂ, ಒಂದು ಸರಳ ಆಪ್ತತೆಯ ಪರಿಸರ, ಮನೆಯಂತಹ ಅನುಕೂಲ, “ತನ್ನವರೇ ಇವರು” ಎನ್ನಿಸುವಂತಹ ಜನರ ಭೇಟಿ—ಇವೆಲ್ಲದರ ಕೊರತೆ ಇನ್ನೂ ಇದೆ. ಕೂತಲ್ಲೇ ಸ್ಟಾರ್ ಹೋಟೆಲ್, ಫ್ಲೈಟ್ ಟಿಕೆಟ್, ರೆಸಾರ್ಟ್ ಬುಕ್ ಮಾಡುವುದು ಸುಲಭ. ಮೂವತ್ತು ನಿಮಿಷದಲ್ಲಿ ಪೀಜಾ, ಕೇಕ್, ಇಟಾಲಿಯನ್, ಮೆಕ್ಸಿಕನ್, ಚೈನೀಸ್ ಫುಡ್ ಬೇಕಾದ್ದು ತರಿಸಬಹುದಾದರೂ, ತನ್ನ ಆರೋಗ್ಯಕ್ಕೆ ಪೂರಕವಾದ ಸರಳ ಆಹಾರವನ್ನು ಅನುಕೂಲಕರ ಬೆಲೆಯಲ್ಲಿ ಹುಡುಕಿಕೊಳ್ಳುವುದು ಇಂದಿಗೂ ಕಷ್ಟವೇ.
ಇದೆಲ್ಲಾ ಯೋಚಿಸುವಾಗ ನಮಗೆ ಅನ್ನಿಸಿದ್ದು ಒಂದೇ—ನಮ್ಮ ‘ಧೃತಿ’ಯ ಮಹಿಳೆಯರು ಖಂಡಿತವಾಗಿ ಈ ಖಾಲಿತನವನ್ನು ತುಂಬಲು ಸಶಕ್ತರು!
ಅದಕ್ಕಾಗಿ ನೀವೇನೂ ಹೆಚ್ಚೇನು ಮಾಡಬೇಕಿಲ್ಲ. ಈಗಾಗಲೇ ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಹೇಳುವ ಅವಶ್ಯಕತೆಯೂ ಇಲ್ಲ. ನಿಮ್ಮ ಸುತ್ತಮುತ್ತಲಿರುವ, ಗೂಗಲ್‌ಗೂ ಸಿಗದ ಅಪರೂಪದ ಸ್ಥಳೀಯ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡರೆ ಸಾಕು.
ನೀವು ಯಾವ ವಿಷಯಗಳ ಬಗ್ಗೆ ಲೇಖನ ಬರೆಯಬಹುದು?
- ಸುರಕ್ಷಿತ ತಾಣಗಳು & ಹೋಂಸ್ಟೇಗಳು: ಮಹಿಳೆಯರು ಒಬ್ಬರೇ ಧೈರ್ಯವಾಗಿ, ಸುರಕ್ಷಿತವಾಗಿ ಉಳಿದುಕೊಳ್ಳಬಲ್ಲಂತಹ ಸಣ್ಣ ಮಟ್ಟದ ಸ್ಥಳೀಯ ಮನೆಗಳು ಅಥವಾ ಹೋಂಸ್ಟೇಗಳ ಮಾಹಿತಿ.
- ಆರೋಗ್ಯಕರ ಆಹಾರದ ಜಾಗಗಳು: ಪ್ರವಾಸದ ವೇಳೆ ಸಿಗುವ, ಆರೋಗ್ಯಕ್ಕೆ ಪೂರಕವಾದ ದಿನನಿತ್ಯದ ಸರಳ ಆಹಾರ ಮತ್ತು ಮನೆಯೂಟ ಸಿಗುವ ಸ್ಥಳಗಳು.
- ಸ್ಥಳೀಯ ಕಲೆ ಮತ್ತು ವೈದ್ಯ ಪದ್ಧತಿ: ಹಳೇ ಕಾಲದಿಂದ ಗಿಡಮೂಲಿಕೆ ಉಪಯೋಗಿಸಿ ಔಷಧಿ ಮಾಡುವ ನಾಟಿ ವೈದ್ಯರ ಮಾಹಿತಿಗಳು, ಕರಕುಶಲ ವಸ್ತ್ರಗಳನ್ನು ತಯಾರಿಸುವವರು ಹಾಗೂ ಸ್ಥಳೀಯ ಕಲಾಕಾರರ ಪರಿಚಯ.
- ಆಫ್‌ಬೀಟ್ ಪ್ರವಾಸಿ ತಾಣಗಳು: ನಿಮ್ಮ ಸುತ್ತಮುತ್ತಲಿರುವ, ಜನರಿಗೆ ಅಷ್ಟಾಗಿ ತಿಳಿಯದ ಸುಂದರ ಪ್ರೇಕ್ಷಣೀಯ ಸ್ಥಳಗಳ ವಿವರ.
ಬರಹಗಾರರಿಗೆ ವಿಶೇಷ ಪ್ರೋತ್ಸಾಹ!
ಅತ್ಯುತ್ತಮ ವಿವರಗಳು ಮತ್ತು ನಿಖರ ಮಾಹಿತಿ ಉಳ್ಳ ಲೇಖನಗಳನ್ನು ಬರೆದು ಕಳುಹಿಸುವ ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿ ಯಾವ ಲೇಖನ ಅತಿ ಹೆಚ್ಚು ಓದುಗರನ್ನ ಪಡೆಯುತ್ತದೆಯೋ ಆ ಲೇಖನದ ಬರಹಗಾರರಿಗೆ “ಧೃತಿ” ಹಾಗೂ “ಸಖೀಗೀತ” ವೇದಿಕೆಯಿಂದ ಒಂದು ಸುಂದರವಾದ ಗಿಫ್ಟ್ ಹ್ಯಾಂಪರ್ (Gift Hamper) ಅನ್ನು ನಿಮ್ಮ ಮನೆಗೆ ಕಳುಹಿಸಿಕೊಡಲಾಗುತ್ತದೆ.
ನಮ್ಮ ಆಶಯ ಇಷ್ಟೇ: ನಿಮ್ಮ ಈ ಸ್ಥಳೀಯ ಮಾಹಿತಿ ಹಂಚಿಕೆಯಿಂದ ಪ್ರತಿಯೊಬ್ಬ ಮಹಿಳೆಗೂ ಅನುಕೂಲ ಆಗಲಿ. ಹೆಣ್ಣುಮಕ್ಕಳು ಹೆಚ್ಚು ಆರ್ಥಿಕ ಹೊರೆಯಾಗದಂತೆ ಸಣ್ಣ ಪ್ರವಾಸವನ್ನು ನಿಶ್ಚಿಂತೆಯಿಂದ ಮಾಡುವಂತಾಗಲಿ. ಹೆಚ್ಚು ಹೆಚ್ಚು ಜಾಗಗಳನ್ನು ನೋಡುತ್ತಾ ಪರಸ್ಪರ ಬೆಳೆಯಲು ಈ ವೇದಿಕೆ ಬಳಕೆಯಾಗಲಿ.
ನಿಮ್ಮ ಸುತ್ತಮುತ್ತಲಿನ ಅಪರೂಪದ ವಿವರಗಳನ್ನು ನಿಮ್ಮದೇ ಸುಂದರ ಸಾಲುಗಳಲ್ಲಿ ಬರೆದು ನಮಗೆ ಕಳುಹಿಸಿಕೊಡಿ. ನಿಮ್ಮ ಬರಹವನ್ನು ಓದಲು ಸಾವಿರಾರು ಓದುಗರು ಕಾಯುತ್ತಿದ್ದಾರೆ ಎನ್ನುವ ಭರವಸೆ ನಮಗಿದೆ.
ಲೇಖನಗಳನ್ನು ಕಳುಹಿಸಬೇಕಾದ ಇಮೇಲ್ ವಿಳಾಸ : sakhigeethapatrike@gmail.com
