ಸಂಪಾದಕೀಯ: ‘ಅಮೆರಿಕಾ ಅಮೆರಿಕಾ 2’ ಮತ್ತು ಸಡಿಲವಾಗುತ್ತಿರುವ ಇವತ್ತಿನ ಸಂಬಂಧಗಳು; ನಾಗತಿಹಳ್ಳಿ ಮೇಷ್ಟ್ರ ಹೊಸ ಪಯಣ!
- ಅಮೆರಿಕಾ ಅಮೆರಿಕಾ 2 ಸಿನಿಮಾ ವಿಮರ್ಶೆ ಸಂಪಾದಕೀಯ (America America 2 Review Nagathihalli Chandrashekhar Kannada Editorial)
ನಾಗತಿಹಳ್ಳಿ ಮೇಷ್ಟ್ರು ಎಂದರೆ ನಮ್ಮಂತಹ ಎಷ್ಟೋ ಜನರಿಗೆ ವೀಸಾ ಇಲ್ಲದೆ, ಪಾಸ್ಪೋರ್ಟ್ ಇಲ್ಲದೆ ಬೆಳ್ಳಿತೆರೆಯ ಮೇಲೆ ವಿದೇಶಗಳನ್ನು ಪರಿಚಯಿಸಿದವರು. ನಾವು ಬಸ್ಸುಗಳಲ್ಲಿ, ಸೈಕಲ್ಗಳಲ್ಲಿ ಓಡಾಡಿಕೊಂಡಿದ್ದ ಆ ಕಾಲಘಟ್ಟದಲ್ಲಿ, ತಮ್ಮ ಸಿನಿಮಾಗಳ ಮೂಲಕ ಪರದೇಶದ ಅಗಲವಾದ ರಸ್ತೆಗಳು, ಗಗನಚುಂಬಿ ಕಟ್ಟಡಗಳು ಮತ್ತು ಕಾರುಗಳನ್ನು ಕಣ್ಮುಂದೆ ತಂದು ನಮ್ಮ ಕಲ್ಪನಾ ಲೋಕವನ್ನು ವಿಸ್ತರಿಸಿದವರು. ಮೂರು ದಶಕಗಳ ಹಿಂದೆ ಬಂದ ‘ಅಮೆರಿಕಾ ಅಮೆರಿಕಾ’ ಕೇವಲ ಒಂದು ಸಿನಿಮಾವಾಗಿರದೆ, ಕನ್ನಡಿಗರ ಭಾವನಾತ್ಮಕ ನೆನಪಾಗಿ ಉಳಿದ ಮೈಲಿಗಲ್ಲು. ಈಗ ಮೂರು ದಶಕಗಳ ನಂತರ ಅದೇ ಹೆಸರಿನೊಂದಿಗೆ ನಾಗತಿಹಳ್ಳಿ ಅವರು ಮತ್ತೆ ಬಂದಿದ್ದಾರೆ. ಆದರೆ ಇದು ಹಳೆಯ ಸೂರ್ಯ, ಚಂದ್ರ, ಭೂಮಿಯ ಕಥೆಯ ಮುಂದುವರಿಕೆಯಲ್ಲ; ಬದಲಿಗೆ ಇವತ್ತಿನ ಕಾಲ, ಹೊಸ ತಲೆಮಾರು ಮತ್ತು ಸಹನಾ ವಿಜಯಕುಮಾರ್ ಅವರ ‘ಕ್ಷಮೆ’ ಕಾದಂಬರಿಯನ್ನು ಆಧರಿಸಿದ ಹೊಸ ಆಲೋಚನೆ.
ಇಂದಿನ ಕಾಲಘಟ್ಟದಲ್ಲಿ ಗಂಭೀರ ಕಾದಂಬರಿಗಳನ್ನು ಸಿನಿಮಾ ಮಾಧ್ಯಮಕ್ಕೆ ಅಳವಡಿಸುವ ಸಾಹಸ ಮಾಡುವವರೇ ಇಲ್ಲವಾಗಿರುವಾಗ, ನಾಗತಿಹಳ್ಳಿ ಅವರ ಈ ಪ್ರಯತ್ನ ನಿಜಕ್ಕೂ ಧೈರ್ಯದ್ದು. ಈ ಕಥೆಯನ್ನು ಮೇಲ್ನೋಟಕ್ಕೆ ಪತಿ, ಪತ್ನಿ ಮತ್ತು ಇನ್ನೊಬ್ಬನ ನಡುವಿನ ಪ್ರೇಮ ತ್ರಿಕೋನ ಎಂದು ಸರಳೀಕರಿಸಿಬಿಟ್ಟರೆ ಅದು ಕಥೆಗೆ ಮಾಡುವ ಅನ್ಯಾಯವಾಗುತ್ತದೆ. ಇದು ವಾಸ್ತವದಲ್ಲಿ ಮದುವೆ, ನಿರೀಕ್ಷೆಗಳು ಮತ್ತು ಇಂದಿನ ದಿನಗಳಲ್ಲಿ ಸಡಿಲವಾಗುತ್ತಿರುವ ಸಂಬಂಧಗಳೊಳಗಿನ ಸೂಕ್ಷ್ಮ ಬಿರುಕುಗಳ ಕಥೆ.
ಕಾಲ ಬದಲಾಗಿದೆ; ಕಾಲದ ಜೊತೆಗೆ ಸಂಬಂಧಗಳ ವ್ಯಾಖ್ಯಾನಗಳೂ ಬದಲಾಗಿವೆ. ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎಂದೋ, ‘ತಾಳಿ ಕಟ್ಟಿದ ಮೇಲೆ ಎಲ್ಲವನ್ನೂ ಸಹಿಸಿಕೊಂಡು ಹೊಂದಾಣಿಕೆ ಮಾಡಿಕೊಂಡೇ ಸಾಯಬೇಕು’ ಎಂದೋ ಬದುಕುವ ಕಾಲಘಟ್ಟ ಇದಲ್ಲ. ಆಧುನಿಕ ಬದುಕಿನಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ನಿರೀಕ್ಷೆಗಳು ಮತ್ತು ಸ್ವಂತಿಕೆಯ ಹುಡುಕಾಟಗಳು ದಾಂಪತ್ಯದ ಚೌಕಟ್ಟನ್ನು ಮರುಪರಿಶೀಲನೆಗೆ ಒಡ್ಡುತ್ತಿವೆ. ತಾಯಿಗೆ ಮಾತ್ರ ಗೊತ್ತು ತನ್ನ ಮಗುವಿನ ತಂದೆ ಯಾರು ಎಂಬ ಲೋಕೋಕ್ತಿಯಂತೆ, ಪ್ರತಿಯೊಂದು ದಾಂಪತ್ಯದ ನಾಲ್ಕು ಗೋಡೆಗಳ ನಡುವೆ ಹೊರಜಗತ್ತಿಗೆ ಎಂದಿಗೂ ಕಾಣಿಸದ, ಬಿಡಿಸಲಾಗದ ಕೆಲವು ಸತ್ಯಗಳಿರುತ್ತವೆ. ಆ ಒಳಗಿನ ಗೊಂದಲಗಳನ್ನು, ಸಂಘರ್ಷಗಳನ್ನು ಯಾವುದೇ ಅಬ್ಬರದ ಉಪದೇಶಗಳಿಲ್ಲದೆ ಕೇವಲ ದೃಶ್ಯಗಳ ಮೂಲಕ ಕನ್ನಡಿಗರಿಗೆ ದಾಟಿಸಲು ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ತಾರಾಗಣದಲ್ಲಿ ಪೃಥ್ವಿ ಅಂಬಾರ್ ಯಾವುದೇ ಪಾತ್ರಕ್ಕೂ ಸಹಜವಾಗಿ ಜೀವ ತುಂಬುವ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಶಾನ್ವಿ ಶ್ರೀವಾಸ್ತವ ಅವರ ಪರದೆಯ ಮೇಲಿನ ಉಪಸ್ಥಿತಿ ಮತ್ತು ಭಾವಪೂರ್ಣ ನಟನೆ ಮೆಚ್ಚುಗೆಗೆ ಪಾತ್ರವಾಗುತ್ತದೆ. ನಿರೂಪ್ ಭಂಡಾರಿ ಅವರ ಆಳ್ತನ ಇಷ್ಟವಾದರೂ, ಕೆಲವೆಡೆ ಅವರ ಅಭಿನಯದಲ್ಲಿ ಇನ್ನೂ ಹೆಚ್ಚಿನ ಆಳದ ಅಗತ್ಯವಿತ್ತು ಎನಿಸುತ್ತದೆ. ಇನ್ನು ಮಂಡ್ಯ ರಮೇಶ್ ಅವರು ಕಡಿಮೆ ಮಾತುಗಳಲ್ಲೇ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ.
ನಾಗತಿಹಳ್ಳಿ ಅವರ ಸಿನಿಮಾಗಳಲ್ಲಿ ವಿದೇಶ ಕೇವಲ ಸುಂದರ ಹಿನ್ನೆಲೆಯಾಗಿರುವುದಿಲ್ಲ; ಅದೊಂದು ಜೀವಂತ ಪಾತ್ರವಾಗಿ ಕಥೆಯ ಜೊತೆಗೇ ಹೆಣೆದುಕೊಂಡಿರುತ್ತದೆ. ಈ ಚಿತ್ರದಲ್ಲೂ ಸಿಯಾಟಲ್ ಸುತ್ತಮುತ್ತಲಿನ ಪರಿಸರ ಕಥೆಗೆ ಹೊಸ ತಾಜಾತನ ತಂದುಕೊಟ್ಟಿದೆ. ಮನೋಮೂರ್ತಿ ಅವರ ಸಂಗೀತ ನಾಗತಿಹಳ್ಳಿ ಅವರ ದೃಶ್ಯ ವೈಭವಕ್ಕೆ ಹಳೆಯ ಗತಕಾಲದ ಮಾಧುರ್ಯವನ್ನು ಬೆರೆಸಿದೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿ, ಇನ್ನು ಕೆಲವು ಪ್ರಶ್ನೆಗಳನ್ನು ಪ್ರೇಕ್ಷಕರ ವಿವೇಚನೆಗೇ ಬಿಟ್ಟುಹೋಗುವ ಈ ಚಿತ್ರ ಕೇವಲ ಹೊರಗಿನ ಅಮೆರಿಕಾವನ್ನು ತೋರಿಸುವುದಿಲ್ಲ; ಬದಲಿಗೆ ನಮ್ಮೊಳಗಿನ ಸಂಬಂಧಗಳ ಮೌಲ್ಯಗಳನ್ನು ಅವಲೋಕಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ.
