ಸಂಗೀತ ನಿರ್ದೇಶಕ ಗುರುಕಿರಣ್ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ನಿಧನ: ಕಂಬನಿ ಮಿಡಿದ ಸ್ಯಾಂಡಲ್‌ವುಡ್!
ಗುರುಕಿರಣ್ ತಾಯಿ ರತ್ನಕಾಂತಿ ಶೆಟ್ಟಿ ನಿಧನ; ಕನ್ನಡ ಚಿತ್ರರಂಗದ ಖ್ಯಾತ ಹಾಗೂ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಅವರ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ಗುರುಕಿರಣ್ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ತಮ್ಮ ಪ್ರೀತಿಯ ತಾಯಿಯ ನಿಧನದ ಕುರಿತು ಸಂಗೀತ ನಿರ್ದೇಶಕ ಗುರುಕಿರಣ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಭಾವುಕರಾಗಿ ಹಂಚಿಕೊಂಡಿದ್ದಾರೆ.
‘ನಮ್ಮ ಕುಟುಂಬದ ಶಕ್ತಿ, ಪ್ರೀತಿಯ ಬೆಳಕಾಗಿದ್ದರು’ – ಗುರುಕಿರಣ್ ಭಾವುಕ ಸಾಲುಗಳು:
ತಾಯಿಯ ಅಗಲಿಕೆಯ ಬಗ್ಗೆ ಬರೆದುಕೊಂಡಿರುವ ಗುರುಕಿರಣ್, “ತುಂಬಾ ಭಾರವಾದ ಹೃದಯದಿಂದ ನಮ್ಮ ಪ್ರೀತಿಯ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರ ಅಗಲಿಕೆಯ ದುಃಖದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಅವರು ನಮ್ಮ ಇಡೀ ಕುಟುಂಬದ ಹೃದಯ ಬಡಿತವಾಗಿದ್ದರು. ನಮ್ಮ ಶಕ್ತಿ, ಪ್ರೀತಿ ಮತ್ತು ಉಷ್ಣತೆಯ ಮೂಲವಾಗಿದ್ದರು. ಅವರ ಕರುಣೆ, ಸದಾ ಜೊತೆಗಿದ್ದ ಅನುಕಂಪದ ಉಪಸ್ಥಿತಿ ಮತ್ತು ಅವರು ಮಾಡಿದ ಅಪಾರ ತ್ಯಾಗಗಳು ಇಂದು ನಾವು ಈ ಹಂತದಲ್ಲಿದ್ದು ಸಾಧಿಸಲು ಕಾರಣವಾಗಿವೆ” ಎಂದು ಕಂಬನಿ ಮಿಡಿದಿದ್ದಾರೆ.
ಸ್ಯಾಂಡಲ್‌ವುಡ್ ಗಣ್ಯರ ಸಂತಾಪ:
ಗುರುಕಿರಣ್ ಅವರ ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ಗಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ. ರತ್ನಕಾಂತಿ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಗುರುಕಿರಣ್ ಕುಟುಂಬಕ್ಕೆ ದೇವರು ನೀಡಲಿ ಎಂದು ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
