ಸುದ್ದಿ ಜಗತ್ತು

ಪಿಎಂ ಕಿಸಾನ್ ಫಲಾನುಭವಿಗಳಿಗೆ ಎಚ್ಚರಿಕೆ: ಮೊಬೈಲ್‌ನಲ್ಲೇ ಇ-ಕೆವೈಸಿ ಮಾಡಿಕೊಳ್ಳಿ! ಸೆಪ್ಟೆಂಬರ್ 30 ಕೊನೆಯ ದಿನ, ಇಲ್ಲದಿದ್ದರೆ ಮುಂದಿನ ಕಂತು ಕಟ್!

​ಪಿಎಂ ಕಿಸಾನ್ ಮೊಬೈಲ್ ಇ ಕೆವೈಸಿ (PM Kisan eKYC Mobile Face Authentication In Kannada)

ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ವಾರ್ಷಿಕ ₹6,000 ಆರ್ಥಿಕ ನೆರವು ಪಡೆಯುತ್ತಿರುವ ರಾಜ್ಯದ ಲಕ್ಷಾಂತರ ರೈತರಿಗೆ ಕೇಂದ್ರ ಕೃಷಿ ಸಚಿವಾಲಯ ಮಹತ್ವದ ಗಡುವು ನೀಡಿದೆ. ಯೋಜನೆಯ ಮುಂದಿನ ಕಂತಿನ ಹಣ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಬೇಕಾದರೆ ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ (e-KYC) ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

​ಹಿಂದೆ ಇ-ಕೆವೈಸಿ ಮಾಡಿಸಿಕೊಂಡಿದ್ದ ರೈತರು ಕೂಡ ನಿಯಮಾನುಸಾರ ಮತ್ತೊಮ್ಮೆ ತಮ್ಮ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಿ ಪ್ರಕ್ರಿಯೆ ಮುಗಿಸಿಕೊಳ್ಳಬೇಕೆಂದು ಕೃಷಿ ಇಲಾಖೆ ಸೂಚಿಸಿದೆ. ಇ-ಕೆವೈಸಿ ಬಾಕಿ ಉಳಿಸಿಕೊಂಡರೆ ಮುಂಬರುವ ಕಂತಿನ ₹2,000 ಹಣ ಖಾತೆಗೆ ಜಮೆಯಾಗುವುದಿಲ್ಲ.

​ರಾಜ್ಯದಲ್ಲಿ 47 ಲಕ್ಷಕ್ಕೂ ಹೆಚ್ಚು ರೈತರ e-KYC ಬಾಕಿ!

​ಪ್ರಸ್ತುತ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಕೇವಲ 4,05,215 ರೈತರು ಮಾತ್ರ ಇ-ಕೆವೈಸಿ ಪೂರ್ಣಗೊಳಿಸಿದ್ದು, ಬರೋಬ್ಬರಿ 47,30,724 ರೈತರ ಇ-ಕೆವೈಸಿ ಇನ್ನೂ ಬಾಕಿ ಉಳಿದಿದೆ. ಇಷ್ಟು ದೊಡ್ಡ ಸಂಖ್ಯೆಯ ರೈತರು ಗಡುವಿನೊಳಗೆ ಪ್ರಕ್ರಿಯೆ ಮುಗಿಸದಿದ್ದರೆ ಮುಂದಿನ ಕಂತಿನಿಂದ ವಂಚಿತರಾಗುವ ಭೀತಿ ಎದುರಾಗಿದೆ.

​ಒಟಿಪಿ (OTP) ಆಧಾರಿತ ಇ-ಕೆವೈಸಿಗೆ ಬ್ರೇಕ್: ಕಾರಣವೇನು?:

​ಈ ಹಿಂದೆ ಮೊಬೈಲ್‌ಗೆ ಬರುವ ಆಧಾರ್ ಒಟಿಪಿ (OTP) ಮೂಲಕ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಮೃತಪಟ್ಟ ರೈತರ ಹೆಸರಿನಲ್ಲಿ ಅಥವಾ ಜಮೀನು ಮಾರಾಟವಾದ ಮೇಲೂ ಹಣ ಡ್ರಾ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಟಿಪಿ ವ್ಯವಸ್ಥೆಯನ್ನು ರದ್ದುಗೊಳಿಸಿದೆ.

​ಇದೀಗ ಕೇವಲ ಮುಖ ಚಹರೆ (Face Authentication) ಅಥವಾ ಸಮೀಪದ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಬೆರಳಚ್ಚು ನೀಡುವ ಮೂಲಕ ಮಾತ್ರ ಇ-ಕೆವೈಸಿ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

​ಸ್ಮಾರ್ಟ್‌ಫೋನ್‌ನಲ್ಲೇ ಕುಳಿತು e-KYC ಮಾಡುವ ವಿಧಾನ:

​ರೈತರು ಎಲ್ಲಿಗೂ ಅಲೆಯದೆ ತಮ್ಮ ಮೊಬೈಲ್‌ನಲ್ಲೇ 2 ನಿಮಿಷದಲ್ಲಿ ಫೇಸ್ ಸ್ಕ್ಯಾನ್ ಮೂಲಕ ಈ ಪ್ರಕ್ರಿಯೆ ಮುಗಿಸಬಹುದು:

  1. ​ಗೂಗಲ್ ಪ್ಲೇ ಸ್ಟೋರ್‌ನಿಂದ ಅಧಿಕೃತ PM-KISAN App ಹಾಗೂ ಯುಐಡಿಎಐನ Aadhaar FaceRD ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.
  2. ​ಪಿಎಂ ಕಿಸಾನ್ ಆ್ಯಪ್ ಓಪನ್ ಮಾಡಿ, ರೈತರ ಆಧಾರ್ ಸಂಖ್ಯೆಯನ್ನು ನಮೂದಿಸಿ.
  3. ​ಬಳಿಕ ಸ್ಕ್ರೀನ್ ಮೇಲೆ ಕಾಣಿಸುವ Face Authentication (ಫೇಸ್ ಸ್ಕ್ಯಾನ್) ಆಯ್ಕೆಯನ್ನು ಕ್ಲಿಕ್ ಮಾಡಿ.
  4. ​ಮೊಬೈಲ್‌ನ ಮುಂಭಾಗದ ಕ್ಯಾಮೆರಾ ಆನ್ ಆಗುತ್ತದೆ. ಬೆಳಕಿರುವ ಜಾಗದಲ್ಲಿ ನಿಂತು, ಕ್ಯಾಮೆರಾ ಎದುರು ಮುಖವನ್ನು ಸ್ಥಿರವಾಗಿಟ್ಟು ಕಣ್ಣುಗಳನ್ನು ಮಿಟುಕಿಸಿ (Blink).
  5. ​ಮುಖದ ಚಹರೆ ದೃಢಪಟ್ಟ ತಕ್ಷಣ ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.

​ಮೊಬೈಲ್‌ನಲ್ಲಿ ಸಾಧ್ಯವಾಗದಿದ್ದರೆ ಪರ್ಯಾಯ ಮಾರ್ಗ:

​ಸ್ಮಾರ್ಟ್‌ಫೋನ್ ಇಲ್ಲದ ಅಥವಾ ಮೊಬೈಲ್‌ನಲ್ಲಿ ಫೇಸ್ ಸ್ಕ್ಯಾನ್ ಮಾಡಲು ಬಾರದ ರೈತರು ತಕ್ಷಣವೇ ಸಮೀಪದ ರೈತ ಸಂಪರ್ಕ ಕೇಂದ್ರ (RSK), ಗ್ರಾಮ ಒನ್, ಕರ್ನಾಟಕ ಒನ್, ಅಥವಾ ಸಿಎಸ್‌ಸಿ (CSC) ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಬೆರಳಚ್ಚು ನೀಡುವ ಮೂಲಕ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳಬಹುದು.

Leave a Reply

Your email address will not be published. Required fields are marked *